Fact Check | ಮುಸ್ಲಿಂ ಮಹಿಳೆ ತನ್ನ ಮಾವನನ್ನು ಮದುವೆಯಾಗಲು ಬಯಸಿದ್ದಾಳೆ ಎಂದು ನಾಟಕೀಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಪತಿಯಿಂದ ವಿಚ್ಛೇದವನ್ನು ಪಡೆದ ನಂತರ ಮುಸ್ಲಿಂ ಮಹಿಳೆ ಒಬ್ಬರು ಬುರ್ಖಾ ಧರಿಸಿ ತನ್ನ ಮಾವನನ್ನೇ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಬರಿತ ಬರಹಗಳನ್ನು ಕೂಡ ಬರೆಯುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಕೂಡ ಬುರ್ಖಾ ಧರಿಸಿರುವ ಮಹಿಳೆಯೊಬ್ಬರು ತಾನು ತನ್ನ ಮಾವನನ್ನು ಮದುವೆಯಾಗುವ ಆಸೆ ಹೊಂದಿರುವುದಾಗಿ ಹೇಳುತ್ತಿರುವುದು ಕಂಡುಬಂದಿದೆ. ಹೀಗಾಗಿ ಇದನ್ನು ನಿಜವೆಂದು ಭಾವಿಸಿರುವ ಹಲವರು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಇನ್ನು ಹಲವು ಮಂದಿ ಈ ವಿಡಿಯೋ ಕುರಿತು ವಿವಿಧ ರೀತಿಯಾದ ಚರ್ಚೆಗಳನ್ನು ಕೂಡ ಮಾಡುತ್ತಿದ್ದಾರೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿತು. ಈ ವೇಳೆ ನಮಗೆ 28 ಏಪ್ರಿಲ್ 2025 ರಂದು ಅಶ್ವನಿ ಪಾಂಡೆ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ ಪೂರ್ಣ ವಿಡಿಯೋ ಕಂಡು ಬಂದಿದೆ. ಇದರ 5 ಸೆಕೆಂಡ್‌ ಟೈಮ್ ಸ್ಟ್ಯಾಂಪ್‌ನಲ್ಲಿ ವಿಡಿಯೋದಲ್ಲಿ ಇದು ಸಂಪೂರ್ಣ ಮನೋರಂಜನಾ ಉದ್ದೇಶಗಳಿಗಾಗಿ ಮಾಡಲ್ಪಟ್ಟಿದೆ ಎಂದು ಹೇಳುವ ಸೂಚನೆಯೊಂದು ಕಂಡುಬಂದಿದೆ. ಇದರ ಆಧಾರದ ಮೇಲೆ ವೈರಲ್ ವಿಡಿಯೋ ನಾಟಕ ಅಥವಾ ಪೂರ್ವ ನಿಯೋಜಿತ ಎಂಬುದು ನಮಗೆ ಖಚಿತವಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ಚಾನೆಲ್‌ಗೆ ಸಂಬಂಧಿಸಿದ ಫೇಸ್‌ಬುಕ್‌ ಪುಟವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಇದು ತಮಾಷೆಯ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಚಾನೆಲ್ ಆಗಿದ್ದು, ಇದರಲ್ಲಿ ಕಂಡುಬರುವ ವ್ಯಕ್ತಿಗಳು ಹಲವು ಸ್ಕ್ರಿಪ್ಟ್ ಮಾಡಿದ ನಾಟಕೀಯ ಅಥವಾ ಪೂರ್ವ ನಿಯೋಜಿತ ವಿಡಿಯೋಗಳಲ್ಲಿ ನಟಿಸಿರುವುದು ಕಂಡುಬಂದಿದೆ. ಈ ವಿಡಿಯೋಗಳನ್ನು ಕೂಡ ಸಾಕಷ್ಟು ಮಂದಿ ನಿಜವೆಂದು ಭಾವಿಸಿ, ಹಂಚಿಕೊಂಡಿರುವುದು ಕೂಡ ಕಂಡು ಬಂದಿದೆ. ಆದರೆ ಈ ಚಾನಲ್‌ನಲ್ಲಿ ಕಂಡು ಬರುವ ಎಲ್ಲಾ ವಿಡಿಯೋಗಳು ಕೂಡ ನಾಟಕೀಯ ವಿಡಿಯೋಗಳು ಆಗಿವೆ

ಒಟ್ಟಾರಿಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಮಾವನನ್ನೇ ಮದುವೆಯಾಗಲು ಬಯಸಿದ್ದಾಳೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ನಾಟಕೀಯ ವಿಡಿಯೋವಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ರಾಹುಲ್‌ ಗಾಂಧಿ ಜೊತೆ ಇರುವ ಮಹಿಳಾ ನಾಯಕಿಯರನ್ನು ಜ್ಯೋತಿ ಮೆಲ್ಹೋತ್ರಾ ಎಂದು ಸುಳ್ಳು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *