“ಬಿಗಿಯಾದ ಒಳ ಉಡುಪು ಧರಿಸುವುದನ್ನು ನಿಲ್ಲಿಸಿ. ಒಳ ಉಡುಪುಗಳನ್ನು ಧರಿಸುವುದರಿಂದ ನಿಮ್ಮ ಕೆಳಭಾಗದ ದೇಹದ ಉಷ್ಣತೆಯು ಹೆಚ್ಚುತ್ತದೆ. ಒಂದು ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೆಚ್ಚಿಸುವುದರಿಂದ ವೀರ್ಯದ ಸಾಂದ್ರತೆಯು 40% ರಷ್ಟು ಕಡಿಮೆಯಾಗುತ್ತದೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ @Men_Sex_Health ಎಂಬ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನ್ನು 52ಸಾವಿರ ಜನರು ವೀಕ್ಷಿಸಿದ್ದಾರೆ ಮತ್ತು 894 ಜನರು ಲೈಕ್ ಮಾಡಿದ್ದಾರೆ.

ಈ ಪೋಸ್ಟ್ನ ಕೆಳಗೆ ಹಲವರು ವೀರ್ಯದ ಸಾಂದ್ರತೆ ಕಡಿಮೆಯಾಗಲು ಇರುವ ಬೇರೆ ಬೇರೆ ಕಾರಣಗಳನ್ನೂ ಕೂಡ ಚರ್ಚೆಸಿದ್ದಾರೆ. ಆದರೆ ಈ ಪೋಸ್ಟ್ನಲ್ಲಿ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಅಥವಾ ಅನುಮೋದನೆಗಳನ್ನು ಉಲ್ಲೇಖಿಸದೇ ಇರುವುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಗಮನಿಸಿದೆ.
ಫ್ಯಾಕ್ಟ್ಚೆಕ್
ಪುರುಷರು ಬಿಗಿಯಾದ ಒಳಉಡುಪುಗಳನ್ನು ಧರಿಸುವುದರಿಂದ ವೃಷಣಗಳ ಉಷ್ಣತೆಯು ಹೆಚ್ಚಾಗಿ ವೀರ್ಯಾಣುಗಳ ಉತ್ಪಾದನೆಗೆ ಸಮಸ್ಯೆಗಳಾಗಬಹುದು ಹಾಗೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ.
ಪ್ರಜಾವಾಣಿ ವೆಬ್ಪೋರ್ಟಲ್ನಲ್ಲಿ “ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ : ಜೀವನ ಶೈಲಿಯೂ ಕಾರಣ” ಎಂಬ ಶೀರ್ಷಿಕೆಯೊಂದಿಗೆ ಡಾ. ವಿನೋದ್ ಕುಮಾರ್ ಎನ್ ರವರ ಲೇಖನವೊಂದು ಪ್ರಕಟಗೊಂಡಿದ್ದು, ಈ ಲೇಖನದಲ್ಲಿ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಹಲವು ಅಂಶಗಳನ್ನು ಪಟ್ಟಿ ಮಾಡಿದೆ. ಇವುಗಳಲ್ಲಿ “ಗಂಡಸರು ತೊಡುವ ಒಳಉಡುಪು ಕೂಡ ವೃಷಣವನ್ನು ಅತಿಯಾಗಿ ಬೆಚ್ಚಗಿಡುವುದರಿಂದಲೂ ವೀರ್ಯ ಉತ್ಪಾದನೆಗೆ ಸಮಸ್ಯೆ ಉಂಟು ಮಾಡುತ್ತದೆ. ಕೆಲವು ಪ್ರಕರಣಗಳಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ ಅಥವಾ ಥೈರಾಯ್ಡ್ ಅಸ್ವಸ್ಥತೆಯಿಂದಲೂ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗಿ ಗುಣಮಟ್ಟದ ವೀರ್ಯ ಉತ್ಪಾದನೆ ಅಸಾಧ್ಯವಾಗಬಹುದು” ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಅಲ್ಲದೇ, “ಪುರುಷರು ಹೆಚ್ಚಾಗಿ ಬಿಗಿ ಉಡುಪು ಧರಿಸುವುದನ್ನು ನಿಲ್ಲಿಸುವುದು ಉತ್ತಮ. ಸಾಮಾನ್ಯವಾಗಿ ವೃಷಣವನ್ನು ಬಿಗಿಯಾಗಿ ಅಥವಾ ಬಿಸಿಯಾಗಿ ಇಡುವುದರಿಂದ ಹಾರ್ಮೋನ್ಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಕನಿಷ್ಠ ರಾತ್ರಿ ಸಂದರ್ಭದಲ್ಲಾದರೂ ಸಡಿಲವಾದ ಬಟ್ಟೆ ಧರಿಸಿ ಮಲಗುವುದು ಉತ್ತಮ….” ಎಂದು ಸಲಹೆ ನೀಡಿದ್ದಾರೆ. ಈ ಲೇಖನವನ್ನು ಇಲ್ಲಿ ಓದಬಹುದು .

ದೇಹದ ಸಾಮಾನ್ಯ ತಾಪಮಾನಕ್ಕಿಂತ ಸ್ವಲ್ಪ ಕಡಿಮೆ ತಾಪಮಾನದಲ್ಲಿ ವೀರ್ಯ ಉತ್ಪಾದನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಅಧ್ಯಯನಗಳು ಸತತವಾಗಿ ಬೆಟ್ಟು ಮಾಡಿವೆ. ಇದು ದೇಹದ ಹೊರಗೆ ವೃಷಣಗಳ ಅಂಗರಚನಾ ನಿಯೋಜನೆಯನ್ನು ವಿವರಿಸುತ್ತದೆ. ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ಇದು ವೃಷಣಗಳ ಉಷ್ಣತೆಯನ್ನು ಹೆಚ್ಚಿಸಬಹುದು ಮತ್ತು ವೀರ್ಯಾಣುಗಳ ಗುಣಮಟ್ಟ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ಹೇಳುತ್ತವೆ.
ಸೈನ್ಸ್ಡೈರೆಕ್ಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, “ದೇಹದ ಸಾಮಾನ್ಯ ತಾಪಮಾನಕ್ಕಿಂತ ಸ್ವಲ್ಪ ಕಡಿಮೆ ತಾಪಮಾನದಲ್ಲಿಯೇ ವೀರ್ಯಗಳ ಉತ್ಪಾದನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಸಸ್ತನಿಗಳಲ್ಲಿ ವೃಷಣಗಳು ದೇಹದ ಹೊರಗೆ ಇರುವುದಕ್ಕೆ ಇದೇ ಕಾರಣ” ಎಂದು ಹೇಳಿದೆ.
ತಾಪಮಾನವನ್ನು ಕಡಿಮೆ ಮಾಡಬೇಕಾದಾಗ, ಕ್ರೆಮಾಸ್ಟರ್ ಸ್ನಾಯು ( ವೃಷಣಗಳನ್ನು ಒಂದು ಕಡೆ ಹಿಡಿದಿಟ್ಟುಕೊಳ್ಳುವ ಸ್ನಾಯು) ಸಡಿಲಗೊಳ್ಳುತ್ತದೆ ಮತ್ತು ವೃಷಣಗಳು ದೇಹದಿಂದ ಕೆಳಗಿಳಿಯುತ್ತವೆ ಮತ್ತು ತಣ್ಣಗಾಗಲು ಸಹಾಯಕವಾಗುತ್ತದೆ. ಬಿಗಿಯಾದ ಒಳ ಉಡುಪು ಧರಿಸುವುದರಿಂದ ವೃಷಣಗಳು ಕುಗ್ಗುತ್ತವೆ ಮತ್ತು ದೇಹಕ್ಕೆ ಅಂಟಿಕೊಂಡಿರುತ್ತವೆ.
“ಬಿಗಿಯಾದ ಒಳಉಡುಪುಗಳನ್ನು ಧರಿಸುವುದು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಮ್ಮಲ್ಲಿ ಇನ್ನೂ ಉತ್ತರವಿಲ್ಲ” ಎಂದು Mcgill ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯು ಹೇಳುತ್ತದೆ. ಜೀವನಶೈಲಿ ಮತ್ತು ವಾತಾವರಣವೂ ಕೂಡ ಮನುಷ್ಯನ ವೀರ್ಯಾಣು ಸಾಂದ್ರತೆಯ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅವನ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
“ಹಲವಾರು ಅಧ್ಯಯನಗಳು ವೀರ್ಯದ ಗುಣಮಟ್ಟ ಮತ್ತು ಜೀವನಶೈಲಿಯ ಒತ್ತಡಗಳ ಉಪಸ್ಥಿತಿಯ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡಿವೆ. ಔದ್ಯೋಗಿಕ ಒತ್ತಡ, ಯುದ್ಧ, ಭೂಕಂಪದಂತಹ ಸಂದರ್ಭಗಳಲ್ಲಿ ವೀರ್ಯದ ಗುಣಮಟ್ಟವು ಮಾನಸಿಕ ಒತ್ತಡದಿಂದ ದುರ್ಬಲಗೊಂಡಿರುತ್ತದೆ ಎಂದು ಒಂದು ವರದಿಯು ಬೆಟ್ಟು ಮಾಡಿದೆ. ಬ್ಯುಸಿನೆಸ್ ಇನ್ಸೈಡರ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 2019ರಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪುರುಷರ ಒಳ ಉಡುಪುಗಳ ಬಗ್ಗೆ ವೈಜ್ಞಾನಿಕ ಆಧಾರಗಳನ್ನಿರಿಸಿ ವರದಿ ಮಾಡಿದೆ.
ಪುರುಷರು ಧರಿಸುವ ಒಳ ಉಡುಪುಗಳ ಪ್ರಕಾರವು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ. “ಮನುಷ್ಯನು ಧರಿಸಲು ಆಯ್ಕೆಮಾಡುವ ಬಟ್ಟೆ, ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಬಿಗಿಯಾದ ಒಳ ಉಡುಪು ಮತ್ತು ಪ್ಯಾಂಟ್ಗಳು ವೀರ್ಯದ ಗುಣಮಟ್ಟವನ್ನು 2.5ರಷ್ಟು ದುರ್ಬಲಗೊಳಿಸುವಷ್ಟು ಅಪಾಯಕಾರಿಯಾಗಿವೆ” ಎಂದು ಅಧ್ಯಯನವು ಉಲ್ಲೇಖಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪುರುಷರು ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ವೀರ್ಯಾಣುಗಳ ಸಂಖ್ಯೆಯು ಕುಂಠಿತವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಸಂರಚನೆಯೂ ಭಿನ್ನವಾಗಿದ್ದು, ಆರೋಗ್ಯ ಸಮಸ್ಯೆಗಳಿಗೆ ಸಂಬಂಧಪಟ್ಟ ವೈದ್ಯರ ಬಳಿ ಸಮಾಲೋಚನೆ ಪಡೆಯುವುದು ಉತ್ತಮ.
ಇದನ್ನು ಓದಿದ್ದೀರಾ? : Fact Check : ಗೊರಕೆ ಹೊಡೆಯುವುದು ಆರೋಗ್ಯಕರ ಲಕ್ಷಣ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

