ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಓರ್ವ ವ್ಯಕ್ತಿ ರಕ್ತದ ಮಡುವಿನಲ್ಲಿ ರಸ್ತೆಯ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ದುಷ್ಕರ್ಮಿಗಳು ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಮೂರು-ನಾಲ್ಕು ಬಾರಿ ಆತನ ಮೇಲೆ ಹಾಕಿ ಸಾಯಿಸುತ್ತಿರುವುದು ಕಂಡು ಬಂದಿದೆ. ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಹೀಗಿದೆ ಎಂದು ಈ ವಿಡಿಯೋದಲ್ಲಿ ಬರೆದುಕೊಂಡು ಹಂಚಿಕೊಳ್ಳಲಾಗುತ್ತಿದೆ. ಕೆಲ ಮಾಧ್ಯಮಗಳು ಕೂಡ ಇದನ್ನೇ ನಿಜವೆಂದು ವರದಿ ಕೂಡ ಮಾಡಿವೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ ಹಿಂದೂಗಳ ಪರಿಸ್ಥಿತಿ. ಎಚ್ಚರ ಹಿಂದುಗಳೇ’’ ಎಂದು ಬರೆದುಕೊಂಡಿದ್ದಾರೆ ವಿಡಿಯೋ ನೋಡಿದ ಹಲವರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡು ಮುಸಲ್ಮಾನರ ವಿರುದ್ಧವೂ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ವರದಿಗಳು ಕಂಡು ಬಂದವು. ಇವುಗಳಲ್ಲಿ ಢಾಕಾದಲ್ಲಿನ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಮಿಟ್ಫೋರ್ಡ್ ಆಸ್ಪತ್ರೆ) ಗೇಟ್ ನಂಬರ್ 3 ಬಳಿಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಎಂಬ ವ್ಯಕ್ತಿಯನ್ನು ಕೆಲವು ವ್ಯಕ್ತಿಗಳು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಅದೇ ರೀತಿ ಹತ್ಯೆಯಾದ ಲಾಲ್ ಚಂದ್ ಒಬ್ಬ ಗುಜರಿ ವ್ಯಾಪಾರಿಯಾಗಿದ್ದು, ಹತ್ಯೆ ಮಾಡಿದರ ನಡುವಿನ ವ್ಯಾಪಾರದ ಬಗೆಗಿನ ದ್ವೇಷದಿಂದ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಲಾಲ್ ಚಂದ್ ಯಾವ ಸಮುದಾಯಕ್ಕೆ ಸೇರಿದ್ದವನಾಗಿದ್ದಾನೆ ಎಂದು ಪರಿಶೀಲನೆ ನಡೆಸಲು ನಾವು ಕೆಲವೊಂದು ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಬಾಂಗ್ಲಾದೇಶ ಸರ್ಕಾರ (ಮುಖ್ಯ ಸಲಹೆಗಾರ) ಫ್ಯಾಕ್ಟ್ಚೆಕ್ ವಿಭಾಗದ ಒಂದು ಪೋಸ್ಟ್ ಕಂಡು ಬಂದಿದ್ದು ಅದರಲ್ಲಿ ” ಸಾವನ್ನಪ್ಪಿದ ವ್ಯಕ್ತಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ ಹಿಂದೂ ಎಂದು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ. ಲಾಲ್ ಚಂದ್ ಅಲಿಯಾಸ್ ಸೋಹಾಗ್ ಮುಸ್ಲಿಂ, ಆತನ ತಂದೆ-ತಾಯಿಯ ಹೆಸರುಗಳು ಎಂಡಿ ಅಯ್ಯುಬ್ ಅಲಿ, ಅಲಿಯಾ ಬೇಗಂ” ಎಂದು ಸ್ಪಷ್ಟ ಪಡಿಸಿರುವುದು ಕೂಡ ಕಂಡು ಬಂದಿದೆ. ಈ ಮೂಲಕ ಹತ್ಯೆಯಾದ ಲಾಲ್ ಚಂದ್ ಹಿಂದೂ ಅಲ್ಲ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದ್ಧವನಾಗಿದ್ದಾನೆ ಎಂಬುದು ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಲಾಲ್ಚಂದ್ ಎಂಬ ಹಿಂದೂವನ್ನು ಬಾಂಗ್ಲಾದೇಶದ ಮುಸಲ್ಮಾನರು ಧಾರ್ಮಿಕ ಕಾರಣಗಳಿಂದ ಕೊಂದಿದ್ದಾರೆ ಎಂಬುದು ಸುಳ್ಳು. ಸಾವನ್ನಪ್ಪಿದ ಲಾಲ್ಚಂದ್ ಕೂಡ ಮುಸಲ್ಮಾನನಾಗಿದ್ದು, ಆತ ಗುಜರಿ ವ್ಯಾಪಾರವನ್ನು ಮಾಡುತ್ತಿದ್ದ ಹಾಗೂ ಆರೋಪಿಗಳೊಂದಿಗಿನ ವ್ಯಾಪಾರದ ದ್ವೇಷದಿಂದ ಆತನ ಹತ್ಯೆ ನಡೆದಿದೆ. ಹೀಗಾಗಿ ಕೋಮು ಕಾರಣದಿಂದ ಕೊಲೆಯಾಗಿದೆ ಎಂಬುದು ಕೂಡ ಸುಳ್ಳಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಉತ್ತರಪ್ರದೇಶದಲ್ಲಿ ಮೊಹರಂ ಮೆರವಣಿಗೆ ವೇಳೆ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬುದು ಸುಳ್ಳು

