ವ್ಯಕ್ತಿಯೊಬ್ಬ ಬೀದಿಯಲ್ಲಿ ಬಂದೂಕು ಹಿಡಿದು ನಿಂತು ನಿಂದಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಕಟ್ಟಡದ ಮೇಲಿರುವ ಯಾರನ್ನೋ ಕುರಿತು ನಿಂದಿಸಿದ್ದಾನೆ. ಆಗ ಆ ವ್ಯಕ್ತಿಯನ್ನು ವೃದ್ಧನೊಬ್ಬ ತಡೆಯಲು ಮುಂದಾಗುತ್ತಾನೆ. ಆದರೆ ಮತ್ತೊಬ್ಬ ವ್ಯಕ್ತಿ ಕಟ್ಟಡದ ಮೇಲಿದ್ದವರಿಗೆ ಕೋಲನ್ನು ಎಸೆದು ದಾಳಿ ಮಾಡಿದ್ದಾನೆ. ಮೀರತ್ನಲ್ಲಿ ಹಿಂದೂ ಕುಟುಂಬದ ಮನೆಯ ಮೇಲೆ ಮುಸ್ಲಿಂ ವ್ಯಕ್ತಿ ದಾಳಿ ಮಾಡಿದ್ದಾನೆ ಎಂದು ಈ ಘಟನೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಈ ಘಟನೆಯನ್ನು ಕುರಿತು ಹಲವಾರು ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ, 2024ರ ನವೆಂಬರ್ 07ರಂದು ಮೀರತ್ನ ಸರ್ದಾನದ ಕಮ್ರಾ ನವಾಬನ್ ಮೊಹಲ್ಲಾದಲ್ಲಿ ಕಾರು ಮತ್ತು ಬೈಕ್ ಸವಾರರ ನಡುವೆ ಪಾರ್ಕಿಂಗ್ ಕುರಿತು ವಿವಾದ ನಡೆದಿದ್ದು ಕಾರಿನ ಚಾಲಕನು ಯುವಕನನ್ನು ದೂರ ಹೋಗು ಎಂದು ಬೆದರಿಕೆ ಹಾಕಿ, ಬಳಿಕ ಆತನನ್ನು ಥಳಿಸಿ ಆತನ ಮನೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ನ ಪ್ರತಿಯು ಲಭ್ಯವಾಗಿದ್ದು, ಅದರಲ್ಲಿ ಆರೋಪಿ ಮತ್ತು ಥಳಿಸಲ್ಪಟ್ಟ ವ್ಯಕ್ತಿಗಳಿಬ್ಬರೂ ಮುಸ್ಲಿಮರು ಎಂದು ಉಲ್ಲೇಖವಾಗಿದೆ. ಹಾಗಾಗಿ ಯಾವುದೇ ಧಾರ್ಮಿಕ ಅಂಶವನ್ನು ಈ ಘಟನೆ ಒಳಗೊಂಡಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೀರತ್ನಲ್ಲಿ ಪಾರ್ಕಿಂಗ್ಗೆ ಸಂಬಂಧಿಸಿ ನಡೆದ ಘಟನೆಯ ವಿಡಿಯೋವನ್ನು ಸುಳ್ಳು ಕೋಮುವಾದಿ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check | ಬ್ರೆಜಿಲ್ನಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

