ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, ಅಮೇರಿಕಾದಲ್ಲಿ ಹೊಸ ವರ್ಷ ಆಚರಿಸುತ್ತಿದ್ದವರ ಮೇಲೆ ಟ್ರಕ್ ದಾಳಿ ನಡೆಸಿದಾತ ಜೈ ಶ್ರೀರಾಮ್ ಕೂಗಿದ್ದಾನೆ ಎಂದು ಪೋಸ್ಟ್ ಮಾಡಲಾಗಿದ್ದು, “#ಭಾರತೀಯ ಅಮೇರಿಕನ್ ವ್ಯಕ್ತಿಯೊಬ್ಬ #NewYear ರಂದು USAನ ನ್ಯೂ ಓರ್ಲಿಯನ್ಸ್ನಲ್ಲಿ ಜನಸಂದಣಿಯ ಮೇಲೆ ಕಾರನ್ನು ಹರಿಸಿದ್ದಾನೆ. ಆರಂಭಿಕ ವರದಿಗಳ ಪ್ರಕಾರ, ಈ ವ್ಯಕ್ತಿ ‘ಜೈ ಶ್ರೀ ರಾಮ್’ ಎಂದು ಕೂಗಿದ್ದು ನಂತರ ತನ್ನ ಕಾರನ್ನು ಸ್ಫೋಟಿಸಿದ್ದಾನೆ. ಇದರಿಂದಾಗಿ 10 ಜನರು ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಕಾನೂನು ಜಾರಿಯಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಈ ಭಯೋತ್ಪಾದಕನು ಕೊಲ್ಲಲ್ಪಟ್ಟನು” ಎಂದು ಹಂಚಿಕೊಳ್ಳುತ್ತಿದ್ದಾರೆ. ಹಂಚಿಕೊಂಡಿರುವ ಚಿತ್ರವು ರಸ್ತೆಯಲ್ಲಿ ಪಿಕಪ್ ಟ್ರಕ್ನ ಹತ್ತಿರ ಸತ್ತು ಬಿದ್ದಿರುವ ವ್ಯಕ್ತಿಯನ್ನು ತೋರಿಸುತ್ತದೆ.

ಫ್ಯಾಕ್ಟ್ಚೆಕ್
ಅಮೇರಿಕಾದಲ್ಲಿ ಹೊಸ ವರ್ಷ ಆಚರಿಸುತ್ತಿದ್ದವರ ಮೇಲೆ ಟ್ರಕ್ ದಾಳಿ ನಡೆಸಿದಾತ ಜೈ ಶ್ರೀರಾಮ್ ಕೂಗಿದ್ದಾನೆ ಎಂಬುದು ಸುಳ್ಳು ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪತ್ತೆ ಹಚ್ಚಿದೆ.
2025ರ ಜನವರಿ 01ರಂದು, ನ್ಯೂ ಓರ್ಲಿಯನ್ಸ್ನ ಬೌರ್ಬನ್ ಸ್ಟ್ರೀಟ್ನಲ್ಲಿ ಬಾಡಿಗೆಗೆ ಪಡೆದ ಫೋರ್ಡ್ ಪಿಕಪ್ ಟ್ರಕ್ ಅನ್ನು ಜನಸಂದಣಿಯ ಮೇಲೆ ಅತಿವೇಗವಾಗಿ ಹರಿಸಿದ ಪರಿಣಾಮವಾಗಿ 15ಜನರು ಸಾವನ್ನಪ್ಪಿದರು ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡರು. ಎಫ್ಬಿಐ ಶಂಕಿತನನ್ನು 42 ವರ್ಷದ ಶಮ್ಸುದ್ದೀನ್ ಜಬ್ಬಾರ್ ಎಂದು ಗುರುತಿಸಿದೆ, ಟೆಕ್ಸಾಸ್ ಮೂಲದ ಅಮೇರಿಕನ್ ಪ್ರಜೆ ಮತ್ತು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಸೇನಾ ಅನುಭವಿ ಎಂದು ಗುರುತಿಸಲಾಗಿದೆ.
ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ 2025ರ ಜನವರಿ 2ರಂದು ಪ್ರಕಟವಾದ ‘ನ್ಯೂ ಓರ್ಲಿಯನ್ಸ್ ದಾಳಿಯ ಶಂಕಿತ ಶಂಸುದ್ದೀನ್ ಜಬ್ಬಾರ್ ಬಗ್ಗೆ ನಮಗೆ ಎಷ್ಟು ಗೊತ್ತು’ ಎಂಬ ಶೀರ್ಷಿಕೆಯಲ್ಲಿ ಯಾಹೂ ನ್ಯೂಸ್ ವರದಿಯು ನಮಗೆ ಲಭಿಸಿದೆ.

ಅದೇ ಫೋಟೋದ ಮಸುಕಾದ ಆವೃತ್ತಿಯನ್ನು ವರದಿಯಲ್ಲಿ ಪ್ರಕಟಿಸಲಾಗಿದೆ, ಮೃತ ಶಂಕಿತ ವ್ಯಕ್ತಿ 2025ರ ಜನವರಿ 1ರಂದು ನ್ಯೂ ಓರ್ಲಿಯನ್ಸ್ ದಾಳಿಯಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ, ದಾಳಿಯ ಸಂದರ್ಭದಲ್ಲಿ ಆತ ಭಾರತೀಯ ಅಮೆರಿಕನ್ ಅಥವಾ ಜೈ ಶ್ರೀ ರಾಮ್ ಎಂದು ಕೂಗಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ವರದಿಯ ಪ್ರಕಾರ, ನ್ಯೂ ಓರ್ಲಿಯನ್ಸ್ನಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ವೇಳೆ ಮಾರಣಾಂತಿಕ ದಾಳಿ ನಡೆಸಿದ ಶಂಕಿತನನ್ನು ಎಫ್ಬಿಐ ‘ಶಮ್ಸುದ್ದೀನ್ ಜಬ್ಬಾರ್, 42 ವರ್ಷದ ಅಮೇರಿಕನ್ ಪ್ರಜೆ, ಟೆಕ್ಸಾಸ್ ನಿವಾಸಿ ಹಾಗೂ ಯುಎಸ್ ಆರ್ಮಿ ಅನುಭವಿ’ ಎಂದು ಗುರುತಿಸಿದ್ದಾಗಿ ಉಲ್ಲೇಖಿಸಿದೆ.
ಬುಧವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಫೋರ್ಡ್ ಪಿಕಪ್ ಟ್ರಕ್ ಅನ್ನು ಬೌರ್ಬನ್ ಸ್ಟ್ರೀಟ್ನಲ್ಲಿ ಜನಸಂದಣಿಯತ್ತ ವೇಗವಾಗಿ ನುಗ್ಗಿಸಿದ್ದನು ಮತ್ತು ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಎರಡು ಡಜನ್ಗಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದರು.
2025ರ ಜನವರಿ 1ರಂದು, ‘ನ್ಯೂ ಓರ್ಲಿಯನ್ಸ್ ದಾಳಿಯಲ್ಲಿ ಏಕ ವ್ಯಕ್ತಿಯ ಪಾತ್ರವಿಲ್ಲ. ಇದರ ಹಿಂದೆ ಯಾರೋ ಇದ್ದಾರೆ ಎಂದು FBI ನಂಬುತ್ತದೆ ಎಂಬ ಶೀರ್ಷಿಕೆಯ BBC ಯ ವರದಿಯನ್ನು ನಾವು ಕಂಡುಕೊಂಡಿದ್ದೇವೆ.

ವರದಿಯ ಪ್ರಕಾರ, ಶಂಸುದ್ದೀನ್ ಜಬ್ಬಾರ್, ಟೆಕ್ಸಾಸ್ ನಿವಾಸಿ ಮಾಜಿ US ಆರ್ಮಿ ಸೈನಿಕನಾಗಿದ್ದನು, ಈ ಹಿಂದೆ ತನ್ನ ಮಿಲಿಟರಿ ವೃತ್ತಿಜೀವನದಲ್ಲಿ ಮಾನವ ಸಂಪನ್ಮೂಲ ಮತ್ತು ಐಟಿಯಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದನು ಎಂಬುದು ಈಗ ಡಿಳಿಟ್ ಮಾಡಲಾಗಿರುವ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ತಿಳಿದು ಬಂದಿದೆ. ವರದಿಯ ಪ್ರಕಾರ ಜಬ್ಬಾರ್ 2017ರಲ್ಲಿ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಕಂಪ್ಯೂಟರ್ ಮಾಹಿತಿ ವ್ಯವಸ್ಥೆಯಲ್ಲಿ ಪದವಿ ಪಡೆದಿದ್ದನು ಎಂದು ತಿಳಿದು ಬಂದಿದೆ.
ಹೀಗಾಗಿ, ಇತನಿಗೆ ಭಾರತದೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ.
ಜಬ್ಬಾರ್ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದನು ಮತ್ತು ಇದರ ಪರವಾನಗಿಯು 2021ರಲ್ಲಿ ಮುಗಿದು ಹೋಗಿದೆ. ಇದಲ್ಲದೇ, ಸಂಚಾರ ಅಪರಾಧಗಳು ಮತ್ತು ಕಳ್ಳತನ ಸೇರಿದಂತೆ ಕ್ರಿಮಿನಲ್ ಹಿನ್ನೆಲೆ ಇರುವುದು ತಿಳಿದು ಬಂದಿದೆ.
“ಆತ ಚಾಲನೆ ಮಾಡುತ್ತಿದ್ದ ವಾಹನದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ಧ್ವಜ ಕಂಡುಬಂದಿದೆ ಎಂದು ಎಫ್ಬಿಐ ಹೇಳುತ್ತದೆ. ಅಲ್ಲದೇ, ಸಮೀಪದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಕಂಡುಬಂದಿವೆ” ಎಂದು ಬಿಬಿಸಿ ವರದಿ ಹೇಳಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯು ಶಂಕಿತನ ಕಿರಿಯ ಸಹೋದರನನ್ನು ಉಲ್ಲೇಖಿಸಿದ್ದು, “ಅವರ ಕುಟುಂಬವು ಕ್ರಿಶ್ಚಿಯನ್ ಆಗಿ ಬೆಳೆದಿತ್ತು, ಅವರ ಸಹೋದರ ಹಲವು ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ, ತನ್ನ ಸಹೋದರ ಮಾಡಿದ ಅಪರಾಧವು ಇಸ್ಲಾಂ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಬದಲಾಗಿ ಇದು ತೀವ್ರಗಾಮಿ ನಡೆಯಾಗಿದೆ” ಎಂದು ಪತ್ರಿಕೆಗೆ ತಿಳಿಸಿದ್ದಾಗಿ ವರದಿ ಮಾಡಿದೆ. ಇದೇ ವೇಳೇ ಹತ್ಯೆಗೀಡಾದ ಶಂಸುದ್ದೀನ್ ಕೌಟುಂಬಿಕ ಸದಸ್ಯರನ್ನೂ ಕೊಲ್ಲುವುದಾಗಿ ವಿಡಿಯೋ ಮಾಡಿದ್ದನು ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕಾದಲ್ಲಿ ಹೊಸ ವರ್ಷ ಆಚರಿಸುತ್ತಿದ್ದವರ ಮೇಲೆ ಟ್ರಕ್ ದಾಳಿ ನಡೆಸಿದಾತ ಜೈ ಶ್ರೀರಾಮ್ ಕೂಗಿದ್ದಾನೆ ಎಂಬುದು ಸುಳ್ಳು ಈ ಬಗ್ಗೆ ಯಾವುದೇ ವರದಿಗಳು ಲಭ್ಯವಿಲ್ಲ. ಹಂತಕ ಅಮೇರಿಕನ್ ಪ್ರಜೆಯಾಗಿದ್ದು, ಭಾರತ ಅಥವಾ ಹಿಂದೂ ಧರ್ಮದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.
ಇದನ್ನು ಓದಿದದ್ದೀರಾ? : Fact Check | ಯಮುನಾ ನದಿಯ ಶುದ್ಧೀಕರಣದ ಕುರಿತು ಅರವಿಂದ್ ಕೇಜ್ರಿವಾಲ್ ಹೇಳಿಕೆಯ ಎಡಿಟೆಡ್ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

