ತುಪ್ಪದ ಡಬ್ಬಿಗಳಲ್ಲಿ ಬಂದೂಕುಗಳನ್ನು ಬಚ್ಚಿಟ್ಟ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ತುಪ್ಪದ ಡಬ್ಬಿಗಳಲ್ಲಿ ಬಂದೂಕುಗಳನ್ನು ನಿಜವಾಗಿಯೂ ಮುಚ್ಚಿಡಲಾಗಿದೆಯೇ? ಈ ಕೃತ್ಯವನ್ನು ಮುಸ್ಲಿಂ ವ್ಯಕ್ತಿಗಳು ಮಾಡಿದ್ದಾರೆಯೇ? ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, 2019ರ ಸೆಪ್ಟೆಂಬರ್ನಲ್ಲಿ NDTV ವರದಿಯಲ್ಲಿ ವೈರಲ್ ವಿಡಿಯೋದ ಸ್ಕ್ರೀನ್ಶಾಟ್ ಫೋಟೋ ಲಭ್ಯವಾಗಿದೆ.
ಈ ವರದಿಯ ಪ್ರಕಾರ, ಘಾಜಿಪುರ ಪ್ರದೇಶದಲ್ಲಿ ತುಪ್ಪದ ಡಬ್ಬಿಗಳಲ್ಲಿ 26 ಬಂದೂಕುಗಳನ್ನು ಬಚ್ಚಿಟ್ಟಿರುವುದರ ಕುರಿತಾಗಿ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. 2019ರ ಸೆಪ್ಟೆಂಬರ್ 23ರಂದು ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಬಗ್ಗೆ ಪೊಲೀಸರು ಮಾಹಿತಿ ಪಡೆದ ನಂತರ, ವಾಹನವನ್ನು ನಿಲ್ಲಿಸಿ, ತುಪ್ಪದ ಡಬ್ಬಿಗಳಲ್ಲಿ ಮುಚ್ಚಿಡಲಾದ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು.

2019ರ ಸೆಪ್ಟೆಂಬರ್ 27ರಂದು ದೆಹಲಿ ತಕ್ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಲಭ್ಯವಾಗಿದೆ. ದೆಹಲಿ ಪೋಲಿಸರ ವಿಶೇಷ ತಂಡವು, ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಕುರಿತು ಮಾಹಿತಿ ಪಡೆದಿತ್ತು. ನಂತರ ಅಕ್ರಮ ಶಸ್ತ್ರಾಸ್ತ್ರರನ್ನು ಹುಡುಕಲು ತನಿಖೆ ನಡೆಸಿದಾಗ, 2019ರ ಸೆಪ್ಟೆಂಬರ್ 23ರಂದು ಘಾಜಿಪುರದಲ್ಲಿ ಅನುಮಾನಕರವಾದ ಮಹೀಂದ್ರಾ ವಾಹನವನ್ನು ನಿಲ್ಲಿಸಿ ವಶಕ್ಕೆ ಪಡೆದು ಹುಡುಕಿದಾಗ ಎರಡು ತುಪ್ಪದ ಡಬ್ಬಿಗಳು ಪತ್ತೆಯಾಗಿದ್ದು, ಅದರಲ್ಲಿ 26 ಬಂದೂಕುಗಳನ್ನು ಬಚ್ಚಿಡಲಾಗಿತ್ತು. ಸಿಕ್ಕಿಬಿದ್ದ ಆರೋಪಿಗಳನ್ನು ಜಿತೇಂದ್ರ ಮತ್ತು ರಾಜ್ ಬಹದ್ದೂರ್ ಎಂದು ಗುರುತಿಸಿ, ಪೋಲಿಸರು ಬಂಧಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ವಿಶೇಷ ಪೋಲಿಸ್ ತಂಡವು, ತುಪ್ಪದ ಡಬ್ಬಿಯಲ್ಲಿ ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ 2019ರ ವಿಡಿಯೋವನ್ನು, ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check : ಪಂಕಜ್ ತ್ರಿಪಾಠಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು UPI ಜಾಗೃತಿ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

