ಪಶ್ಚಿಮ ಬಂಗಾಳದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆದಿದ್ದು, ಮುಸ್ಲಿಂ ಮಹಿಳೆಯರು ಸೇನಾ ವಾಹನವನ್ನು ಧ್ವಂಸಗೊಳಿಸಿದ್ದಾರೆ ಎಂದು ವಿಡೀಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ‘ಬಜರಂಗದಳ ದೇಸರಿ ವಿಎಚ್ಪಿ’ ವೈರಲ್ ವಿಡಿಯೋವನ್ನು (ಆರ್ಕೈವ್ ಲಿಂಕ್ ) “ಬಂಗಾಳದ ಶಾಂತಿದೂತ ಮಹಿಳಾ ಬ್ರಿಗೇಡ್ಗಳು ಸಹೋದರತ್ವವನ್ನು ನಿಭಾಯಿಸುತ್ತಿರುವುದು” ಎಂದು ಬರೆದು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ವಿಭಿನ್ನ ಪ್ಲಾಟ್ಫಾರ್ಮ್ಗಳಲ್ಲಿ, ಬಳಕೆದಾರರು ಈ ವಿಡಿಯೋವನ್ನು ಪಶ್ಚಿಮ ಬಂಗಾಳದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ವಿಡಿಯೋದ ಒಂದು ಫ್ರೇಮ್ನಲ್ಲಿ ‘Dutch Bangla Bank PLC ಮತ್ತು ‘‘Walton Plaza’ ಬರೆದಿರುವುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಗಮನಿಸಿದೆ. ಈ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ ನಮಗೆ ದೊರೆತ ಮಾಹಿತಿಯ ಪ್ರಕಾರ , ಡಚ್ ಬಾಂಗ್ಲಾ ಬ್ಯಾಂಕ್ ಬಾಂಗ್ಲಾದೇಶದ ಖಾಸಗಿ ವಾಣಿಜ್ಯ ಬ್ಯಾಂಕ್ ಆಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ. ಇದು ಬಾಂಗ್ಲಾದೇಶದಲ್ಲಿ ಮೊದಲ ಯುರೋಪಿಯನ್ ಜಂಟಿ ಉದ್ಯಮ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದು ಎಂಬುದು ನಿಖರವಾಗಿ ತಿಳಿದು ಬರುತ್ತದೆ.
ವಿಡಿಯೋದ ಸ್ಥಳವನ್ನು ಪರಿಶೀಲಿಸಲು, ಅದರ ಪ್ರಮುಖ ಫ್ರೇಮ್ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜಮುನಾ ಟಿವಿ ಎಂಬ ಬಾಂಗ್ಲಾದೇಶದ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಬುಲೆಟಿನ್ ನಮಗೆ ಲಭಿಸಿದ್ದು, ಅದರಲ್ಲಿ ಈ ಘಟನೆಯು ಬಾಂಗ್ಲಾದೇಶದ ಮೀರ್ಪುರದಲ್ಲಿ ನಡೆದಿದ್ದಾಗಿ ವರದಿಯಾಗಿದೆ.
ನೀಡಿರುವ ಮಾಹಿತಿಯ ಪ್ರಕಾರ, ಇದು 2024ರ ಅಕ್ಟೋಬರ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು, ಮಿರ್ಪುರ್ನ ಕಚುಕ್ಷೇತ್ ಪ್ರದೇಶದಲ್ಲಿ ಪ್ರತಿಭಟನಾನಿರತ ಜವಳಿ ಕಾರ್ಮಿಕರು ಸೇನಾ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು.
Google Mapನಲ್ಲಿ ಈ ಬೀದಿಯ ದೃಶ್ಯಗಳನ್ನು ವೀಕ್ಷಿಸಲಾಗಿದ್ದು ಈ ಸ್ಥಳವು ಘಟನೆ ನಡೆದ ಸ್ಥಳ ಎಂಬುದನ್ನು ಕಾಣಬಹುದು. ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಫ್ಯಾಕ್ಟ್ಚೆಕರ್ ತೌಸಿಫ್ ಅಕ್ಬರ್ ಅವರನ್ನು ಸಂಪರ್ಕಿಸಿದಾಗ “ಇದು ಬಾಂಗ್ಲಾದೇಶದಲ್ಲಿ ನಡೆದ ಹಳೆಯ ಘಟನೆಗೆ ಸಂಬಂಧಿಸಿದೆ” ಎಂದು ಅವರು ದೃಢಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಮೀರ್ಪುರದಲ್ಲಿ ಜವಳಿ ಕಾರ್ಮಿಕರು ಪ್ರತಿಭಟನೆಯ ಸಂದರ್ಭದಲ್ಲಿ ಸೇನೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ 2024ರ ಅಕ್ಟೋಬರ್ನಲ್ಲಿ ನಡೆದಿತ್ತು. ಈ ಹಳೆಯ ವಿಡಿಯೋವನ್ನು ಬಂಗಾಳದಲ್ಲಿ ಮುಸ್ಲಿಮರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂಬ ನಕಲಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ : FACT CHECK : ಬೈಕ್ನಲ್ಲಿ ಬಾಲಕನ ಶವವನ್ನು ಹೊತ್ತೊಯ್ಯುವ ವಿಡಿಯೋವಿಗೂ ತಿರುಪತಿ ಕಾಳ್ತುಳಿತಕ್ಕೂ ಯಾವುದೇ ಸಂಬಂಧವಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

