ಸಾಮಾಜಿಕ ಜಾಲತಾಣದಲ್ಲಿ, ಭಾರತವನ್ನು ‘ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ರಾಷ್ಟ್ರ’ ಎಂದು ಕೆನಡಾ ಘೋಷಿಸಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ನಲ್ಲಿ ರಿಪೋರ್ಟರ್ ಎಂಡಿ ಶಫೀಉಲ್ಲಾ ಎಂಬ ಬಳಕೆದಾರರು ಪೋಸ್ಟ್ವೊಂದರಲ್ಲಿ, “ಈಗಷ್ಟೇ ಬಂದ(ಸುದ್ದಿ)- ಭಾರತವನ್ನು ಮೊದಲ ಬಾರಿಗೆ ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವ ದೇಶ ಎಂದು ಕೆನಡಾ ಅಧಿಕೃತವಾಗಿ ಘೋಷಿಸಿದೆ” ಎಂದು 2024ರ ನವೆಂಬರ್ 6ರಂದು ಹಂಚಿಕೊಂಡಿದ್ದಾರೆ. ಈ ಬಗ್ಗೆ ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್ಚೆಕ್
ಭಾರತವನ್ನು ಕೆನಡಾ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದೇಶಗಳ ಪಟ್ಟಿಯಲ್ಲಿ ಸೇರಿಸಿದೆ ಎಂಬುದು ಸುಳ್ಳು ಈ ಬಗ್ಗೆ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲನೆ ನಡೆಸಿದೆ. ಆದರೆ, ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ‘ಸೈಬರ್ ಬೆದರಿಕೆ ವಿರೋಧಿಗಳ ಪಟ್ಟಿ‘ಯಲ್ಲಿ ಮೊದಲ ಬಾರಿಗೆ ಭಾರತವನ್ನು ಕೆನಡಾ ಸೇರ್ಪಡೆಗೊಳಿಸಿದೆ ಎಂದು 2024ರ ನವೆಂಬರ್ 3ರಂದು ಮಾಧ್ಯಮಗಳು ವರದಿ ಮಾಡಿರುವುದನ್ನು ನಮ್ಮ ತಂಡವು ಗಮನಿಸಿದೆ.

ಭಾರತವನ್ನು ‘ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ರಾಷ್ಟ್ರ’ ಎಂದು ಕೆನಡಾ ಘೋಷಿಸಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾ ನಡೆಸಿದಾಗ, ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಡಿದ ಹೇಳಿಕೆಗೆ ಸಂಬಂಧಿಸಿದ ಅಂಶವನ್ನು ದೃಢೀಕರಿಸುವ ಯಾವುದೇ ಅಧಿಕೃತ ವರದಿಗಳು ನಮಗೆ ಲಭಿಸಿಲ್ಲ. ಒಂದು ವೇಳೇ, ಕೆನಡಾ ಭಾರತವನ್ನು ಭಯೋತ್ಪಾದಕ ದೇಶಗಳ ಪಟ್ಟಿಯಲ್ಲಿ ಸೇರಿಸಿದ್ದರೆ ಅದು ಜಾಗತಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಎರಡು ದೇಶಗಳಲ್ಲಿ ಚರ್ಚೆಯ ವಿಷಯವಾಗುತ್ತಿತ್ತು.
ಇದಲ್ಲದೇ, ಪಬ್ಲಿಕ್ ಸೇಫ್ಟಿ ಕೆನಡಾ ಎಂಬ ಅಧಿಕೃತ ಸರ್ಕಾರಿ ವೆಬ್ಸೈಟ್ ಅನ್ನು ಸ್ಕ್ಯಾನ್ ಮಾಡಿದಾಗ, ಇದರಲ್ಲಿರುವ ‘ಭಯೋತ್ಪಾದಕ ಸಂಘಟನೆಗಳ’ ಪಟ್ಟಿಯಲ್ಲಿ ನಮಗೆ ಎಲ್ಲಿಯೂ ಭಾರತದ ಹೆಸರು ಕಂಡುಬಂದಿಲ್ಲ.

ಕೆನಡಾದ ಪ್ರಧಾನಿ ಮತ್ತು ದೇಶದ ವಿದೇಶಾಂಗ ಇಲಾಖೆಯ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ಗಳನ್ನು ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲಿಸಿದ್ದು, ಭಾರತಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪ್ರಕಟಣೆಯನ್ನು ಮಾಡಿರುವ ಬಗ್ಗೆ ಕಂಡು ಬಂದಿಲ್ಲ.
ಕೆನಡಾದ “ಸೈಬರ್ ಬೆದರಿಕೆ ವಿರೋಧಿಗಳ ಪಟ್ಟಿ’ಯಲ್ಲಿ ಮೊದಲ ಬಾರಿಗೆ ಭಾರತ!
‘ಸೈಬರ್ ಬೆದರಿಕೆ ವಿರೋಧಿಗಳ ಪಟ್ಟಿ’ಯಲ್ಲಿ ಮೊದಲ ಬಾರಿಗೆ ಭಾರತವನ್ನು ಕೆನಡಾ ಹೆಸರಿಸಿದೆ ಎಂದು ನವೆಂಬರ್ ೨ರಂದು ಮಾಧ್ಯಮಗಳು ವರದಿ ಮಾಡಿದ್ದವು. ಭಾರತ ಸರ್ಕಾರ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ವಿರುದ್ಧ ಸೈಬರ್ ಬೆದರಿಕೆ ಒಡ್ಡುವ ಚಟುವಟಿಕೆಗಳಲ್ಲಿ ನಿರತವಾಗಿ ಹಾಗೂ ಆ ಮೂಲಕ ಬೇಹುಗಾರಿಕೆ ನಡೆಸುತ್ತಿರುವ ಸಾಧ್ಯತೆ ಇದೆ ಎಂದೂ ಹೇಳಿಕೊಂಡಿತ್ತು. ಕೆನಡಾ ಹೇಳಿಕೆಯನ್ನು ಖಂಡಿಸಿ, ‘ಭಾರತದ ವಿರುದ್ಧ ನಿರಾಧಾರ ಆರೋಪಗಳನ್ನು ಹೊರಿಸಲು ಕೆನಡಾ ಅನುಸರಿಸುತ್ತಿರುವ ತಂತ್ರಕ್ಕೆ ಮತ್ತೊಂದು ನಿದರ್ಶನವಿದು’ ಎಂದು ಭಾರತವು ಟೀಕಾಪ್ರಹಾರ ನಡೆಸಿತ್ತು.
ಕೆನಡಾ, ‘ನ್ಯಾಷನಲ್ ಸೈಬರ್ ಥ್ರೆಟ್ ಅಸೆಸ್ಮೆಂಟ್, 2025-26′ ಎಂಬ ವರದಿ ಬಿಡುಗಡೆ ಮಾಡಿದ್ದು, ಚೀನಾ, ರಷ್ಯಾ, ಇರಾನ್ ಹಾಗೂ ಉತ್ತರ ಕೊರಿಯಾ ಹೆಸರುಗಳು ಈ ಪಟ್ಟಿಯಲ್ಲಿವೆ. ಈಗ, 5ನೇ ದೇಶವಾಗಿ ಭಾರತದ ಹೆಸರನ್ನು ಸೇರಿಸಿದೆ.
“ಕೆನಡಾ ಪ್ರಜೆ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿದ ನಂತರ, ಕೆನಡಾದ ಹಲವು ವೆಬ್ಸೈಟ್ಗಳ ಮೇಲೆ ದಾಳಿ ನಡೆದಿತ್ತು. ಭಾರತ ಪರವಿರುವ ಹ್ಯಾಕರ್ಗಳ ಗುಂಪೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಇಂತಹ ಚಟುವಟಿಕೆಗಳು, ಕಲ್ಪಿಸಲಾಗದಂತಹ ಪರಿಣಾಮಗಳಿಗೆ ಕಾರಣವಾಗುತ್ತಿವೆ’ ಎಂದು ಭಾರತದ ಹೆಸರು ಉಲ್ಲೇಖಿಸಿ, ಭಾರತವನ್ನು ಈ ಕಾರಣಕ್ಕಾಗಿ ಸೈಬರ್ ಬೆದರಿಕೆ ವಿರೋಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದನ್ನು ವಿವರಿಸಿತ್ತು.
ಜೂನ್ 2023 ರಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಕೆನಡಾದ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆಂದು ಕೆನಡಾದ ಬಳಿ ವಿಶ್ವಾಸಾರ್ಹ ಪುರಾವೆಗಳಿವೆ ಎಂದೂ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ ಬಳಿಕ ಭಾರತ ಕೆನಡಾ ದ್ವಿಪಕ್ಷೀಯ ಸಂಬಂಧ ಹಾಳಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತವನ್ನು ಕೆನಡಾ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದೇಶಗಳ ಪಟ್ಟಿಯಲ್ಲಿ ಸೇರಿಸಿದೆ ಎಂಬುದು ಸುಳ್ಳು. ಆದರೆ, ‘ಸೈಬರ್ ಬೆದರಿಕೆ ವಿರೋಧಿಗಳ ಪಟ್ಟಿ’ಯಲ್ಲಿ ಮೊದಲ ಬಾರಿಗೆ ಭಾರತವನ್ನು ಕೆನಡಾ ಸೇರ್ಪಡೆಗೊಳಿಸಿದೆ ಎಂಬುದು ನೈಜ ಸುದ್ದಿಯಾಗಿದೆ.
ಇದನ್ನು ಓದಿದ್ದೀರಾ? : Fact Check | ದರ್ಗಾ ಸಮೀಕ್ಷೆ ನಡೆಸುವಾಗ ಬಿಜೆಪಿ ನಾಯಕ ವಿಜಯ್ ರೂಪಾನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

