ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ವೈರಲ್ ಆಗಿದೆ, ಅದರಲ್ಲಿ ಇರಾನ್ ತನ್ನ ಒಬ್ಬ ಮುಸ್ಲಿಂ ನಾಗರಿಕನನ್ನು ಬ್ಯಾಲಿಸ್ಟಿಕ್ ಮಿಸೈಲ್ಗೆ ಕಟ್ಟಿ ಸ್ಫೋಟಿಸಿದೆ ಎಂದು ಹೇಳಲಾಗಿದೆ. ಈ ಸುದ್ದಿಯನ್ನು ಕೆಲವು ವಿಡಿಯೋ ಕ್ಲಿಪ್ಗಳು ಮತ್ತು ಚಿತ್ರಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಇದು ಇರಾನ್ನ ಆಡಳಿತದ ಕ್ರೂರತೆಯನ್ನು ತೋರಿಸುತ್ತದೆ ಎಂದು ಬಿಂಬಿಸಲಾಗಿದೆ. ಈ ವೈರಲ್ ಪೋಸ್ಟ್ಗಳು ಜನರಲ್ಲಿ ಭಯ, ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿವೆ, ವಿಶೇಷವಾಗಿ ಇರಾನ್ನ ರಾಜಕೀಯ ಮತ್ತು ಧಾರ್ಮಿಕ ನೀತಿಗಳ ಬಗ್ಗೆ ಚರ್ಚೆಗಳನ್ನು ತೀವ್ರಗೊಳಿಸಿವೆ.

ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಜನರಲ್ಲಿ ಇರಾನ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ಸೃಷ್ಟಿಸಿದೆ. ಅನೇಕರು ಈ ಘಟನೆಯನ್ನು ಇರಾನ್ನ ಮಾನವ ಹಕ್ಕುಗಳ ಉಲ್ಲಂಘನೆಯ ಒಂದು ಉದಾಹರಣೆಯಾಗಿ ಚಿತ್ರಿಸಿದ್ದಾರೆ. ಈ ಕ್ಲಿಪ್ಗಳು ಮತ್ತು ಚಿತ್ರಗಳು ಜನರನ್ನು ದಾರಿತಪ್ಪಿಸಲು ಸಾಕಷ್ಟು ಭಾವನಾತ್ಮಕವಾಗಿ ರೂಪಿಸಲಾಗಿದ್ದು, ಇದರಿಂದ ಸಾಮಾನ್ಯ ಜನರು ಇರಾನ್ನ ಆಡಳಿತದ ಬಗ್ಗೆ ತಪ್ಪು ಊಹೆಗಳನ್ನು ಮಾಡಿಕೊಳ್ಳುವಂತೆ ಮಾಡಿದೆ. ಈ ಸುದ್ದಿಯು ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಮೊದಲಿಗೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಫೋಟೋ ನೈಜ್ಯತೆಗೆ ದೂರವಾದಂತಿದೆ. ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿ ಯಾವುದೇ ರೀತಿಯಾದ ಭಾವನೆಗಳನ್ನು ಹೊರಹಾಕದಿರುವುದು ಕಂಡು ಬಂದಿದೆ. ಇನ್ನು ಫೋಟೋ ಕೂಡ ನೈಜತೆಯಿಂದ ಇಲ್ಲ. ಇನ್ನು ಕ್ಷಿಪಣಿಯನ್ನು ನಿಲ್ಲಿಸಿರುವ ರೀತಿಯ ಕೂಡ ಅವೈಜ್ಞಾನಿಕವಾಗಿ ಇದೆ. ಹಾಗಾಗಿ ವೈರಲ್ ಫೋಟೋ AI ನಿಂದ ನಿರ್ಮಿಸಲಾಗಿರುವ ಅನುಮಾನ ಕೂಡ ಮೂಡಿದೆ.

ಹೀಗಾಗಿ ನಾವು ಎಐ ಪತ್ತೆ ಸಾಧನ WasitAI ಮತ್ತು IsitAI ಮೂಲಕ ಪರೀಕ್ಷೆ ನಡೆಸಿದ್ದೇವೆ. WasitAI ಈ ವೈರಲ್ ಫೋಟೋ ಖಚಿತವಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ. ಹಾಗೆಯೆ IsitAI ಈ ಫೋಟೋ ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. ಇನ್ನು ಹೈವ್ ಮಾಡರೇಷನ್ AI ಫೋಟೊ ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ವೈರಲ್ ಫೋಟೋವನ್ನು ಪರಿಶೀಲನೆ ನಡೆಸಲಾಗಿದ್ದು, ಇದು ಕೂಡ ಶೇ.99 ರಷ್ಟು ವೈರಲ್ ಫೋಟೋ AI ನಿಂದ ನಿರ್ಮಿಸಲಾಗಿದೆ ಎಂಬುದು ಖಚಿತವಾಗಿದೆ.



ಒಟ್ಟಾರೆಯಾಗಿ ಹೇಳುವುದಾದರೆ ಮೊಸಾದ್ ಏಜೆಂಟ್ ಎಂದು ಇರಾನ್ ತನ್ನ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಿದೆ ಎಂದು ವೈರಲ್ ಆಗುತ್ತಿರುವ ಫೋಟೋ AI ನಿಂದ ನಿರ್ಮಿಸಲಾಗಿದೆ. ಹಾಗಾಗಿ ವೈರಲ್ ಫೋಟೊವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇಸ್ರೇಲ್ ದಾಳಿಯ ಭಯದಿಂದ ಇರಾನ್ ಪ್ರಜೆಗಳು ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

