ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಕ್ರೌರ್ಯ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ನಡುವೆ, ಸೇನಾ ಟ್ಯಾಂಕರ್ಗಳು ಹಾಗೂ ಬೆಂಗಾವಲು ಸೇನೆಯನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
“ಬಾಂಗ್ಲಾದೇಶದ ಟ್ಯಾಂಕ್ಗಳು ಭಾರತದ ಗಡಿಯತ್ತ ಮುನ್ನಗ್ಗುತ್ತಿರುವುದನ್ನು ಇದು ತೋರಿಸುತ್ತದೆ” ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರು #BREAKING: ಸ್ವಲ್ಪ ಸಮಯದಲ್ಲೇ, ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶದ ಟ್ಯಾಂಕ್ಗಳು ಭಾರತದ ಗಡಿಯತ್ತ ಮುನ್ನುಗ್ಗುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋ 2012ರ ಬಾಂಗ್ಲಾದೇಶ ಸೇನೆಯ MBT-2000 ವಿಕ್ಟರಿ ಡೇ ಪರೇಡ್ಗೆ ಸಂಬಂಧಿಸಿದೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪತ್ತೆ ಹಚ್ಚಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಟ್ಯಾಂಕ್ಗಳು ಭಾರತದ ಗಡಿಯತ್ತ ಬರುತ್ತಿವೆ ಎಂಬುದು ಸುಳ್ಳು.
ಈ ಬಗ್ಗೆ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ, ಕನ್ನಡ ಫ್ಯಾಕ್ಟ್ಚೆಕ್ ತಂಡವು 2012ರ ಡಿಸೆಂಬರ್ 17ರಂದು ಪ್ರಕಟವಾದ ವರದಿಯನ್ನು ಕಂಡುಕೊಂಡಿದೆ. ಈ ವರದಿಯ ಪ್ರಕಾರ, ಈ ಚಿತ್ರವು 2012ರಲ್ಲಿ ಬಾಂಗ್ಲಾದೇಶ ಸೇನೆಯ MBT-2000 ವಿಕ್ಟರಿ ಡೇ ಪರೇಡ್ ಎಂದು ವರದಿ ಮಾಡಿದೆ.

ಇದಲ್ಲದೇ, 2018ರ ಮಾರ್ಚ್ 7ರಂದು ಪ್ರಕಟಿಸಿದ ವರದಿಯಲ್ಲಿ ಇದೇ ವೈರಲ್ ಚಿತ್ರವನ್ನು ಬಳಸಲಾಗಿದ್ದು “ಬಾಂಗ್ಲಾದೇಶವು ಬಲಿಷ್ಠ ಮಿಲಿಟರಿ ಪಡೆಗಳ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿದೆ. 2017ರ ಜಾಗತಿಕ ಫೈರ್ಪವರ್ ಸೂಚ್ಯಂಕದಲ್ಲಿ 133 ರಾಷ್ಟ್ರಗಳಲ್ಲಿ ಬಾಂಗ್ಲಾದೇಶವು 57ನೇ ಸ್ಥಾನದಲ್ಲಿದೆ” ಎಂದು ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2012ರ ಬಾಂಗ್ಲಾದೇಶ ಸೇನೆಯ MBT-2000 ವಿಕ್ಟರಿ ಡೇ ಪರೇಡ್ನ ಚಿತ್ರವನ್ನು ಬಳಸಿ ಬಾಂಗ್ಲಾದೇಶದ ಟ್ಯಾಂಕ್ಗಳು ಭಾರತದ ಮೇಲೆ ದಾಳಿ ಮಾಡಲು ಬರುತ್ತಿವೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.
ಇದನ್ನು ಓದಿದ್ದೀರಾ? : FACT CHECK : ಕೇರಳದಲ್ಲಿ ಮಹಿಳೆಯರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಕೋಮು ಆಯಾಮದೊಂದಿಗೆ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

