ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಈ ಹೇಳಿಕೆಯ ಪ್ರಕಾರ, “ಆಪರೇಷನ್ ಸಿಂಧೂರ್ನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಭಾರತಕ್ಕೆ ಜಾಗತಿಕ ಮುಜುಗರ ಮತ್ತು ದೇಶದಲ್ಲಿ ರಾಜಕೀಯ ಕಂಪನಕ್ಕೆ ಕೂಡ ಇದು ಕಾರಣವಾಗಿದೆ, ಇದರಿಂದಾಗಿ ಜಗದೀಪ್ ಧನಕರ್ ಸ್ವಪಕ್ಷದ ವಿರುದ್ಧ ಅಸಮಾಧಾನವನ್ನು ಹೊಂದಿದ್ದರು, ಹೀಗಾಗಿ ವಿಪಕ್ಷಗಳಿಗೆ ಈ ಕುರಿತು ಸಂಸತ್ತಿನಲ್ಲಿ ಹೆಚ್ಚು ಅವಧಿಗಳ ಕಾಲ ಚರ್ಚಿಸಲು ಅವಕಾಶ ನೀಡಿದ್ದರು, ಇದರಿಂದ ಅವರ ಪಕ್ಷವೇ ಧನಕರ್ ಅವರ ರಾಜೀನಾಮೆಗೆ ಒತ್ತಾಯಿಸಿತು” ಎಂದು ಆರೋಪಿಸಲಾಗಿದೆ.

ಕೆಲ ವಿಪಕ್ಷ ನಾಯಕರು ಕೂಡ ಅಪರೇಷನ್ ಸಿಂಧೂರ್ ಕುರಿತು ಕೊಂಚ ಹೆಚ್ಚು ಅವಧಿ ಚರ್ಚೆಗೆ ಧನಕರ್ ಅವರು ಅವಕಾಶ ನೀಡಿದ್ದರು, ಇದು ಕೇಂದ್ರ ಸರ್ಕಾರಕ್ಕೆ ಕಸಿವಿಸಿ ಉಂಟು ಮಾಡಿದೆ. ಈ ನಡುವೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜಿನಾಮೆ ನೀಡಿರುವುದು ಅನುಮಾನ ಮೂಡಿಸಿದೆ ಎಂದು ಬರೆದುಕೊಂಡಿದ್ದಾರೆ. ಇದೇ ಅನುಮಾನವನ್ನು ವ್ಯಕ್ತ ಪಡಿಸಿ ಕೆಲ ಮಾಧ್ಯಮಗಳು ಕೂಡ ವರದಿಯನ್ನು ಮಾಡಿವೆ. ಹೀಗಾಗಿ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತವಿಶ್ವಾಸಾರ್ಹ ಮೂಲಗಳಾದ PIB, India Today, The Hindu, ಮತ್ತು ಜಗದೀಪ್ ಧನಕರ್ ಅವರ ಅಧಿಕೃತ ಎಕ್ಸ್ ಖಾತೆಯನ್ನು ಪರಿಶೀಲಿಸಿದೆವು. ಧನಕರ್ ಅವರು ಜುಲೈ 21, 2025 ರಂದು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಆರೋಗ್ಯ ಕಾರಣಗಳಿಂದ ರಾಜೀನಾಮೆ ನೀಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಅವರನ್ನು ತೆಗೆದು ಹಾಕಿದೆಯೇ ಎಂದು ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ ಭಾರತೀಯ ಸಂವಿಧಾನದ 67 (ಬಿ) ವಿಧಿಯ ಪ್ರಕಾರ, ಉಪರಾಷ್ಟ್ರಪತಿಯನ್ನು ರಾಜ್ಯಸಭೆಯಲ್ಲಿ ಬಹುಮತದಿಂದ ಮತ್ತು ಲೋಕಸಭೆಯ ಅನುಮೋದನೆಯಿಂದ ತೆಗೆದುಹಾಕಬೇಕೆ ಹೊರತು ಕೇಂದ್ರ ಸರ್ಕಾರವೇ ಏಕಪಕ್ಷೀಯವಾಗಿ ತೆಗೆದು ಹಾಕಲು ಸಾಧ್ಯವಿಲ್ಲ.

ಜಗದೀಪ್ ಧನಕರ್ ಅವರು ಜುಲೈ 21, 2025 ರಂದು ಆರೋಗ್ಯ ಕಾರಣಗಳಿಂದ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ರಾಜೀನಾಮೆಯು ಸಂವಿಧಾನದ 67 (ಎ) ವಿಧಿಯ ಅಡಿಯಲ್ಲಿ ಸ್ವಯಂಪ್ರೇರಿತವಾಗಿದ್ದು, ಯಾವುದೇ ಬಲವಂತದ ಹೊರಹಾಕುವಿಕೆ ಇಲ್ಲ. ಆಪರೇಷನ್ ಸಿಂದೂರ್ ಒಂದು ಯಶಸ್ವಿ ಕಾರ್ಯಾಚರಣೆಯಾಗಿದ್ದು, ಇದು ಭಾರತದ ಸ್ವಾವಲಂಬಿ ರಕ್ಷಣಾ ತಂತ್ರಜ್ಞಾನದ ಯಶಸ್ಸನ್ನು ತೋರಿಸುತ್ತದೆ. ಈ ಕಾರ್ಯಾಚರಣೆಯನ್ನು ಧನಕರ್ ಸೇರಿದಂತೆ ಹಲವು ನಾಯಕರು ಶ್ಲಾಘಿಸಿದ್ದಾರೆ. ಹಾಗಾಗಿ ಇಲ್ಲಿ ಆಪರೇಷನ್ ಸಿಂಧೂರ್ ವೈಫಲ್ಯ ಅನುಭವಿಸಿದೆ ಎಂಬುದು ಕೂಡ ಶುದ್ಧ ಸುಳ್ಳಾಗಿದೆ ಮತ್ತು ಆಪರೇಷನ್ ಸಿಂಧೂರ್ ಕುರಿತು ಜಗದೀಪ್ ಧನಕರ್ ಅವರಿಗೆ ಅಸಮಾಧಾನ ಇತ್ತು ಎಂಬುದು ಕೂಡ ಸುಳ್ಳಾಗಿದೆ.


ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಆಪರೇಷನ್ ಸಿಂಧೂರ್ನ ಕುರಿತು ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಜಗದೀಪ್ ಧನಕರ್ ಅಸಮಾಧಾನವನ್ನು ಹೊಂದಿದ್ದರು, ಇದಕ್ಕಾಗಿ ಕೇಂದ್ರ ಸರ್ಕಾರ ಜಗದೀಪ್ ಧನಕರ್ ಅವರಿಂದ ರಾಜಿನಾಮೆಯನ್ನು ಪಡೆದುಕೊಂಡಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಉನ್ನಾವೋದಲ್ಲಿ ಯುವತಿಗೆ ಕಿರುಕುಳ ನೀಡಿ ಏಟು ತಿಂದ ಯುವಕ ಮುಸ್ಲಿಂ ಸಮುದಾಯದವನಲ್ಲ

