ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಾದ ಕಾಲ್ತುಳಿತದಲ್ಲಿ 30 ಜನರು ಬಲಿಯಾಗಿದ್ದು, ಈ ದುರಂತದ ಬಳಿಕ, ಕ್ರಿಕೆಟಿಗ ವಿರಾಟ್ ಕೊಹ್ಲಿ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಇದಕ್ಕೆ ಸಂಬಂಧಿಸಿ, “ವಿರಾಟ್ ಕೊಹ್ಲಿ ಮಹಾಕುಂಭ ಮೇಳದಲ್ಲಾದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡವರ ಕುಟುಂಬಗಳಿಗೆ ₹2 ಕೋಟಿ ದೇಣಿಗೆ ನೀಡಿದ್ದಾರೆ” ಎಂಬ ಹಿಂದಿ ಸಂದೇಶದೊಂದಿಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ವೊಂದನ್ನು ಹರಿಬಿಡಲಾಗಿದೆ.
ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು( ಆರ್ಕೈವ್ ).
ಫ್ಯಾಕ್ಟ್ಚೆಕ್
ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ವಿರಾಟ್ ಕೊಹ್ಲಿ ₹2 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು.
ಈ ಬಗ್ಗೆ ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲನೆ ನಡೆಸಿದ್ದು, ಗೂಗಲ್ನಲ್ಲಿ ಕೀವರ್ಡ್ ಬಳಸಿ ಹುಡುಕಾಟ ನಡೆಸಿದಾಗ, ಮಹಾಕುಂಭದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಬಳಿಕ, ವಿರಾಟ್ ಕೊಹ್ಲಿ ಸಂತ್ರಸ್ತರಿಗೆ ಹಣಕಾಸಿನ ನೆರವು ನೀಡಿದ್ದಾರೆ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಲಭಿಸಿಲ್ಲ. ಒಂದು ವೇಳೇ ವಿರಾಟ್ ಕೊಹ್ಲಿ ಆರ್ಥಿಕ ಸಹಾಯ ನೀಡಿದ್ದೇ ಆಗಿದ್ದಲ್ಲಿ ಅದು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿತ್ತು.
ಇದೇ ವೇಳೆ, ವಿರಾಟ್ ಕೊಹ್ಲಿಯವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು( X ಮತ್ತು Instagram ) ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲಿಸಿದ್ದು ದೇಣಿಗೆ ನೀಡಿದ್ದಾರೆ ಎಂಬುದನ್ನು ದೃಢೀಕರಿಸುವ ಯಾವುದೇ ಪೋಸ್ಟ್ಗಳು ಅಥವಾ ಪ್ರಕಟಣೆಗಳು ನಮಗೆ ಲಭ್ಯವಾಗಿಲ್ಲ.
Special win. Thank you to all our fans for turning up in numbers. 🇮🇳💙 pic.twitter.com/hAcbuYGa1H
— Virat Kohli (@imVkohli) October 23, 2022
ಮಹಾಕುಂಭ ಮೇಳದ ಕಾಲ್ತುಳಿತದ ಬಳಿಕ ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತರಿಗೆ ₹ 25 ಲಕ್ಷ ಪರಿಹಾರವನ್ನು ಘೋಷಿಸಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಲಭ್ಯವಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಸಂತ್ರಸ್ತರ ಕುಟುಂಬಗಳಿಗೆ ಕೊಹ್ಲಿ ಹಣಕಾಸಿನ ನೆರವು ನೀಡಿದ್ದಾರೆ ಎಂಬುದು ಸುಳ್ಳು. ಈ ಬಗ್ಗೆ ಕಟ್ಟುಕತೆಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ : FACT CHECK | ಪ್ರಯಾಗರಾಜ್ನ ಮಹಾಕುಂಭ ಮೇಳದಲ್ಲಿ ನೆರೆದ ಭಾರೀ ಜನಸಮೂಹ ಎಂದು ಅಯೋಧ್ಯೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

