ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ‘ವೈರಲ್ ಭೋಜ್ಪುರಿ’ ಎಂಬ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಳ್ಳಲಾದ ಈ ಪೋಸ್ಟ್ನಲ್ಲಿ, 10,000 ರೂಪಾಯಿಯ ನಾಣ್ಯದ ಚಿತ್ರವನ್ನು ತೋರಿಸಲಾಗಿದ್ದು, ಇದನ್ನು ಆರ್ಬಿಐ ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಪೋಸ್ಟ್ನಲ್ಲಿ ಜನರಿಗೆ ಈ ನಾಣ್ಯದ ಬಗ್ಗೆ ಒಪ್ಪಿಗೆಯನ್ನು ಕೇಳಲಾಗಿದೆ, ಇದರಿಂದಾಗಿ ಜನಸಾಮಾನ್ಯರಲ್ಲಿ ಗೊಂದಲ ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ.

ಈ ವೈರಲ್ ಪೋಸ್ಟ್ ಜನರಲ್ಲಿ ಆರ್ಬಿಐ ಹೊಸ ನಾಣ್ಯವನ್ನು ನಿಜವಾಗಿಯೂ ಬಿಡುಗಡೆ ಮಾಡುತ್ತಿದೆ ಎಂಬ ತಪ್ಪು ಗ್ರಹಿಕೆಯನ್ನು ಸೃಷ್ಟಿಸಿದೆ. ಕೆಲವರು ಈ ನಾಣ್ಯವನ್ನು ಒಪ್ಪಿಕೊಳ್ಳಬೇಕೆ ಅಥವಾ ಇದು ಕಾನೂನುಬದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ, ಆದರೆ ಇದರಿಂದ ಜನರಲ್ಲಿ ಗೊಂದಲ ಮತ್ತು ಅನುಮಾನಗಳು ಹೆಚ್ಚಾಗಿವೆ. ಹಲವರು RBI ಇಷ್ಟ ಬಂದ ಹಾಗೆ ನಾಣ್ಯ ಮುದ್ರಿಸುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
इंडिया में अब 10000 दस हज़ार का सिक्का लंच हो रहा है इस सिक्के से कितना लोग सहमत है pic.twitter.com/svqLNLlf6P
— Yadav (@ShivSha63399575) June 2, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದವು. ಈ ವೇಳೆ ನಮಗೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ ನಿಜವಾಗಿದ್ದರೆ ಆ ಕುರಿತು ಹಲವು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಹೀಗಾಗಿ ನಮಗೆ 10 ಸಾವಿರ ರೂ ನಾಣ್ಯದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡವು

ಹೀಗಾಗಿ ನಾವು ನಾವು ಆರ್ಬಿಐ ವೆಬ್ಸೈಟ್ನಲ್ಲಿ ಹುಡುಕಿದೆವು. ಅಲ್ಲಿಯೂ ನಮಗೆ ಅಂತಹ ಯಾವುದೇ ಮಾಹಿತಿ ಸಿಗಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಾರ್ಷಿಕ ವರದಿಯಲ್ಲಿ, ಬ್ಯಾಂಕ್ ಈಗ ಎರಡು, ಐದು ಮತ್ತು 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಚಲಾವಣೆಯಲ್ಲಿರುವ ನಾಣ್ಯಗಳಲ್ಲಿ 50 ಪೈಸೆ, ಒಂದು ರೂಪಾಯಿ, 2 ರೂಪಾಯಿ, ಐದು ರೂಪಾಯಿ, 10 ಮತ್ತು 20 ರೂಪಾಯಿ ನಾಣ್ಯಗಳು ಸೇರಿವೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ.

ಆರ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ನೋಯ್ಡಾದಲ್ಲಿರುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್ಪಿಎಂಸಿಐಎಲ್) ನ ನಾಲ್ಕು ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಇದಾದ ನಂತರ, ಈ ನಾಣ್ಯಗಳನ್ನು ಆರ್ಬಿಐ ಬಿಡುಗಡೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಇದಾದ ನಂತರ, ನಾವು ವೈರಲ್ ಪೋಸ್ಟ್ನಲ್ಲಿರುವ 10,000 ರೂ. ನಾಣ್ಯದ ವೈರಲ್ ಚಿತ್ರವನ್ನು ಹೈವ್ ಮಾಡರೇಷನ್ AI ಫೋಟೋ ಪತ್ತೆಹಚ್ಚುವ ವೆಬ್ಸೈಟ್ನಲ್ಲಿ ಪರಿಶೀಲಿಸೆದೆವು. ಈ ವೇಳೆ ನಮಗೆ ವೈರಲ್ ಫೋಟೋವನ್ನು ಶೇ.99.9 ರಷ್ಟು AI ಬಳಸಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ವೈರಲ್ ಫೋಟೋ ಕೂಡ ನಿಜವಲ್ಲ, ಇದನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರ ಈಗ 10,000 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ ಎಂಬುದು ಸುಳ್ಳಾಗಿದೆ. ಈ ಕುರಿತು RBI ಹಾಗೂ ಯಾವುದೇ ಮಾಧ್ಯಮಗಳಲ್ಲಿ ಕೂಡ ಮಾಹಿತಿ ಲಭ್ಯವಾಗಿಲ್ಲ. ವೈರಲ್ ಪೋಸ್ಟ್ನಲ್ಲಿರುವ ಫೋಟೋವನ್ನು AI ಬಳಸಿ ನಿರ್ಮಿಸಲಾಗಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | 2025 ರ ಅಸ್ಸಾಂ ಪ್ರವಾಹದ ದೃಶ್ಯಗಳು ಎಂದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

