2025ರ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆಗಳ ನಡುವೆ, ಆಮ್ ಆದ್ಮಿ ಪಕ್ಷವು ಡಿಸೆಂಬರ್ 5ರಂದು ವಿಡಿಯೋವೊಂದನ್ನು ಹಂಚಿಕೊಂಡಿದೆ.
ಈ ವಿಡಿಯೋದಲ್ಲಿ ನಟ ಪಂಕಜ್ ತ್ರಿಪಾಠಿಯವರು ಶೇಂಗಾ ಮಾರುವವನ ಪಾತ್ರದಲ್ಲಿ ನಟಿಸಿದ್ದಾರೆ. “ನಾನು ಕಡಲೆಕಾಯಿಯನ್ನು ಮಾರಾಟ ಮಾಡುತ್ತೇನೆ, ನನ್ನ ಮೆದುಳನ್ನಲ್ಲ. ಬಿಜೆಪಿ ಮಾಡಿರುವ ಈ ಸಂದೇಶವನ್ನು ಗಮನಿಸಿ, ‘ನಮಗೆ ಮತ ನೀಡಿ, ಅಭಿವೃದ್ಧಿ ತರುತ್ತೇವೆ’ ಎಂದು ಬರೆಯಲಾಗಿದೆ. ನನಗೆ ಏನೂ ತಿಳಿದಿಲ್ಲ ಎಂದು ನೀವು ಭಾವಿಸುತ್ತೀರಾ? ಇಲ್ಲಿ ನಾನು ಬಿಜೆಪಿಗೆ ಮತ ಹಾಕುತ್ತೇನೆ ಮತ್ತು ಸರ್ಕಾರದ ಹಣ ಅಲ್ಲಿ ಕಣ್ಮರೆಯಾಗುತ್ತದೆ. ‘ನಾನು ಕಡಲೆಕಾಯಿ ಮಾರಾಟಗಾರ, ಮೂರ್ಖನಲ್ಲ. ನೆನಪಿರಲಿ, ಬಿಜೆಪಿಯವರು ನಿಮಗೆ ಆಮಿಷ ಒಡ್ಡಿದರೆ, ‘ನಾನು ಮೂರ್ಖನಲ್ಲ’ ಎಂದು ತ್ರಿಪಾಠಿಯವರು ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಎಪಿ ರಾಜಸ್ಥಾನ ಮತ್ತು ಎಎಪಿ ಸೀಲಂಪುರದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಇತರ ಅನೇಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ನಾವು ವಿಡಿಯೋದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಸೆಪ್ಟೆಂಬರ್ 23ರಂದು ಹಂಚಿಕೊಳ್ಳಲಾದ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. ಈ ಪೋಸ್ಟ್ನಲ್ಲಿಯೂ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಆದರೆ, ವಿಡಿಯೋದಲ್ಲಿ ಕೆಲವು ಬದಲಾವಣೆಗಳು ಕಂಡುಬಂದಿವೆ. ಈ ವಿಡಿಯೋದಲ್ಲಿ, ತ್ರಿಪಾಠಿ ಯುಪಿಐ ವಂಚನೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ತ್ರಿಪಾಠಿಯವರು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ವಿಡಿಯೋ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, ತ್ರಿಪಾಠಿ ತನ್ನ ಫೋನ್ ಪರದೆಯನ್ನು ತೋರಿಸಿದಾಗ, ಸಾಧನದಲ್ಲಿರುವ ಫೋಟೋ, “ವಿಜೇತರಿಗೆ ಅಭಿನಂದನೆಗಳು! ನೀವು ರೂ 25,00,000 ಲಾಟರಿ ಗೆದ್ದಿದ್ದೀರಿ! ನಿಮ್ಮ ಬಹುಮಾನವನ್ನು ಸಂಗ್ರಹಿಸಲು, ಇಲ್ಲಿ ಕ್ಲಿಕ್ ಮಾಡಿ,” ಅದರ ನಂತರ ಒಂದು ಹೈಪರ್ಲಿಂಕ್ನ್ನು ತೋರಿಸಲಾಗಿದೆ. ಆದರೆ, ಬಿಜೆಪಿ ಚಿಹ್ನೆ ಮತ್ತು ಪಠ್ಯದೊಂದಿಗೆ ವಿಡಿಯೋವನ್ನು ಬದಲಾಯಿಸಲಾಗಿದ್ದು, “ಬಿಜೆಪಿಗೆ ಮತ ನೀಡಿ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
2023ರ ನವೆಂಬರ್ನಲ್ಲಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಟ ಪಂಕಜ್ ತ್ರಿಪಾಠಿ ಅವರೊಂದಿಗೆ ತನ್ನ ಸಹಯೋಗವನ್ನು ಘೋಷಿಸಿ, ಅವರನ್ನು “UPI ಸುರಕ್ಷತಾ ರಾಯಭಾರಿ” ಎಂದು ನೇಮಿಸಿತ್ತು. ಈ ವರ್ಷದ ಸೆಪ್ಟೆಂಬರ್ನಲ್ಲಿ, ಭಾರತೀಯ ತ್ವರಿತ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ UPI “ಮೈ ಮೂರ್ಖ್ ನಹೀ ಹೂನ್” ಎಂಬ ಜಾಹೀರಾತು ಪ್ರಚಾರವನ್ನು ಹೊರತಂದಿತು.
ತ್ರಿಪಾಠಿ ಅವರು ಮೋಸದ ಲಾಟರಿ ಸಂದೇಶದ ಕುರಿತು ಜಾಗೃತಿ ಮೂಡಿಸಲು ಕಡಲೆಕಾಯಿ ಮಾರಾಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಡಿಜಿಟಲ್ ಪಾವತಿ ಸೇವೆಗಳಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಡಿಯೋವನ್ನುಮಾಡಲಾಗಿದೆ. ಸದ್ಯಕ್ಕೆ, ಪಂಕಜ್ ತ್ರಿಪಾಠಿಯವರು ಕಡಲೆಕಾಯಿ ಮಾರಾಟಗಾರರಾಗಿ, ವೀಳ್ಯದೆಲೆ ಮಾರಾಟಗಾರರಾಗಿ ಮತ್ತು ವ್ಯಾಪಾರ ಕಾರ್ಯನಿರ್ವಾಹಕರಾಗಿ ನಟಿಸಿರುವ ಮೂರು ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೂಲ ವಿಡಿಯೋದಲ್ಲಿ ತ್ರಿಪಾಠಿಯವರು UPI ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ವಂಚಕರಿಂದ ಎಚ್ಚರಿಕೆಯಿಂದಿರಲು ಕರೆ ನೀಡಿದ್ದಾರೆ. ಆದರೆ, ಈ ವಿಡಿಯೋವನ್ನು ಎಡಿಟ್ ಮಾಡಿ, ತ್ರಿಪಾಠಿಯವರು ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

