ಬಾಲಿವುಡ್ ನಟ ಅಜಯ್ ದೇವ್ಗನ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಿಎಂ ರೇವಂತ್ ರೆಡ್ಡಿ ದೇವಗನ್ ಅವರಿಗೆ ಹಾರ ಮತ್ತು ಹೂಗುಚ್ಚ ನೀಡುತ್ತಿರುವ ಫೋಟೋಗಳನ್ನು ಹಂಚಿಕೊಂಡ ಹಲವರು, ನಟ ಅಜಯ್ ದೇವಗನ್ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಫೋಟೋ ನೋಡಿದ ಹಲವು ಮಂದಿ ಅಜಯ್ ದೇವ್ಗನ್ ನಿಜವಾಗಿಯೂ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದು ನಂಬಿದ್ದಾರೆ. ಹೀಗಾಗಿ ಈ ಫೋಟೋ ಹಲವು ರಾಜಕೀಯ ಚರ್ಚೆಗೆ ಕೂಡ ಕಾರಣವಾಗಿದೆ. ಸಾಕಷ್ಟು ಮಂದಿ ತೆಲಂಗಾಣ ಕಾಂಗ್ರೆಸ್ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿರುವುದರಿಂದ ಈಗ ಸ್ಟಾರ್ ನಟ-ನಟಿಯರನ್ನು ತಮ್ಮ ಪಕ್ಷಕ್ಕೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಕಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಅಪ್ಲೋಡ್ ಮಾಡಿದ್ದೆವು. ಈ ವೇಳೆ ನಮಗೆ ಜುಲೈ 8, 2025 ರಂದು ನ್ಯೂಸ್ 18 , ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಮಿಡ್-ಡೇ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳು , ದೇವಗನ್ ಅವರು ಜುಲೈ 7 ರಂದು ದೆಹಲಿಯ ಅವರ ನಿವಾಸದಲ್ಲಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾದರು ಎಂದು ದೃಢಪಡಿಸಿರುವುದು ಕಂಡು ಬಂದಿದೆ. ಆದರೆ ಇಲ್ಲಿ ಎಲ್ಲಿಯೂ ಅಜಯ್ ದೇವ್ಗನ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂಬ ಮಾಹಿತಿ ಕಂಡು ಬಂದಿಲ್ಲ

ದೇವಗನ್ ತೆಲಂಗಾಣದಲ್ಲಿ ಅನಿಮೇಷನ್, ದೃಶ್ಯ ಪರಿಣಾಮಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ವಿಶ್ವ ದರ್ಜೆಯ ಚಲನಚಿತ್ರ ಸ್ಟುಡಿಯೋವನ್ನು ನಿರ್ಮಿಸುವ ಪ್ರಸ್ತಾಪವನ್ನು ಮುಂದಿಡಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ ಎಂಬುದು ಈ ವರದಿಗಳಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ತೆಲಂಗಾಣ ಸಿಎಂಒದ ಅಧಿಕೃತ ವೆಬ್ಸೈಟ್ ಸಭೆಯ ವಿವರಗಳ ಪತ್ರಿಕಾ ಪ್ರಕಟಣೆಯನ್ನು ಸಹ ಬಿಡುಗಡೆ ಮಾಡಿದೆ .

ಸಿಎಂ ರೆಡ್ಡಿ ಅವರ ಅಧಿಕೃತ ಎಕ್ಸ್ ಹ್ಯಾಂಡಲ್ ಪ್ರಕಾರ , ದೇವಗನ್ ಹೂಡಿಕೆ ಪ್ರಸ್ತಾವನೆ ಮತ್ತು AI-ಚಾಲಿತ ಚಲನಚಿತ್ರ ನಗರಕ್ಕೆ ಸಂಬಂಧಿಸಿದ ಮುಂಬರುವ ಔಪಚಾರಿಕ ಘೋಷಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಆದರೆ ಇಲ್ಲಿಯೂ ಕೂಡ ಅಜಯ್ ದೇವ್ಗನ್ ಕಾಂಗ್ರೆಸ್ಗೆ ಸೇರ್ಪಡೆಯಾಗುವ ಕುರಿತು ಯಾವುದೇ ಮಾಹಿತಿಗಳು ಕಂಡು ಬಂದಿಲ್ಲ.
Met Bollywood actor shri Ajay Devgan Ji & discussed his venture to promote technology in films, especially animation, VFX , world-class quality design, and post production facilities in #Hyderabad.
He not only envinced great interest in bringing best-of-breed professionals and… pic.twitter.com/nXCLcCh1mP
— Revanth Reddy (@revanth_anumula) July 7, 2025
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಹೀಗಾಗಿ ವೈರಲ್ ಆಗುತ್ತಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
ಇದನ್ನೂ ಓದಿ : Fact Check | ಭಾರತೀಯ ಸೇನೆಯ ದಾಳಿಯಲ್ಲಿ ಮಗುವೊಂದು ಸಾವನ್ನಪ್ಪಿದೆ ಎಂದು 2021ರ ಫೋಟೋ ಹಂಚಿಕೊಳ್ಳಲಾಗುತ್ತಿದೆ

