ಮಹಾರಾಷ್ಟ್ರದಲ್ಲಿ ಒಂದೆಡೆ ನವೆಂಬರ್ 20ರಂದು ಜನರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಿದ್ದರೆ, ಮತ್ತೊಂದೆಡೆ ಬುರ್ಖಾ ಮತ್ತು ಹಿಜಾಬ್ಗಳನ್ನು ಧರಿಸಿರುವ ಮಹಿಳೆಯರು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ಎರಡು ಚಿತ್ರಗಳನ್ನು ಹೊಂದಿರುವ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಎಕ್ಸ್ ಹ್ಯಾಂಡಲ್ನಲ್ಲಿ ಈ ಚಿತ್ರಗಳನ್ನು “ಮಹಾರಾಷ್ಟ್ರದಲ್ಲಿ ಆಗುತ್ತಿರುವ ‘ವೋಟ್ ಜಿಹಾದ್’ಗೆ ಸಾಕ್ಷಿ ಇದು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ” ಎಂದು ಹಿಂದೂ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಇದೇ ಫೋಟೋಗಳನ್ನು ಬಳಸಿ ಎಕ್ಸ್ನಲ್ಲಿ ಇತರೆ ಬಳಕೆದಾರರು ಹಂಚಿಕೊಳ್ಳುತ್ತಿದ್ದು, “ವೋಟ್ ಜಿಹಾದ್ ಪ್ರಾರಂಭವಾಗಿದೆ. ಹಿಂದೂಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಬೇಗ ಹೊರಗೆ ಬಂದು ಇದನ್ನು ನೋಡಿಯಾದರೂ ಸಾಧ್ಯವಾದಷ್ಟು ಮತ ಚಲಾಯಿಸಿ. ಇಲ್ಲದಿದರೆ ಮತ್ತೆ ವೋಟ್ ಜಿಹಾದ್ ಎಂಬ ಸ್ವಿಂಗ್ ಆರಂಭವಾಗುತ್ತದೆ, ಹಿಂದೂಗಳೇ, ನೀವು ಇನ್ನೂ ಮತ ಹಾಕದೇ ಇದ್ದರೆ ಬೇಗ ಬನ್ನಿ ಮತ್ತು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸಿ” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ.
"वोट जिहादला जोरात सुरुवात"
हिंदूंनो मतदान केले नसेल तर लवकर बाहेर येऊन जास्तीत जास्त मतदान करा
"वोट जिहाद की जोरो से शुरुवात"
हिंदुओ, अभी तक मतदान नही किए तो जल्दी उतरो और ज्यादा से ज्यादा संख्या में मतदान करो pic.twitter.com/04KQ0KT80I
— Mr.Chavan श्री.नयन चव्हाण (राष्ट्रहित सर्वोपरि) (@NChavanBharat) November 20, 2024
ಫ್ಯಾಕ್ಟ್ಚೆಕ್
ಮಹಾರಾಷ್ಟ್ರ ಚುನಾವಣೆಯಲ್ಲಿ ‘ವೋಟ್ ಜಿಹಾದ್’ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಎರಡೂ ಚಿತ್ರಗಳು 2019ರ ಫೋಟೋಗಳಾಗಿವೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲನೆ ನಡೆಸಿದೆ.
ವೈರಲ್ ಫೋಟೋದಲ್ಲಿರುವ ಮೊದಲ ಚಿತ್ರವನ್ನು 2019ರ ಅಕ್ಟೋಬರ್ 22ರಂದು ಮರಾಠಿ ಪತ್ರಿಕೆ ಲೋಕಮತ್ ವರದಿಯಲ್ಲಿ ಹಂಚಿಕೊಂಡಿದ್ದು, ಮಹಾರಾಷ್ಟ್ರ ವಿಧಾನಸಭಡ ಚುನಾವಣೆಯ ಮತದಾನದ ವೇಳೆ ನಾಗ್ಪುರದಲ್ಲಿ ಕ್ಲಿಕ್ಕಿಸಲಾಗಿದೆ. ಹಾಗೂ ಎರಡನೇಯ ಫೋಟೋ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್(ಬಿಬಿಸಿ) 2019ರ ಏಪ್ರಿಲ್ 3ರಂದು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣಾ ಮತದಾನದ ವೇಳೆ ಕ್ಲಿಕ್ಕಿಸಿದ್ದಾಗಿದೆ.
ವೈರಲ್ ಫೋಟೋದ ಮೊದಲ ಚಿತ್ರ:
ವೈರಲ್ ಫೋಟೋದಲ್ಲಿರುವ ಮೊದಲ ಫೋಟೋವನ್ನು ಬಳಸಿ Google ಲೆನ್ಸ್ ಹುಡುಕಾಟ ನಡೆಸಿದಾಗ ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಟಿಸಿದ ವರದಿಯಲ್ಲಿ ಇದೇ ದೃಶ್ಯವನ್ನು ಅಪ್ಲೋಡ್ ಮಾಡಿರುವುದನ್ನು ಕನ್ನಡ ಫ್ಯಾಕ್ಟ್ಚೆಕ್ ತಂಡವು ಗಮನಿಸಿದೆ. 2019ರ ಅಕ್ಟೋಬರ್ 25ರಂದು ಹಂಚಿಕೊಳ್ಳಲಾದ ಈ ವರದಿಯಲ್ಲಿ ಮಹಾರಾಷ್ಟ್ರದಲ್ಲಿ ಆಗ ನಡೆದ ವಿಧಾನಸಭಾ ಚುನಾವಣೆಗಳ ಕುರಿತು ಉಲ್ಲೇಖಿಸಿದೆ. ಚಿತ್ರದ ಶೀರ್ಷಿಕೆಯು ಸ್ಥಳವನ್ನು ನಾಗ್ಪುರ ಎಂದು ಗುರುತಿಸಿದ್ದು “ಸೋಮವಾರ ನಾಗ್ಪುರದ ಮತಗಟ್ಟೆಯಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಮಹಿಳೆಯರು ಮತ ಚಲಾಯಿಸಿದ ಸಂದರ್ಭ” ಎಂದು ಉಲ್ಲೇಖಿಸಿದೆ.

ಇದೇ ಚಿತ್ರವನ್ನು ಮತ್ತೊಮ್ಮೆ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ವಿಭಿನ್ನ ಕೋನದಿಂದ ತೆಗೆದ ಇದೇ ರೀತಿಯ ಫೋಟೋ ಲಭಿಸಿದ್ದು, 2019ರ ಅಕ್ಟೋಬರ್ 22ರಂದು ಮರಾಠಿ ಪತ್ರಿಕೆ ಲೋಕಮತ್ ವರದಿಯಲ್ಲಿ ಹಂಚಿಕೊಂಡಿದ್ದು, ಇದೂ ಕೂಡ ಸ್ಥಳವನ್ನು ನಾಗ್ಪುರ ಎಂದು ಗುರುತಿಸಿದೆ.

ವೈರಲ್ ಫೋಟೋದ ಎರಡನೆ ಚಿತ್ರ
Google ಲೆನ್ಸ್ ಹುಡುಕಾಟವನ್ನು ನಡೆಸಿದಾಗ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್(ಬಿಬಿಸಿ) ಇದೇ ಚಿತ್ರವನ್ನು ಪ್ರಕಟಿಸಿರುವುದನ್ನು ವರದಿಯಲ್ಲಿ ಕಂಡುಕೊಂಡಿದ್ದೇವೆ. 2019ರ ಏಪ್ರಿಲ್ 13ರಂದು ಪ್ರಕಟಿಸಲಾಗಿರುವ ಈ ವರದಿಯಲ್ಲಿ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣಾ ಮತದಾನದ ಕುರಿತು ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಡರಾತ್ರಿಯವರೆಗೆ ಮತದಾನ ಮುಂದುವರಿದಿದೆ ಎಂದು ಈ ವರದಿಯಲ್ಲಿ ಬೆಟ್ಟು ಮಾಡಿದೆ. ಈ ಚಿತ್ರದ ಸ್ಥಳವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ. ಆದರೆ, ಇದು 2019 ರಿಂದ ಆನ್ಲೈನ್ನಲ್ಲಿ ಲಭ್ಯವಿದ್ದು, ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ನಡೆದ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರ ಚುನಾವಣೆಯಲ್ಲಿ ‘ವೋಟ್ ಜಿಹಾದ್’ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಎರಡೂ ಚಿತ್ರಗಳು 2019ರ ಫೋಟೋಗಳಾಗಿವೆ. ಎರಡೂ ಫೋಟೋಗಳಯ 2019ರ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದ್ದು, ಪ್ರಚಲಿತ ನವೆಂಬರ್ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆಗೆ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮತ ಚಲಾಯಿಸುವ ಹಕ್ಕನ್ನು ಭಾರತದ ಸಂವಿಧಾನವು ನೀಡಿದ್ದು, ಚುನಾವಣಾ ಮತದಾನಕ್ಕೆ ಕೋಮು ಆಯಾಮ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಇದನ್ನು ಓದಿದ್ದೀರಾ? Fact Check: ಇಂಡಿಯಾ ಟುಡೇ ನಿಯತಕಾಲಿಕೆ ರಾಹುಲ್ ಗಾಂಧಿ ಕುರಿತ ಮುಖಪುಟ ವರದಿಗಳನ್ನು ಪ್ರಕಟಿಸಿಲ್ಲ

