ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ವೀಕ್ಷಿಸಲು ಪ್ರಪಂಚದಾದ್ಯಂತ ಜನರು ಆಗಮಿಸುತ್ತಿದ್ದಾರೆ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ರವರು ಕುಂಭಮೇಳಕ್ಕೆ ಬಂದಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಭಯಾನಿ ಎಂಬ ಮನರಂಜನಾ ಸುದ್ದಿ ಸೇರಿದಂತೆ ಹಲವಾರು ಜಾಲತಾಣಗಳಲ್ಲಿ ಮಹಾಕುಂಭಮೇಳದಲ್ಲಿ ಬಿಲ್ ಗೇಟ್ಸ್ ಕಾಣಿಸಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಬಿಲ್ ಗೇಟ್ಸ್ ಎಂಬ ವ್ಯಕ್ತಿ ಬಿಳಿ ಶರ್ಟ್ ಮತ್ತು ಕನ್ನಡಕವನ್ನು ಧರಿಸಿದ್ದಾರೆ. ಮಹಾಕುಂಭಮೇಳಕ್ಕೆ ಬಿಲ್ಗೇಟ್ಸ್ ನಿಜವಾಗಿಯೂ ಆಗಮಿಸಿದ್ದಾರಾ? ಈ ವೈರಲ್ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿ ಹುಡುಕಾಟ ನಡೆಸಿದಾಗ, 2024ರ ಡಿಸೆಂಬರ್ 24ರಂದು ಗುಲ್ಲಕ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ “ಬಿಲ್ ಗೇಟ್ಸ್ನಂತೆ ಕಾಣುವ ವ್ಯಕ್ತಿ” ಎಂದು ಬರೆಯಲಾಗಿದೆ.
ಈ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯು “ಈ ವ್ಯಕ್ತಿ ಯಾರೆಂದು ಊಹಿಸಿ” ಎಂದು ಹೇಳಿದ್ದಾನೆ. ನಂತರ ಅವನು ನಗುತ್ತಾ, “ಈ ವ್ಯಕ್ತಿ ಬಿಲ್ ಗೇಟ್ಸ್ನಂತೆ ಕಾಣುತ್ತಿದ್ದಾನೆ, ಅವನು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾನೆ” ಎಂದು ಹೇಳಿದ್ದಾನೆ. ನಂತರ ಅವನು ತನ್ನ ಸ್ನೇಹಿತನಿಗೆ ಕ್ಯಾಮೆರಾ ತೋರಿಸಿದಾಗ, ಅವನ ಸ್ನೇಹಿತ ನಕ್ಕಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದ್ದರಿಂದ ಈ ವಿಡಿಯೋವನ್ನು ಮನರಂಜನೆಗಾಗಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಈ ಯೂಟ್ಯೂಬ್ ಚಾನೆಲ್ ಜನವರಿ 15 ರಂದು ಒಂದು ಫೋಟೋ ಹಂಚಿಕೊಂಡಿದೆ. ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿ ಹುಡುಕಾಟ ನಡೆಸಿದಾಗ, ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ವಿಡಿಯೋ ಲಭ್ಯವಾಗಿದೆ. ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಅನಿಲ್ ಯಾದವ್ ಎಂಬ ವ್ಯಕ್ತಿಯ ಸಂಪರ್ಕ ಸಂಖ್ಯೆ ಸಿಕ್ಕಿತು, ಅವರನ್ನು ಸಂಪರ್ಕಿಸಿದಾಗ ಗುಲ್ಲಕ್ ಯೂಟ್ಯೂಬ್ ಚಾನೆಲ್ ಅನ್ನು ತಮ್ಮ ಸಹೋದರ ದೀಪಂಕರ್ ಯಾದವ್ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ಅನಿಲ್ ಯಾದವ್ ಮೂಲಕ ನಾವು ಲಕ್ನೋದ ದೀಪಂಕರ್ ಯಾದವ್ ಅವರೊಂದಿಗೆ ಮಾತನಾಡಿದಾಗ, ಅವರು ನವೆಂಬರ್ 2024ರಲ್ಲಿ ವಾರಣಾಸಿಗೆ ಭೇಟಿ ನೀಡಿದಾಗ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಕನ್ನಡ ಫ್ಯಾಕ್ಟ್ ಚೆಕ್ಗೆ ತಂಡಕ್ಕೆ ತಿಳಿಸಿದ್ದಾರೆ. ಅವರು ಮಣಿಕರ್ಣಿಕಾ ಘಾಟ್ನಲ್ಲಿದ್ದಾಗ, ಘಾಟ್ ಬಳಿಯ ಬಾಲ್ಕನಿಯಲ್ಲಿ ನಿಂತಿದ್ದ ವಿದೇಶಿಯರ ಗುಂಪನ್ನು ನೋಡಿದರು. ಅವರಲ್ಲಿ ಒಬ್ಬರು ಬಿಲ್ ಗೇಟ್ಸ್ ಅವರನ್ನು ಹೋಲುತ್ತಿದ್ದಾರೆ ಎಂದು ಅವರು ಭಾವಿಸಿ. ಮನರಂಜನೆಗಾಗಿ ವಿಡಿಯೋವನ್ನು ರೆಕಾರ್ಡ್ ಮಾಡಿ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದ ಹೊರತಾಗಿ ಅದೇ ಪ್ರದೇಶಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳನ್ನು ಯ್ಯೂಟೂಬ್ ಚಾನಲ್ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಿಲ್ ಗೇಟ್ಸ್ನನ್ನು ಹೋಲುವ ವ್ಯಕ್ತಿ ಸೇರಿದಂತೆ ವಿದೇಶಿಯರ ಗುಂಪನ್ನು ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ. ಈ ವೈರಲ್ ವಿಡಿಯೋಗೂ ಮಹಾಕುಂಭಮೇಳಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. 2024ರ ನವೆಂಬರ್ನಲ್ಲಿ ಯೂಟ್ಯೂಬರ್ ವಾರಣಾಸಿಯಲ್ಲಿನ ವಿದೇಶಿಯರ ಫೋಟೋ ಹಂಚಿಕೊಂಡಿದ್ದಾನೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check | ಅಖಿಲೇಶ್ ಯಾದವ್ ಅವರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂಬುದು ಸುಳ್ಳು

