ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ 35ಕ್ಕೂ ಹೆಚ್ಚು ಅವಿವಾಹಿತ ಹುಡುಗಿಯರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಈ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವ ಜನರು ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಒಂದೆಡೆ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಶೀರ್ಷಿಕೆಯನ್ನು ಓದಿದ ಜನರು ಈ ವರದಿಯ ಬಗ್ಗೆ ಆಘಾತ ವ್ಯಕ್ತಪಡಿಸುತ್ತಿದ್ದರೆ; ಮತ್ತೊಂದೆಡೆ ಸತ್ಯವನ್ನು ಪರಿಶೀಲಿಸದೇ ಸಾಮಾಜಿಕ ಜಾಲತಾಣದಲ್ಲಿ ಕೋಮು ಆಯಾಮವನ್ನು ನೀಡಿ ಇದರಲ್ಲಿ ಯಾರದೋ ಕೈವಾಡ ಇದೆ ಎಂದು ಶಂಕಿಸಿದ್ದಲ್ಲದೇ, ಬಾಲಕಿಯರ ಚಾರಿತ್ರ್ಯ ಹನನ ಮಾಡುವ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.
https://youtu.be/JHgT7psXGDw?si=R7ypKb15AcEdBLcc
ಉತ್ತರ ಪ್ರದೇಶದ ವಾರಣಾಸಿಯ ರಾಮನಾ ಗ್ರಾಮ ಪಂಚಾಯಿತಿಯ ಮಲ್ಹಿಯಾ ಗ್ರಾಮದಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಆದರೆ 35ಕ್ಕೂ ಹೆಚ್ಚು ಅವಿವಾಹಿತ ಹುಡುಗಿಯರು ನಿಜಕ್ಕೂ ಗರ್ಭಿಣಿಯಾಗಿದ್ದಾರೆ ಎಂಬ ಬಗ್ಗೆ ಕನ್ನಡ ಫ್ಯಾಕ್ಟ್ ಚೆಕ್ ತಂಡವು ಪರಿಶೀಲನೆ ನಡೆಸಿದೆ.
ಫ್ಯಾಕ್ಟ್ ಚೆಕ್
35ಕ್ಕೂ ಹೆಚ್ಚು ಅವಿವಾಹಿತ ಹುಡುಗಿಯರು ಗರ್ಭಿಣಿಯರಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂಬುದನ್ನು ಕನ್ನಡ ಫ್ಯಾಕ್ಟ್ಚೆಕ್ ತಂಡವು ಪತ್ತೆ ಹಚ್ಚಿದೆ.
ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಿಸಲು ಬಾಲಕಿಯರು ಅಂಗನವಾಡಿ ಕಾರ್ಯಕರ್ತೆಗೆ ತಮ್ಮ ಆಧಾರ್ ಕಾರ್ಡ್ನ್ನು ನೀಡಿದ್ದರು. ಆದರೆ, ಅಂಗನವಾಡಿ ಕಾರ್ಯಕರ್ತೆಯ ಪ್ರಮಾದದಿಂದಾಗಿ ವೋಟರ್ ಐಡಿ ಅರ್ಜಿ ಭರ್ತಿ ಮಾಡುವ ಫಾರ್ಮ್ ೬ರನ್ನು ತುಂಬುವ ಬದಲು ಗರ್ಭಿಣಿ ಮತ್ತು ಬಾಣಂತಿಯರ ನೋಂದಣಿಯಲ್ಲಿ ಸೇರ್ಪಡೆಯಾಗಿತ್ತು. ಈ ಬಗ್ಗೆ ಮುಖ್ಯ ಅಭಿವೃದ್ಧಿ ಅಧಿಕಾರಿ ಹಿಮಾಂಶು ನಾಗ್ಪಾಲ್ ಮಾಹಿತಿ ನೀಡಿದ್ದು, ಅಧಿಕಾರಿಗಳ ಪ್ರಮಾದದಿಂದಾಗಿ ಇದು ಸಂಭವಿಸಿದ್ದು, ಬಾಲಕಿಯರ ಹೆಸರನ್ನು ಪೌಷ್ಟಿಕಾಂಶ ಟ್ರ್ಯಾಕರ್ನಿಂದ ತೆಗೆದು ಹಾಕಲಾಗಿದೆ ಎಂದು ಹೇಳಿದ್ದಾರೆ.

ದೀಪಾವಳಿಯ ದಿನ ರಾತ್ರಿ ನಲವತ್ತಕ್ಕೂ ಹೆಚ್ಚು ಬಾಲಕಿಯರ ಹೆಸರಿನಲ್ಲಿ ನೀವು ಗರ್ಭಿಣಿಯಾಗಿದ್ದೀರಾ ಎಂಬ ಹೆಸರಿನೊಂದಿಗೆ ಮೊಬೈಲ್ಗೆ ಸಂದೇಶ ಬಂದಿತ್ತು. ಇದರಿಂದ ಹೌಹಾರಿದ ಹೆತ್ತವರು ಕೂಡಲೇ ಅಂಗನವಾಡಿ ಕಾರ್ಯಕರ್ತರನ್ನು ಸಂಪರ್ಕಿಸಿದ್ದರು. ಆದರೆ, ಈ ಬಗ್ಗೆ ಹೆತ್ತವರೊಂದಿಗೆ ಮುನಿಸಿಕೊಂಡ ಅಂಗನವಾಡಿ ಕಾರ್ಯಕರ್ತೆ ಯಾವುದೇ ಸಮರ್ಪಕ ಉತ್ತರ ನೀಡಿರಲಿಲ್ಲ. ಈ ನಡುವೆ ಗರ್ಭಿಣಿಯರಿಗೆ ನೀಡುವ ರೇಷನ್, ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ, ಮಗುವಿನ ಪಾಲನೆ ಪೋಷಣೆಗೆ ಸಂಬಂಧಿಸಿದಂತೆ ಸರಣಿ ಸಂದೇಶಗಳು ಬಂದಿದ್ದು ಹೆತ್ತವರಲ್ಲಿ ಆತಂಕವನ್ನುಂಟು ಮಾಡಿತ್ತು.
ಬಳಿಕ ಬಾಲಕಿಯ ಪೋಷಕರು ಗ್ರಾಮದ ಮುಖಂಡರಿಗೆ ದೂರು ನೀಡಿದ್ದಾರೆ. ವಿಷಯ ಮೇಲಧಿಕಾರಿಗಳಿಗೆ ತಲುಪಿದಾಗ ಅಲ್ಲೋಲ ಕಲ್ಲೋಲವಾಯಿತು. ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಬ್ಬರಿಂದಲೂ ಆಧಾರ್ ಕಾರ್ಡ್ನ ನಕಲು ಪ್ರತಿಯನ್ನು ತೆಗೆದುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಳಿಕ ಇದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆದರೆ, ಮಾಧ್ಯಮಗಳ ತಲೆಬರಹಗಳು ಹಾಗೂ ಬಾಲಕಿಯರು ಗರ್ಭಧಾರಣೆಯೊಂದಿಗೆ ಸಾಲಾಗಿ ನಿಂತಿರುವ ಕೃತಕ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಚಿತ್ರಗಳಿಂದಾಗಿ ಜನರು ಈ ಘಟನೆ ನಿಜವೆಂದು ಭಾವಿಸಲು ಮತ್ತು ಇದು ಒಂದೇ ಊರಿನಲ್ಲಿ ಸಂಭವಿಸಿರುವುದರಿಂದ ಯಾರದೋ ಕೈವಾಡವಿದೆ ಎಂದು ಶಂಕಿಸಲು ಕಾರಣವಾಗಿತ್ತು. ಈ ಬಗ್ಗೆ ದಿ ಇಂಟೆಂಟ್ ಡಾಟಾ ಸತ್ಯಶೋಧನೆ ಮಾಡಿದ್ದು, ಇದು ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಸಂಭವಿಸಿದ ಪ್ರಮಾದ ಎಂಬುದನ್ನು ಬಯಲಿಗೆಳೆದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಒಂದೇ ಗ್ರಾಮದ 35ಕ್ಕೂ ಹೆಚ್ಚು ಅವಿವಾಹಿತ ಹುಡುಗಿಯರು ಗರ್ಭಿಣಿಯರಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಿಸಲು ಬಾಲಕಿಯರು ಅಂಗನವಾಡಿ ಕಾರ್ಯಕರ್ತೆಗೆ ತಮ್ಮ ಆಧಾರ್ ಕಾರ್ಡ್ನ್ನು ನೀಡಿದ್ದರು. ಆದರೆ, ಪ್ರಮಾದದಿಂದಾಗಿ ಇದು ಗರ್ಭಿಣಿಯರಿಗೆ ತುಂಬಿಸಲಾಗುವ ಪೋಷಕಾಂಶ ಟ್ರ್ಯಾಕರ್ನಲ್ಲಿ ಸೇರ್ಪಡೆಯಾಗಿತ್ತು.
ಇದನ್ನು ಓದಿದ್ದೀರಾ? Fact Check | ಪ್ರಯಾಗ್ರಾಜ್ ರೈಲ್ವೇ ಹಳಿ ಮೇಲೆ ಕಲ್ಲು ಜೋಡಿಸಿದವರು ಮುಸ್ಲಿಮರಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

