ಸಾಮಾಜಿಕ ಜಾಲತಾಣಗಳಲ್ಲಿ ಅಮಿರ್ ಖಾನ್ ಅವರ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ನ್ಯೂಸ್ 24 ಲೋಗೋವನ್ನು ಹೊಂದಿರುವ ಈ ಪೋಸ್ಟ್ನಲ್ಲಿ, ಸಿತಾರೆ ಜಮೀನ್ ಪರ್ ಚಿತ್ರದ ಗಳಿಕೆಯ ಶೇ.50 ಪ್ರತಿಶತ ಹಣವನ್ನು ಗಾಜಾ ಸಂತ್ರಸ್ತರಿಗೆ ನೀಡುವುದಾಗಿ ಅಮಿರ್ ಖಾನ್ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

ಈ ವೈರಲ್ ಪೋಸ್ಟ್ ಅನ್ನು ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡು, ಅಮಿರ್ ಖಾನ್ ನಟನೆಯ ಸಿತಾರೆ ಜಮೀನ್ ಪರ್ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ನಮ್ಮ ಹಣ ಗಾಜಾ ಸಂತ್ರಸ್ತರಿಗೆ ಹೋಗುವುದು ಬೇಡ. ಹಾಗಾಗಿ ನಾವು ಈ ಸಿನಿಮಾವನ್ನು ನೋಡುವುದಿಲ್ಲ ಎಂದು ಕೂಡ ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಅಮಿರ್ ಖಾನ್ ನಟನೆಯ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಸಂಬಂಧಿಸಿದ ಹಲವು ಸುದ್ದಿ ವರದಿಗಳನ್ನು ಪರಿಶೀಲನೆ ನಡೆಸಿದೆವು. ಆದರೆ ಇವುಗಳಲ್ಲಿ ಯಾವುದರಲ್ಲಿಯೂ ಅಮಿರ್ ಖಾನ್ ತಮ್ಮ ಚಿತ್ರದ ಗಳಿಕೆಯ ಹಣವನ್ನು ಗಾಜಾ ಸಂತ್ರಸ್ತರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ ಎಂಬ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ ನಿಜವಾಗಿದ್ದರೆ ರಾಷ್ಟ್ರ ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿದ್ದವು. ಹೀಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತು.

ಹೀಗಾಗಿ ನಾವು ನ್ಯೂಸ್ 24 ನ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪರಿಶೀಲನೆ ನಡೆಸಿದವು. ಇದರಲ್ಲಿ ನ್ಯೂಸ್ 24 ನ ಎಲ್ಲಾ ಬ್ರೇಕಿಂಗ್ ನ್ಯೂಸ್ ಪ್ಲೇಟ್ಗಳು ಒಂದೇ ರೀತಿಯಲ್ಲಿದ್ದು, ವೈರಲ್ ಪೋಸ್ಟ್ ಮತ್ತು ಮೂಲ ಪೋಸ್ಟ್ ನಲ್ಲಿನ ಅಕ್ಷರಗಳ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ಇರುವುದು ಕಂಡು ಬಂದಿದೆ. ನ್ಯೂಸ್ 24 ನಲ್ಲಿ ಬ್ರೇಕಿಂಗ್ ನ್ಯೂಸ್ ಪ್ಲೇಟ್ಗಳನ್ನು ಪರಿಶೀಲಿಸಿದಾಗ ಮೂಲ ಪೋಸ್ಟ್ಗಳು ಒಂದೇ ರೀತಿ ಇದ್ದು, ವೈರಲ್ ಆಗಿರುವ ಪೋಸ್ಟನಲ್ಲಿ ಹಲವು ಲೋಪದೋಷಗಳು ಕೂಡ ಕಂಡು ಬಂದಿವೆ. ಹೀಗಾಗಿ ವೈರಲ್ ಆಗಿರುವ ಪೋಸ್ಟ್ ಅನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ನಟ ಅಮಿರ್ ಖಾನ್ ಅವರು ತಮ್ಮ ಸಿತಾರೆ ಜಮೀನ್ ಪರ್ ಚಿತ್ರದ 50ರಷ್ಟು ಗಳಿಕೆಯ ಹಣವನ್ನು ಗಾಜಾ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಪೋಸ್ಟ್ ಎಡಿಟ್ ಮಾಡಲಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಜುಲೈ 1 ರಿಂದ ಪೆಟ್ರೋಲ್ ಬೆಲೆ ಲೀಟರ್ಗೆ 45 ರೂ.ಗೆ ಇಳಿಕೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

