ಅಲಂಕೃತ ಆಟೋ ರಿಕ್ಷಾದ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ. ಅಲಂಕೃತ ಆಟೋದ ಬಳಿ ನಿಂತಿರುವವರು ನಿಜವಾಗಿಯೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರಾ? ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ‘ಮಹಾರಾಷ್ಟ್ರ ರಿಕ್ಷಾ ಪಂಚಾಯತ್ ಪುಣೆ’ ಹೆಸರಿನ ಫೇಸ್ಬುಕ್ ಖಾತೆಯಲ್ಲಿ “ಮಹಾರಾಷ್ಟ್ರ ರಿಕ್ಷಾ ಪಂಚಾಯತ್ನ ಸ್ಥಾಪಕ, ಅಧ್ಯಕ್ಷ ಮತ್ತು ಕಾರ್ಮಿಕ ನಾಯಕ ಬಾಬಾ ಕಾಂಬ್ಳೆ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, 1997ರಲ್ಲಿ ಪಿಂಪ್ರಿ ರಾತ್ರಾಣಿ ರಿಕ್ಷಾ ಸ್ಟ್ಯಾಂಡ್ನಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ ಎಂದು ಹೇಳಲಾಗಿದೆ.

ಆಟೋ ‘MH 14’ ನ ನೋಂದಣಿ ಸಂಖ್ಯೆಯು ವಾಹನವನ್ನು ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ನೋಂದಾಯಿಸಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಪುಟದ ಮೂಲಕ ಸ್ಕ್ರೋಲ್ ಮಾಡುವಾಗ, 2022ರಲ್ಲಿ ವೈರಲ್ ಕ್ಲೈಮ್ ಕುರಿತು ಸ್ಪಷ್ಟೀಕರಣವನ್ನು ನೀಡಲಾದ ಮತ್ತೊಂದು ಪೋಸ್ಟ್ ಲಭಿಸಿದೆ.
ಕಾಂಬ್ಳೆ ಅವರು ತಮ್ಮ ಧಾರ್ಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, 1995ರಲ್ಲಿ ಆಟೋ-ರಿಕ್ಷಾ ಓಡಿಸಲು ಪ್ರಾರಂಭಿಸಿದ್ದರು ಮತ್ತು ಪುಣೆಯ ಪಿಂಪ್ರಿಯಲ್ಲಿ ‘ರಾತ್ರಾಣಿ’ ಎಂಬ ಹೆಸರಿನ 24 ಗಂಟೆಗಳ ರಿಕ್ಷಾ ಸ್ಟ್ಯಾಂಡ್ನ್ನು ಪ್ರಾರಂಭಿಸಿದ್ದರು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಖಾತೆಯ ಮತ್ತೊಂದು ಪೋಸ್ಟ್ನಲ್ಲಿ ಆಡಿಯೋ ರೆಕಾರ್ಡಿಂಗ್ನ ಚಿತ್ರಗಳನ್ನು ಹಂಚಿಕೊಂಡಿದ್ದು, ಇದು ಕಾಂಬ್ಳೆ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ನಡುವಿನ ಸಂಭಾಷಣೆ ಎಂದು ಹಂಚಿಕೊಳ್ಳಲಾಗಿದೆ. ಈ ಸಂಭಾಷಣೆಯಲ್ಲಿ ಕಾಂಬ್ಳೆ ನಾಯಕ ಅಳಂಡಿಯಿಂದ ಧಾರ್ಮಿಕ ಶಿಕ್ಷಣವನ್ನು ಮುಗಿಸಿದ ನಂತರ ಪಿಂಪ್ರಿಯಲ್ಲಿ ಆಟೋ ರಿಕ್ಷಾ ಓಡಿಸಲು ಪ್ರಾರಂಭಿಸಿದ್ದೆ ಎಂದು ಹೇಳಿದ್ದರು. ಶ್ರಾವಣ ಮಾಸದಲ್ಲಿ ಎಲ್ಲಾ ಆಟೋ ಚಾಲಕರು ತಮ್ಮ ವಾಹನಗಳನ್ನು ಅಲಂಕರಿಸಿ ಗೌರವಿಸುವ ಸಮಯದಲ್ಲಿ ತೆಗೆದ ಫೋಟೋ ಎಂದು ಸ್ಪಷ್ಟಪಡಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಲಂಕೃತ ಆಟೋದ ಬಳಿ ನಿಂತಿದ್ದಾರೆ ಎಂದು ಮಹಾರಾಷ್ಟ್ರ ರಿಕ್ಷಾ ಪಂಚಾಯತ್ನ ಸ್ಥಾಪಕ, ಅಧ್ಯಕ್ಷ ಮತ್ತು ಕಾರ್ಮಿಕ ನಾಯಕ ಬಾಬಾ ಕಾಂಬ್ಳೆಯವರ ಫೋಟೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :

