ಬಾಂಗ್ಲಾದೇಶದಲ್ಲಿ ಕಾಳಿ ದೇವಸ್ಥಾನವನ್ನು ಮುಸ್ಲಿಮರು ಧ್ವಂಸಗೊಳಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಜನರ ಗುಂಪೊಂದು ಕಾಳಿ ದೇವಸ್ಥಾನದ ಸುತ್ತಲೂ ನೆರೆದಿರುವಾಗ ಇಬ್ಬರು ವ್ಯಕ್ತಿಗಳು ಪ್ರತಿಮೆಯ ಶಿರಚ್ಛೇದಿಸಲು ಪ್ರಯತ್ನಿಸಿದ್ದಾರೆ. ಇದರ ಪಕ್ಕದಲ್ಲಿ ಇನ್ನೊಂದು ತಲೆಯಿಲ್ಲದ ಮೂರ್ತಿ ಕಂಡುಬಂದಿದೆ.
“ನಿನ್ನೆ ಬಾಂಗ್ಲಾದೇಶದಲ್ಲಿ, ಮುಸ್ಲಿಮರು ಕಾಳಿ ಮೂರ್ತಿಯ ಮೇಲೆ ದಾಳಿ ಮಾಡಿ, ಮಹಾಕಾಳಿ ಮತ್ತು ಎಲ್ಲಾ ಹಿಂದೂ ದೇವರುಗಳ ವಿಗ್ರಹಗಳನ್ನು ಧ್ವಂಸಗೊಳಿಸಿ, ದೇವಾಲಯದ ಒಳಗಿದ್ದ ಹಿಂದೂ ಭಕ್ತರನ್ನು ಥಳಿಸಿದ್ದಾರೆ”. 20 ಕ್ಕೂ ಹೆಚ್ಚು ಹಿಂದೂ ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಇಡೀ ಜಗತ್ತು ಹಿಂದೂಗಳ ಹತ್ಯಾಕಾಂಡದ ಬಗ್ಗೆ ಮೌನವಾಗಿದೆ ಎಂಬ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾನೆ.

ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋ ಬಾಂಗ್ಲಾದೇಶದಲ್ಲಿನ ಕಾಳಿ ಪ್ರತಿಮೆಯನ್ನು ಮುಸ್ಲಿಮರು ಧ್ವಂಸ ಮಾಡಿರುವುದನ್ನು ತೋರಿಸುವುದಿಲ್ಲ. ಈ ವಿಡಿಯೋ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಸುಲ್ತಾನ್ಪುರ ಕಾಳಿ ದೇವಸ್ಥಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕಾಳಿ ದೇವಿಯ ಹಬ್ಬದ ಆಚರಣೆಯ ವಿಡಿಯೋವಾಗಿದೆ ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಪತ್ತೆಹಚ್ಚಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕುರಿತು ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ನವೆಂಬರ್ 29ರಂದು ಫೇಸ್ಬುಕ್ನಲ್ಲಿ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಖಂಡಘೋಷ್ ಎಂಬ ಹಳ್ಳಿಯ ಕಾಳಿ ದೇವಸ್ಥಾನದ್ದಾಗಿದೆ ಎಂದು ಉಲ್ಲೇಖಿಸಲಾಗಿದೆ.
ನವೆಂಬರ್ 30ರಂದು ಇನ್ಸ್ಟಾಗ್ರಾಮ್ನಲ್ಲಿ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸುಲ್ತಾನ್ಪುರದಲ್ಲಿ “ಕಾಳಿಮಾತಾ ನಿರಂಜನ್” ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಸುಮಾರು 600 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವಿದು ಎಂದು ವಿಡಿಯೋದ ವಿವರಣೆಯಲ್ಲಿ ಉಲ್ಲೇಖಲಾಗಿದೆ.

ಈ ವೈರಲ್ ವಿಡಿಯೋದ ಕುರಿತು ಮತ್ತಷ್ಟು ತಿಳಿದುಕೊಳ್ಳಲು, ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ನವೆಂಬರ್ 26 ರಂದು ಹಂಚಿಕೊಳ್ಳಲಾದ ʼಸುಲ್ತಾನ್ಪುರ್ ಕಿರಣ್ಮಯಿ ಪಾತ್ಗ್ರಾಹ್ʼ ಎಂಬ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಕಾಳಿ ದೇವಿಯ ಆರಾಧನೆಯನ್ನು ಬಂಗಾಳಿ ಭಾಷೆಯಲ್ಲಿ ಬರೆದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸುಲ್ತಾನ್ಪುರದ ಕಿರಣ್ಮಯಿ ಪಥಗ್ರಾಹ್ ಆಯೋಜಿಸಿದ್ದಾರೆ ಎಂದೂ ಹೇಳಲಾಗಿದೆ.
ಫೇಸ್ಬುಕ್ ಪೋಸ್ಟ್ನಲ್ಲಿ ಒಂದೇ ದೇವಾಲಯದ ಅನೇಕ ವಿಡಿಯೋಗಳು ಲಭ್ಯವಾಗಿದ್ದು, ಈ ಕೆಳಗಿನ ದೃಶ್ಯಗಳಲ್ಲಿ ಕಾಳಿ ದೇವತೆಯ ಹೋಲಿಕೆಯನ್ನು ನೋಡಬಹುದು.

ಈ ಕುರಿತು ಹಲವಾರು ಫೇಸ್ಬುಕ್ ವಿಡಿಯೋಗಳು ಲಭ್ಯವಾಗಿವೆ. ಇವರೆಲ್ಲರೂ ಹಿಂದೂ ಭಕ್ತರಾಗಿದ್ದು, ಕಾಳಿ ದೇವಿಯ ವಿಗ್ರಹದ ತಲೆ ಮತ್ತು ದೇಹದ ವಿವಿಧ ಭಾಗಗಳನ್ನು ಹಿಡಿದು ಆಚರಣೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಈ ವಿಡಿಯೋಗಳಲ್ಲಿ ಕಂಡುಬರುವ ಜನಸಮೂಹವು ನೃತ್ಯ ಮಾಡುತ್ತಾ ಸಂಭ್ರಮಿಸಿದ್ದಾರೆ.
Google Maps ನಲ್ಲಿ ಈ ದೇವಸ್ಥಾನವನ್ನು ಪತ್ತೆಹಚ್ಚಿದ್ದೇವೆ. ಗೂಗಲ್ ನಕ್ಷೆಗಳಲ್ಲಿ ಸುಲ್ತಾನಪುರ ಕಾಳಿ ದೇವಸ್ಥಾನದ ಆಚರಣೆಯ ಚಿತ್ರಗಳನ್ನು ಮತ್ತು ವಿಡಿಯೋಗಳ ಹೋಲಿಕೆಯನ್ನು ಈ ಕೆಳಗಿನ ದೃಶ್ಯಗಳಲ್ಲಿ ನೋಡಬಹುದು. ಈ ದೇವಾಲಯವು ಬಾಂಗ್ಲಾದೇಶದ್ದಲ್ಲ, ಪಶ್ಚಿಮ ಬಂಗಾಳದ್ದು ಎಂಬುದನ್ನೂ ಗೂಗಲ್ ಮ್ಯಾಪ್ ಖಚಿತಪಡಿಸುತ್ತದೆ.

ಖಂಡಗೋಶ್ ಪೊಲೀಸ್ ಉಪನಿರೀಕ್ಷಕ ರಾಕೇಶ್ ರೋಷನ್ ಅವರನ್ನು ಸಂಪರ್ಕಿಸಿದಾಗ, ಅವರು ಕಾಳಿ ದೇವಿಯನ್ನು ಪೂಜಿಸುವಾಗ ಭಕ್ತರು ಅನುಸರಿಸುವ ಪ್ರಾಚೀನ ಸಂಪ್ರದಾಯದ ಕುರಿತು ಮಾತನಾಡಿದರು. “ಅರ್ಚಕರು ಮೊದಲು ವಿಗ್ರಹದ ತಲೆಯನ್ನು ತೆಗೆದುಕೊಂಡು ಹೋಗಿ ಕೊಳದಲ್ಲಿ ಮುಳುಗಿಸುತ್ತಾರೆ. ನಂತರ ಭಕ್ತರು ಹಬ್ಬದ ಮೆರವಣಿಗೆಯಲ್ಲಿ ತೊಡಗಿ ವಿಗ್ರಹದ ವಿವಿಧ ಭಾಗಗಳನ್ನು ತೆಗೆದುಕೊಂಡು ಹೋಗಿ ಕೊಳದಲ್ಲಿ ಮುಳುಗಿಸುತ್ತಾರೆ”. ಈ ವಿಡಿಯೋ ಯಾವುದೇ ಕೋಮು ನಿರೂಪಣೆಯನ್ನು ಹೊಂದಿಲ್ಲ ಎಂದು ಪೊಲೀಸ್ ಉಪನಿರೀಕ್ಷಕ ರಾಕೇಶ್ ರೋಷನ್ ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಸುಲ್ತಾನ್ಪುರ ಕಾಳಿ ದೇವಸ್ಥಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕಾಳಿ ಪೂಜೆಯ ಆಚರಣೆಯ ವಿಡಿಯೋವನ್ನು, ಸುಳ್ಳು ಕೋಮು ಹೇಳಿಕೆಯೊಂದಿಗೆ ಬಾಂಗ್ಲಾದೇಶದಲ್ಲಿ ಕಾಳಿ ದೇವಸ್ಥಾನವನ್ನು ಮುಸ್ಲಿಮರು ದ್ವಂಸಗೊಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :

