ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಆಯೋಜಿಸಲಾದ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧವಿಲ್ಲದ ಅನೇಕ ನಕಲಿ ಚಿತ್ರಗಳು ಮತ್ತು ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಸಂಖ್ಯಾತ ಜನರು ಏಕಕಾಲದಲ್ಲಿ ಬಲೂನ್ಗಳನ್ನು ಹಾರಿಸುವ ವಿಡಿಯೋ ಹರಿದಾಡುತ್ತಿದ್ದು, “ಪ್ರಯಾಗರಾಜ್ನಲ್ಲಿ ಏಕಕಾಲದಲ್ಲಿ ಒಂದು ಕೋಟಿ ಬಲೂನ್ಗಳನ್ನು ಹಾರಿಸಲಾಗಿದೆ” ಎಂದು ಹೇಳಿ ಹಂಚಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರಾದ ‘ಕನ್ಹಯ್ಯಾ ಕುಮಾರ್ ಝಾ’ ತಮ್ಮ ಹ್ಯಾಂಡಲ್ನಲ್ಲಿ ವೈರಲ್ ವಿಡಿಯೋವನ್ನು ಪೋಸ್ಟ್ ಮಾಡುತ್ತಾ, “ಪ್ರಯಾಗರಾಜ್ನಲ್ಲಿ ಏಕಕಾಲದಲ್ಲಿ ಒಂದು ಕೋಟಿ ಬಲೂನ್ಗಳನ್ನು ಹಾರಿ ಬಿಡಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಇದು ನಿಜವೆಂದು ಭಾವಿಸಿ, ಅನೇಕ ಬಳಕೆದಾರರು ಈ ವಿಡಿಯೋವನ್ನು ಇದೇ ರೀತಿಯ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಪೋಸ್ಟ್ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್ಚೆಕ್
ವೈರಲ್ ಆಗಿರುವ ವಿಡಿಯೋಗೂ ಮಹಾಕುಂಭಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲಿಸಿದೆ. ಮೂಲ ವೀಡಿಯೋ ಚೀನಾದಲ್ಲಿ ಹೊಸ ವರ್ಷದ ಆಚರಣೆಯ ವೇಳೆ ಚಿತ್ರಿಸಿದ್ದಾಗಿದೆ.
ವೈರಲ್ ಪೋಸ್ಟ್ನ ಸತ್ಯವನ್ನು ತಿಳಿಯಲು ವಿಡಿಯೋವನ್ನು ಸ್ಕ್ಯಾನ್ ಮಾಡಲಾಗಿದ್ದು, ಇದರಲ್ಲಿ ಚೈನೀಸ್ ಭಾಷೆಯಲ್ಲಿ ಬರೆದಿರುವುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಗಮನಿಸಿದೆ. ಗೂಗಲ್ ಟ್ರಾನ್ಸ್ಲೇಟ್ ಸಹಾಯದಿಂದ ಅನುವಾದಿಸಿದಾಗ ಹೊಸ ವರ್ಷದ ಶುಭಾಶಯಗಳು (ಹ್ಯಾಪಿ ನ್ಯೂ ಇಯರ್) ಎಂದು ಬರೆದಿರುವುದು ಕಂಡುಬಂದಿದೆ.
ಇದರ ನಂತರ ವಿಡಿಯೋದ ಹಲವಾರು ಕೀಫ್ರೇಮ್ಗಳನ್ನು ತೆಗೆದು ಗೂಗಲ್ ಲೆನ್ಸ್ ಟೂಲ್ ಮೂಲಕ ಹುಡುಕಾಟ ನಡೆಸಿದಾಗ, ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಇದರಲ್ಲಿ, ಜನವರಿ 1 ರಂದು sharing_delicacy ಎಂಬ ಹೆಸರಿನ Instagram ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ . ಹೊಸ ವರ್ಷ ಸಂಭ್ರಮಾಚರಣೆಯದ್ದು ಎಂದು ಹೇಳಲಾಗಿದ್ದು, ಇದು ಚೀನಾ ಆಧಾರಿತ ಹ್ಯಾಂಡಲ್ ಆಗಿದೆ. ಈ ಹ್ಯಾಂಡಲ್ನಲ್ಲೂ ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ.

ಇದಲ್ಲದೇ, ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿ, ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಬಲೂನ್ ಹಾರಾಟದಂತಹ ಘಟನೆ ನಡೆದಿದೆಯೇ ಎಂಬುದನ್ನು ತಿಳಿಯಲು ಹುಡುಕಾಟ ನಡೆಸಿದಾಗ, ವೈರಲ್ ಕ್ಲೈಮ್ ಅನ್ನು ದೃಢೀಕರಿಸುವ ಒಂದೇ ಒಂದು ಸುದ್ದಿ ನಮಗೆ ಕಂಡುಬಂದಿಲ್ಲ. ಒಂದು ವೇಳೆ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಬಲೂನ್ಗಳನ್ನು ಹಾರಿಸಲಾಗಿದ್ದರೆ ಅದು ಖಂಡಿತವಾಗಿಯೂ ವರದಿಯಾಗುತ್ತಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದಲ್ಲಿ ಹೊಸ ವರ್ಷಾಚರಣೆಯ ವೀಡಿಯೋವನ್ನು ಮಹಾಕುಂಭ ಮೇಳದ್ದು ಎಂದು ಹೇಳಿಕೊಂಡು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಮಹಾಕುಂಭ ಮೇಳದಲ್ಲಿ ಒಂದು ಕೋಟಿ ಬಲೂನ್ಗಳನ್ನು ಹಾರಿ ಬಿಡಲಾಗಿದೆ ಎಂಬುದು ಸುಳ್ಳು.

