Fact Check | ಭಾರತದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಮುಸ್ಲಿಂ ವ್ಯಕ್ತಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು ಮತ್ತು ಒಬ್ಬ ವ್ಯಕ್ತಿ ಬಂದು ಅವನ ಗಡ್ಡವನ್ನು ಎಳೆದು ಹೊಡೆಯಲು ಪ್ರಾರಂಭಿಸುತ್ತಾನೆ. ಈ ವಿಡಿಯೋ ಹಂಚಿಕೊಂಡಿರುವ ಹಲವರು ಈ ಘಟನೆ ಭಾರತದಲ್ಲಿ ನಡೆದಿದೆ, ಹಲ್ಲೆ ಮಾಡಿದವರು ಹಿಂದೂ ವ್ಯಕ್ತಿ ಭಾರತದಲ್ಲಿ ಅಲ್ಪ ಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎಂದು ಭಾರತದ ವಿರುದ್ಧ ಹಲವು ಕಿಡಿಗೇಡಿಗಳು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ನಿಜವೆಂದು ಭಾವಿಸಿ ಹಲವು ವಿದೇಶಿ ಖಾತೆಗಳು ಹಂಚಿಕೊಂಡಿವೆ. ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಬಿಂಬಿಸಲು ಕೂಡ ಯತ್ನಿಸಿವೆ. ಹೀಗಾಗಿ ವಿಡಿಯೋ ಕೂಡ ವ್ಯಾಪಕವಾಗಿ ವೈರಲ್‌ ಆಗಿದ್ದು, ಇದು ಜನ ಸಾಮಾನ್ಯರಲ್ಲಿ ತೀವ್ರವಾದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವೆಬ್‌ಸೈಟ್ ‘ದೇಶ್ ಟಿವಿ’ಯಲ್ಲಿ 25 ಜೂನ್‌ 2025 ರಂದು ಪ್ರಕಟಗೊಂಡ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಈ ಪ್ರಕರಣ ಮಾಣಿಕ್‌ಗಂಜ್ ಜಿಲ್ಲೆಯ ಘಿಯೋರ್ ಉಪಜಿಲ್ಲಾ ಬಸ್ ನಿಲ್ದಾಣ ಪ್ರದೇಶದಿಂದ ಬಂದಿದೆ. ಕಂಪ್ಯೂಟರ್ ಉದ್ಯಮಿ ಅಲಿ ಅಜಮ್ ಮಾಣಿಕ್ ಅವರ ಮೇಲೆ ನಾಸಿಮ್ ಭೂಯಾನ್ ಎಂಬ ಗ್ರಾಹಕ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಘಿಯೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಜಮ್ ಮಾಣಿಕ್ ಘಿಯೋರ್ ಬಸ್ ನಿಲ್ದಾಣದಲ್ಲಿ “ಮಾಣಿಕ್ ಕಂಪ್ಯೂಟರ್” ಎಂಬ ಅಂಗಡಿಯನ್ನು ನಡೆಸುತ್ತಿದ್ದೇನೆ ಎಂದು ಸಂತ್ರಸ್ತ ಹೇಳಿದ್ದಾನೆ. ಆರೋಪಿ ನಾಸಿಮ್ ಭೂಯಾನ್ ಆಗಾಗ್ಗೆ ತನ್ನ ಅನೇಕ ಕೆಲಸಗಳಿಗಾಗಿ ಅಂಗಡಿಗೆ ಬರುತ್ತಿದ್ದನು ಮತ್ತು ಬಿಲ್ ಪಾವತಿಸದೆ ಹೋಗುತ್ತಿದ್ದನು. ಸಂತ್ರಸ್ತ  ಬಿಲ್ ಪಾವತಿಸಲು ಕೇಳಿದಾಗ, ಆರೋಪಿ ಬೆದರಿಕೆ ಹಾಕುತ್ತಿದ್ದನು ಮತ್ತು ಅಂಗಡಿಯನ್ನು ಮುಚ್ಚಿಸುವ ಬಗ್ಗೆ ಮಾತನಾಡುತ್ತಿದ್ದನು. ಎಂದು ಉಲ್ಲೇಖಿಸಲಾಗಿದೆ.

ಜೂನ್ 27, 2025 ರಂದು Ittefaq.com ವೆಬ್‌ಸೈಟ್‌ನಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ , “ವೀಡಿಯೊ ವೈರಲ್ ಆದ ನಂತರ, ಪೊಲೀಸರು ಕ್ರಮ ಕೈಗೊಂಡು ಆರೋಪಿ ನಾಸಿಮ್ ಭೂಯಾನ್ ಅವರನ್ನು ಬಂಧಿಸಿದರು. ವಾಸ್ತವವಾಗಿ, ಜೂನ್ 23 ರಂದು ರಾತ್ರಿ 9 ಗಂಟೆ ಸುಮಾರಿಗೆ, ನಾಸಿಮ್ ಭೂಯಾನ್ ಕೆಲವು ಜಮೀನಿನ ಕೆಲಸ ಮಾಡಲು ಅಂಗಡಿಗೆ ಹೋದಾಗ, ಅಜಮ್ ಮಾಣಿಕ್ ಅವರು ಇನ್ನೊಬ್ಬ ಗ್ರಾಹಕನಿಗೆ ಕೆಲಸ ಮಾಡುತ್ತಿದ್ದರಿಂದ ಕಾಯಲು ಹೇಳಿದರು. ಇದರಿಂದ ಕೋಪಗೊಂಡ ನಾಸಿಮ್ ಅವರ ಗಡ್ಡವನ್ನು ಹಿಡಿದು, ನಿಂದಿಸಿ, ಹೊಡೆದಿದ್ದಾನೆ ಎಂದು ಉಲ್ಲೇಖಿಸಲಾಗಿದೆ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಭಾರತದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಸುಳ್ಳು. ವೈರಲ್‌ ಆಗಿರುವ ವಿಡಿಯೋ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ. ಈ ವಿಡಿಯೋವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದೆ ಎಂದು ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ನಟ ಸಲ್ಮಾನ್ ಖಾನ್ ಆಸ್ಪತ್ರಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *