ನಿಮಗೆ ನಾಯಿ ಕಚ್ಚಿದರೆ, ನೀವು ಯಾವುದೇ ಲಸಿಕೆ ತೆಗೆದುಕೊಳ್ಳಬಾರದು ಮತ್ತು ಮೂರು ದಿನಗಳ ಕಾಲ ಉಪವಾಸ ಇರಬೇಕು. ದೇಹವು ನೈಸರ್ಗಿಕವಾಗಿ ರೇಬೀಸ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬ ಯೂಟ್ಯೂಬ್ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಜಗತ್ತಿನ ಯಾವುದೇ ಲಸಿಕೆಯಲ್ಲಿ ಯಾವುದೇ ಪ್ರತಿರೋಧಕಗಳಿಲ್ಲ. ನಿಮ್ಮ ದೇಹವೇ ಪ್ರತಿರೋಧಕಗಳನ್ನು ಉತ್ಪಾದಿಸುತ್ತದೆ. ಲಸಿಕೆಗಳಲ್ಲಿಯೂ ಕೂಡ ನಾಯಿ ಕಚ್ಚಿದಾಗ ವರ್ಗಾಯಿಸುವ ಅದೇ ವೈರಸ್ ಅನ್ನು ಹೊಂದಿರುತ್ತವೆ” ಎಂದು ವಿವಾದತ್ಮಕ ಹೇಳಿಕೆ ನೀಡಿರುವ ಸಂದರ್ಶನದ ವಿಡಿಯೋವೊಂದು ವೈರಲ್ ಆಗುತ್ತಿದೆ.
“ನಾಯಿಯು ನಿಮಗೆ ಕಚ್ಚಿದರೆ, ನಾಯಿಗೆ ರೇಬಿಸ್ ಇದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಈ ಸಂಪೂರ್ಣ ಲಸಿಕೆ ವ್ಯಾಪಾರವು ಭಯದ ಆಧಾರದ ಮೇಲೆ ನಡೆಯುತ್ತದೆ. ಲಸಿಕೆ ತೆಗೆದುಕೊಳ್ಳುವ ಬದಲು, ಮೂರು ದಿನಗಳವರೆಗೆ ಉಪವಾಸ ಮಾಡಿ. ಹಣ್ಣು, ಎಳನೀರು, ಜ್ಯೂಸ್, ಅರಿಶಿನ ನೀರು, ಕರಿಬೇವಿನ ಎಲೆಗಳು, ಮತ್ತು ಸಲಾಡ್ಗಳನ್ನು ಸೇವಿಸಿ. ಈ ಸಮಯದಲ್ಲಿ ಘನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ. ನಿಮ್ಮ ದೇಹವು ಸ್ವಾಭಾವಿಕವಾಗಿ ರೋಗ ಪ್ರತಿರೋಧಕಗಳನ್ನು ರಚಿಸುತ್ತದೆ” ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು.
https://youtu.be/61mS7sw38Ss?si=gVt-IcA6GdYCcWCH
ಫ್ಯಾಕ್ಟ್ಚೆಕ್
ಉಪವಾಸವು ರೇಬೀಸ್ ಚುಚ್ಚುಮದ್ದಿಗೆ ಪರ್ಯಾಯವಲ್ಲ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಶ್ರೀನಗರದ ಕಮ್ಯುನಿಟಿ ಮೆಡಿಸಿನ್ ಸರ್ಕಾರಿ ವೈದ್ಯಕೀಯ ಕಾಲೇಜು ವಿಭಾಗದ ಮುಖ್ಯಸ್ಥ ಡಾ.ಸಲೀಂ ಖಾನ್ರವರು, “ನಾಯಿ ಕಡಿತಕ್ಕೆ ಉಪವಾಸ ಮಾಡುವುದರಿಂದ ರೇಬೀಸ್ ಗುಣವಾಗುತ್ತದೆ ಎಂಬುದು ತಪ್ಪುಕಲ್ಪನೆ ಹಾಗೂ ಇದು ಜನರನ್ನು ದಾರಿತಪ್ಪಿಸುವ ಹೇಳಿಕೆ ಎಂದು ಹೇಳಿದ್ದಾರೆ.
“ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ” ಡಾ.ಖಾನ್ ಹೇಳಿದ್ದಾರೆ. “ನಾಯಿ ಕಡಿತ ಸೇರಿದಂತೆ ಯಾವುದೇ ಪ್ರಾಣಿಗಳಿಂದ ಕಡಿತಕ್ಕೊಳಗಾದರೆ ತಕ್ಷಣ ಪ್ರಮಾಣಿತ ವ್ಯಾಕ್ಸಿನೇಷನ್ ಕಟ್ಟುಪಾಡುಗಳನ್ನು ಅನುಸರಿಸುವುದು ಅತ್ಯಗತ್ಯ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮಾರ್ಗಸೂಚಿಗಳು ಸಹ ಪ್ರಾಣಿಗಳ ಕಡಿತಕ್ಕೆ ಚಿಕಿತ್ಸೆಯಾಗಿ ಉಪವಾಸವನ್ನು ಪ್ರಾಮಾಣೀಕರಿಸುವುದಿಲ್ಲ.
“96% ರೇಬೀಸ್ ನಮ್ಮ ದೇಶದಲ್ಲಿ ನಾಯಿಗಳಿಂದ ವರದಿಯಾಗಿದೆ. ಕ್ರೋಧೋನ್ಮತ್ತ ನಾಯಿಯ ಕಡಿತದಿಂದ ರೇಬೀಸ್ ಪಡೆಯುವ ಸಾಧ್ಯತೆಗಳು 50 ಪ್ರತಿಶತಕ್ಕಿಂತ ಕಡಿಮೆಯಿದ್ದರೂ, ಇದು 100 ಪ್ರತಿಶತದಷ್ಟು ಮಾರಣಾಂತಿಕವಾಗಿದೆ ”ಮಾರ್ಗಸೂಚಿಗಳು ಬಹಿರಂಗಪಡಿಸುತ್ತವೆ.
“ಪ್ರಾಣಿ ಕಚ್ಚುವಿಕೆಯ ಪ್ರತಿಯೊಂದು ಪ್ರಕರಣದಲ್ಲಿ, ಅದು ಪ್ರಚೋದಿಸಲ್ಪಟ್ಟಿರಲಿ ಅಥವಾ ಇಲ್ಲದಿರಲಿ, ಒಬ್ಬರು 10-15 ನಿಮಿಷಗಳ ಕಾಲ ಸೋಪ್ ಮತ್ತು ಹರಿಯುವ ನೀರಿನಿಂದ ತೊಳೆಯಬೇಕು, ಇದು 90% ವೈರಸ್ ಅನ್ನು ನಿರ್ಮೂಲನೆ ಮಾಡುತ್ತದೆ. ಲಭ್ಯವಿದ್ದರೆ ಗಾಯಗಳನ್ನು ಪೊವಿಡೋನ್-ಅಯೋಡಿನ್ನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ”ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾರ್ಗಸೂಚಿಯಲ್ಲಿ ನಾಯಿ ಕಚ್ಚಿದ ದಿನ, ಮೂರನೇ ಮತ್ತು ಏಳನೇ ದಿನ ಮತ್ತು 14-28 ದಿನಗಳ ನಡುವೆ ರೇಬೀಸ್ ವಿರೋಧಿ ಲಸಿಕೆಯೊಂದಿಗೆ ನಾಲ್ಕು ಡೋಸ್ ವ್ಯಾಕ್ಸಿನೇಷನ್ ಅನ್ನು ಪಡೆಯಬೇಕೆಂದು ಸೂಚಿಸುತ್ತವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದೆ.
ರೇಬೀಸ್ ಇಮ್ಯೂನ್ ಗ್ಲೋಬ್ಯುಲಿನ್ (RIG) ಎಂಬುದು ರೇಬೀಸ್ ವೈರಸ್ಗೆ ಪ್ರತಿಕಾಯಗಳನ್ನು ಒಳಗೊಂಡಿರುವ ರಕ್ತದ ಉತ್ಪನ್ನವಾಗಿದೆ ಮತ್ತು ವೈರಸ್ಗೆ ಒಡ್ಡಿಕೊಂಡ ನಂತರ ರೇಬೀಸ್ ಸೋಂಕನ್ನು ತಡೆಗಟ್ಟಲು ಬಳಸಲಾಗುತ್ತದೆ. ಮೊನೊಕ್ಲೋನಲ್ ಪ್ರತಿಕಾಯಗಳು (mAbs) ರೇಬೀಸ್ ಚಿಕಿತ್ಸೆಗಾಗಿ ಬಳಸಬಹುದಾದ ಪ್ರಯೋಗಾಲಯ-ಉತ್ಪಾದಿತ ಅಣುಗಳಾಗಿವೆ.
ವೈರಸ್, ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಸಾಮಾನ್ಯವಾಗಿ ಸ್ನಾಯುವಿನ ಮೂಲಕ ಬಾಹ್ಯ ನರಗಳಿಗೂ ಮತ್ತು ಮೆದುಳಿಗೆ ಪ್ರವೇಶಿಸುತ್ತದೆ. ತಕ್ಷಣದ ಕ್ರಿಯೆಯನ್ನು ಹೊಂದಿರುವ RIG/ಮೊನೊಕ್ಲೋನಲ್ ಆಂಟಿಬಯೋಟಿಕ್ ಇಂಜೆಕ್ಷನ್ಅನ್ನು ಸ್ಥಳೀಯವಾಗಿ ಲಭ್ಯವಿರುವ ಆಸ್ಪತ್ರೆಗಳಲ್ಲಿ ಪಡೆಯುವ ಮೂಲಕ ಈ ಹರಡುವಿಕೆಯನ್ನು ತಡೆಯಬಹುದು.
- ನಾಯಿ ಕಚ್ಚಿದಾಗ ನಾಯಿ ಕಚ್ಚಿದ ಜಾಗವನ್ನು ತಕ್ಷಣವೇ ನೀರು-ಸೋಪು ಮತ್ತು ಸೋಂಕುನಿವಾರಕ ದ್ರಾವಣ ಬಳಸಿ ತೊಳೆಯಬೇಕು
- ಮನೆಮದ್ದು ಎಂದು ಎಣ್ಣೆ ಕಾರದ ಪುಡಿ ಗಿಡಮೂಲಿಕೆ ಪುಡಿಗಳನ್ನು ಹಚ್ಚಬಾರದು
- ನಾಯಿಕಚ್ಚಿ ಆದ ಜಾಗಕ್ಕೆ ಬಟ್ಟೆ ಅಥವಾ ಬ್ಯಾಂಡೇಜ್ ಹಾಕಬಾರದು
- ವಿಳಂಬ ಮಾಡದೇ ವೈದ್ಯರನ್ನು ಕಾಣಬೇಕು. ಚಿಕಿತ್ಸೆ ಪಡೆಯಬೇಕು
- ವೈದ್ಯರು ಸೂಚಿಸುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಲಸಿಕೆ ಮತ್ತು ಚುಚ್ಚುಮದ್ದಿನ ಎಲ್ಲಾ ಡೋಸ್ಗಳನ್ನು ತಪ್ಪದೇ ತೆಗೆದುಕೊಳ್ಳಬೇಕು.
- ಕಚ್ಚಿದ ನಾಯಿಯ ಗುರುತನ್ನು ಇಟ್ಟುಕೊಳ್ಳಬೇಕು. ಅದರ ವರ್ತನೆಯ ಮೇಲೆ ನಿಗಾ ಇರಿಸಬೇಕು. ಅದು ಬೀದಿನಾಯಿಯಾಗಿದ್ದು ಸಾಧ್ಯವಿದ್ದರೆ ರೇಬಿಸ್ ಲಸಿಕೆ ಹಾಕಿಸಬೇಕು. ಸಾಕುನಾಯಿಗಳಿದ್ದರೆ ಅವಕ್ಕೆ ಪ್ರತಿ ವರ್ಷ ರೇಬಿಸ್ ಲಸಿಕೆ ಹಾಕಿಸಬೇಕು. ಆಗ ರೇಬಿಸ್ ಹರಡುವುದನ್ನು ತಡೆಗಟ್ಟಬಹುದು.
“ರೇಬೀಸ್ ವೈರಸ್ನ ಮತ್ತಷ್ಟು ಇನಾಕ್ಯುಲೇಷನ್ ಅನ್ನು ಸುಗಮಗೊಳಿಸಲು ಹೊಲಿಗೆಯನ್ನು ತಪ್ಪಿಸಬೇಕು ಆದರೆ ಅಗತ್ಯವಿದ್ದಲ್ಲಿ, ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ (RIG) ಅನ್ನು ನೀಡಿದ ನಂತರ ಸಡಿಲವಾದ ಹೊಲಿಗೆ ಹಾಕಬಹುದು. ಸರಿಯಾದ ಗಾಯದ ನಿರ್ವಹಣೆಯೊಂದಿಗೆ, 90% ವೈರಸ್ ಅನ್ನು ನಿರ್ಮೂಲನೆ ಮಾಡಬಹುದು” ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ.
ರೇಬೀಸ್ ಬಗ್ಗೆ ಮೂಢನಂಬಿಕೆ ಸಲ್ಲದು ಎಂದು ರೇಬಿಸ್ ತಜ್ಞ ಶ್ರೀಕೃಷ್ಣ ಇಸಳೂರರವರು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಪ್ರಜಾವಾಣಿ ಲೇಖನವೊಂದರಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಇತ್ತೀಚೆಗೆ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ಮಗನನ್ನು ಉಳಿಸಿಕೊಂಡುವಂತೆ ಅಂಗಲಾಚಿದರು. ಆದರೆ ಕಾಲಮಿಂಚಿತ್ತು ಬಾಲಕನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಾಲಕನಿಗೆ ನಾಯಿ ಕಚ್ಚಿತ್ತು. ತಕ್ಷಣವೇ ಬಾಲಕನನ್ನು ತಂದೆ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ತೋಳಿನ ಭಾಗಕ್ಕೆ ಬಳ್ಳಿಯೊಂದನ್ನು ಕಟ್ಟಿದರೆ ರೇಬಿಸ್ ಗುಣವಾಗುತ್ತದೆ ಎಂಬ ನಂಬಿಕೆ. ಎರಡು ತಿಂಗಳ ನಂತರ ಬಾಲಕನಲ್ಲಿ ರೇಬಿಸ್ ರೋಗಲಕ್ಷಣಗಳು ಕಾಣಿಸಿಕೊಂಡವು. ಕೆಲವೇ ದಿನಗಳಲ್ಲಿ ಆತ ಮೃತಪಟ್ಟ. ದೊಡ್ಡಬಳ್ಳಾಪುರದ ಬಳಿ ಗ್ರಾಮವೊಂದಲ್ಲಿ 12 ಹಸುಗಳು ಕೆಲವೇ ದಿನಗಳಲ್ಲಿ ಒಂದಾದ ಮೇಲೊಂದು ಮೃತಪಟ್ಟವು. ಗ್ರಾಮಕ್ಕೆ ಗಂಡಾಂತರ ಒದಗಿದೆ ಎಂದು ತಿಳಿದ ಗ್ರಾಮಸ್ಥರು ದೊಡ್ಡ ಹೋಮವೊಂದನ್ನು ಆಯೋಜಸಿದ್ದರು. ರೇಬಿಸ್ನಿಂದ ಹಸು ಸತ್ತಿರುವ ಬಗ್ಗೆ ಅವರಲ್ಲಿ ಅರಿವೇ ಇರಲಿಲ್ಲ. ಹೀಗೆ ರೇಬಿಸ್ ಸುತ್ತಲೂ ಹಲವು ಮೂಢನಂಬಿಕೆಗಳಿವೆ. ಜೊತೆಗೆ ಜಾಗೃತಿಯ ಕೊರತೆಯೂ ಇದೆ. ಒಮ್ಮೆ ರೇಬಿಸ್ ಬಂದರೆ ಜನರನ್ನು ಸಾವಿನಿಂದ ಬಚಾವು ಮಾಡಲು ಸಾಧ್ಯವಿಲ್ಲ. ಸಾವು ಸಂಭವಿಸಲೇ ಬೇಕು. ಆದರೆ ನಾಯಿ ಕಚ್ಚಿದ ಕೂಡಲೇ ಮುಂಜಾಗ್ರತಾ ಕ್ರಮ ವಹಿಸಿದರೆ ಸಾವನ್ನು ತಡೆಯಬಹುದು. ಹಸುಗಳ ನಿರಂತರ ತಪಾಸಣೆಯನ್ನು ಕೂಡ ಮಾಡಿಸಬೇಕಾಗುತ್ತದೆ. ನಾಯಿ ಕಚ್ಚಿದ ಕೂಡಲೇ ಬಟ್ಟೆ ಸೋಪಿನಿಂದ 15 ನಿಮಿಷಗಳವರೆಗೆ ಗಾಯವನ್ನು ಸ್ವಚ್ಛ ಮಾಡಬೇಕು. ನಂತರ ತಕ್ಷಣದಲ್ಲಿಯೇ ವೈದ್ಯರ ಬಳಿ ಹೋಗಬೇಕು. ನಮ್ಮ ಜನರಗಳಲ್ಲಿ ಇರುವ ಮತ್ತೊಂದು ಸಮಸ್ಯೆ ಎಂದರೆ ಲಸಿಕೆ ಪಡೆದುಕೊಳ್ಳುವುದಕ್ಕೆ ಬರದೇ ಇರುವುದು. ಎರಡು ಬಾರಿ ಬಂದವರು ನಂತರ ಲಸಿಕೆ ಪಡೆದುಕೊಳ್ಳುವುದಕ್ಕೆ ಬರುವುದೇ ಇಲ್ಲ. ಈ ನಿರ್ಲಕ್ಷ್ಯವನ್ನು ಜನರು ಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಉಪವಾಸ ಆಚರಿಸುವುದರಿಂದ ರೇಬೀಸ್ ಗುಣಪಡಿಸಬಹುದು ಎಂಬುದು ತಪ್ಪುಕಲ್ಪನೆಯಾಗಿದ್ದು, ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಚುಚ್ಚುಮದ್ದನ್ನು ಪಡೆದುಕೊಳ್ಳಬೇಕು.
ಇದನ್ನು ಓದಿದ್ದೀರಾ? FACT CHECK : ಕಾಡು ಬಸಳೆ ತಿನ್ನುವುದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

