ಒಂದೇ ಹಳಿಯಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಅಜ್ಮೀರ್ನಿಂದ ಅಸ್ಸಾಂಗೆ ಹೊರಟಿದ್ದ ರೈಲು ಜೈಪುರದಲ್ಲಿ ಅಪಘಾತಕ್ಕೀಡಾಗಿದೆ” ಎಂದು ಈ ವಿಡಿಯೋವನ್ನು ಹಂಚಿಕೊಳ್ಳಾಗುತ್ತಿದೆ.
ಇನ್ಸ್ಟಾಗ್ರಾನ official_sahil_shayar ಹ್ಯಾಂಡಲ್ ಮೂಲಕ ಫೆಬ್ರವರಿ 3 ರಂದು ಜೈಪುರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ ಎಂದು ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.
“ಇಂದು ಬೆಳಗಿನ ಜಾವ 12 ಗಂಟೆಗೆ ಅಜ್ಮೀರ್ನಿಂದ ಅಸ್ಸಾಂಗೆ ಹೋಗುತ್ತಿದ್ದ ರೈಲು ಮಾರ್ಗ ಮಧ್ಯೆ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ 10 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿದ್ದಾರೆ ಎಂದು ವಿಡಿಯೋ ಕ್ಲಿಪ್ ಮೇಲೆ ಬರೆಯಲಾಗಿದೆ”.
ಅನೇಕ ಬಳಕೆದಾರರು ವೈರಲ್ ಪೋಸ್ಟ್ನಲ್ಲಿ ಮಾಡಿದ ಕ್ಲೈಮ್ ಅನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ . ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.
ಫ್ಯಾಕ್ಟ್ಚೆಕ್
ಕನ್ನಡ ಫ್ಯಾಕ್ಟ್ಚೆಕ್ ತಂಡವು ವೈರಲ್ ವಿಡಿಯೋದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ್ದು, ಹಂಚಿಕೊಳ್ಳುತ್ತಿರುವ ಮಾಹಿತಿಯು ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂಬುದನ್ನು ದೃಢೀಕರಿಸಿದೆ. 2019ರ ನವೆಂಬರ್ 11ರಂದು ಹೈದರಾಬಾದ್ನ ಕಾಚಿಗುಡಾ ರೈಲು ನಿಲ್ದಾಣದಲ್ಲಿ ನಡೆದ ರೈಲು ಅಪಘಾತದ ಸಿಸಿಟಿವಿ ದೃಶ್ಯಾವಳಿಯನ್ನು ರಾಜಸ್ಥಾನದ ಜೈಪುರದ್ದು ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಲು ಯತ್ನಿಸುತ್ತಿದ್ದಾರೆ. ಇದೇ ವಿಡಿಯೋವನ್ನು ಒಡಿಶಾದ್ದು ಎಂದು ಈ ಹಿಂದೆ ವೈರಲ್ ಮಾಡಲಾಗಿತ್ತು.
ರಾಜಸ್ಥಾನದ ಹೆಸರಿನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಬಗ್ಗೆ ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿದೆ. ಇಲ್ಲಿ ಕೀವರ್ಡ್ಗಳೊಂದಿಗೆ ಹುಡುಕಾಟ ನಡೆಸಿದಾಗ, ಜೈಪುರದಲ್ಲಿ ಯಾವುದೇ ರೈಲು ಅಪಘಾತ ಸಂಭವಿಸಿದೆ ಎಂಬುನ್ನು ಖಚಿತಪಡಿಸುವ ಒಂದೇ ಒಂದು ಸುದ್ದಿ ನಮಗೆ ಕಂಡುಬಂದಿಲ್ಲ.
ವೈರಲ್ ಕ್ಲಿಪ್ನ ಮೇಲೆ ಇರುವ ‘ವಾಯ್ಸ್ ಆಫ್ ಅಮೇರಿಕಾ’ ಎಂಬ ಲೋಗೋವನ್ನು ನಮ್ಮ ತಂಡವು ಗಮನಿಸಿದೆ. ಇದನ್ನು ಆಧರಿಸಿ, ಯೂಟ್ಯೂಬ್ನಲ್ಲಿ ಮೂಲ ವಿಡಿಯೋವನ್ನು ಹುಡುಕಿದಾಗ ‘ವಾಯ್ಸ್ ಆಫ್ ಅಮೇರಿಕಾ’ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ನಮಗೆ ಲಭಿಸಿದೆ. 2019ರ ನವೆಂಬರ್ 12ರಂದು ಅಪ್ಲೋಡ್ ಮಾಡಿದ ಈ ವಿಡಿಯೋದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ದುರ್ಘಟನೆಯು 2019ರ ನವೆಂಬರ್ 11ರಂದು ಹೈದರಾಬಾದ್ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿತ್ತು.
ಹೆಚ್ಚಿನ ಮಾಹಿತಿಗಾಗಿ ನಾವು ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಹೈದರಾಬಾದ್ ಸಮೀಪದ ಕಾಚಿಗುಡ ನಿಲ್ದಾಣದಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಟಿವಿ 9 ಭಾರತವರ್ಷದ ಯೂಟ್ಯೂಬ್ ಚಾನೆಲ್ನಲ್ಲಿನ ವರದಿಯಲ್ಲಿ ತಿಳಿದು ಬಂದಿದೆ. ಈ ಸುದ್ದಿಯಲ್ಲಿಯೂ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಲಾಗಿದೆ. ಈ ವರದಿಯನ್ನು 2019ರ ನವೆಂಬರ್ 12ರಂದು ಅಪ್ಲೋಡ್ ಮಾಡಲಾಗಿದೆ. ಸಿಗ್ನಲ್ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
Jagran.com ನಲ್ಲಿ 2019ರ ನವೆಂಬರ್ 11ರಂದುಬ ಪ್ರಕಟಿಸಲಾದ ವರದಿಯು ನಮಗೆ ಲಭಿಸಿದ್ದು, ಅದರಲ್ಲಿ, “ಹೈದರಾಬಾದ್ನ ಕಾಚಿಗುಡ ರೈಲು ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿಯಾಗಿ 12 ಜನರು ಗಾಯಗೊಂಡಿದ್ದಾರೆ. ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ (ಎಂಎಂಟಿಎಸ್) ರೈಲು ಬೆಳಿಗ್ಗೆ 10.30 ರ ಸುಮಾರಿಗೆ ಕರ್ನೂಲ್ ಸಿಟಿ-ಸಿಕಂದರಾಬಾದ್ ರೈಲ್ವೆ ಇಂಟರ್ಸಿಟಿ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಹೈದರಾಬಾದ್ನ ಕಾಚಿಗುಡ ರೈಲು ನಿಲ್ದಾಣದಲ್ಲಿ ಸೋಮವಾರ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 12 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಮಾಡಿದೆ. ಸಂಪೂರ್ಣ ಸುದ್ದಿಯನ್ನು ಇಲ್ಲಿ ವಿವರವಾಗಿ ಓದಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹೈದರಾಬಾದ್ನಲ್ಲಿ ನಡೆದ ರೈಲು ಅಪಘಾತದ ಹಳೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರಾಜಸ್ಥಾನದಲ್ಲಿ ಇಂತಹ ಯಾವುದೇ ರೈಲು ಅಪಘಾತ ಸಂಭವಿಸಿಲ್ಲ.
ಇದನ್ನು ಓದಿದ್ದೀರಾ? Fact Check: CEC ರಾಜೀವ್ ಕುಮಾರ್ ಕೇಂದ್ರ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ಹಳೆಯ ಪೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

