ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ದೆಹಲಿಯಲ್ಲಿ AAP ಸರ್ಕಾರದ ಅವಧಿಯಲ್ಲಿ ಕುಡಿಯುವ ನೀರು, ಒಳಚರಂಡಿ ಮತ್ತು ರಸ್ತೆಗಳ ಸಮಸ್ಯೆಗಳನ್ನು ಪರಿಹರಿಸಲಾಗಲಿಲ್ಲ ಎಂದು ಕೇಜ್ರಿವಾಲ್ ಸ್ವತಃ ಒಪ್ಪಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಸ್ಕ್ರೀನ್ಶಾಟ್ ಪೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2025ರ ಜನವರಿ 20ರಂದು AAP ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾದ ನೇರ ಪ್ರಸಾರದ ಪೂರ್ಣ ವಿಡಿಯೋವೊಂದು ಲಭ್ಯವಾಗಿದೆ.2025ರ ಫೆಬ್ರವರಿ 05ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ವಿಶ್ವಾಸ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಭಾಷಣವನ್ನು ಈ ವೈರಲ್ ವಿಡಿಯೋದಲ್ಲಿ ತೋರಿಸಲಾಗಿದೆ.
ವಿಶ್ವಾಸ್ ನಗರದ ಎಎಪಿ ಅಭ್ಯರ್ಥಿ ದೀಪಕ್ ಸಿಂಘಾಲ್ ಪರ 25:10 ನಿಮಿಷಕ್ಕೆ ಪ್ರಚಾರ ನಡೆಸಿದ ಕೇಜ್ರಿವಾಲ್, ನಾನು ನಿಮ್ಮೆಲ್ಲರಿಗೂ ಕೈಮುಗಿದು ವಿನಂತಿಸಿಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು. ಕಳೆದ ಚುನಾವಣೆಯಲ್ಲಿ (2020) ಒಂದು ತಪ್ಪಾಗಿದೆ. AAPಯಿಂದ ಸ್ಪರ್ಧಿಸಿದ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಮಾತ್ರ ಗೆದ್ದಿದ್ದೆವು. ಆದರೆ, ನಾವು ಕಳೆದುಕೊಂಡ ಎಂಟು ಸ್ಥಾನಗಳಲ್ಲಿ ವಿಶ್ವಾಸ್ ನಗರವೂ ಸೇರಿತ್ತು.
ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಓಂ ಪ್ರಕಾಶ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದೀರಿ. ಆದರೆ, ಅವರು ತಮ್ಮ ಪ್ರದೇಶದಲ್ಲಿ ಯಾವುದೇ ಕೆಲಸ ಮಾಡಿಲ್ಲ. ನಾನು ಯಾವುದೇ ಸುಳ್ಳು ಹೇಳುತ್ತಿಲ್ಲ – ಈ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನನಗೆ ಈಗಷ್ಟೇ ತಿಳಿದು ಬಂದಿದೆ. ಪ್ರತಿಯೊಂದು ಕಾಲೋನಿಯಲ್ಲೂ ಒಳಚರಂಡಿಯ ಸಮಸ್ಯೆ ಇದೆ. ರಸ್ತೆಗಳು ಹೊಂಡಗಳಿಂದ ತುಂಬಿದ್ದು, ಇಡೀ ಪ್ರದೇಶ ಕಸದಿಂದ ತುಂಬಿ ಹೋಗಿದೆ.
ನಾನು ಶರ್ಮಾ ಅವರಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಹಲವು ಬಾರಿ ಹೇಳಿದ್ದೇನೆ. AAP ಸರ್ಕಾರವು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಮುಂದೆ ಬಂದಿತ್ತು. ಆದರೆ, ಸಹಕಾರ ದೊರೆಯಲಿಲ್ಲ. ಹಾಗಾಗಿ, ಈ ಸಮಸ್ಯೆ ಬಗ್ಗೆ ಅರಿತು ಕೂಡ ಮುಂದಿನ ಐದು ವರ್ಷಗಳ ಕಾಲ ನೀವು ಹೋರಾಟ ಮಾಡಲು ಬಯಸಿದರೆ, ಶರ್ಮಾ ಅವರಿಗೆ ಮತ ಹಾಕಿ. ನೀವು ಅಭಿವೃದ್ಧಿಯನ್ನು ಬಯಸಿದರೆ, ದೀಪಕ್ ಸಿಂಘಾಲ್ ಅವರಿಗೆ ಮತ ನೀಡಿ ಎಂದು ಕೇಜ್ರಿವಾಲ್ ಹೇಳಿದರು. ಈ ವಿಡಿಯೋವನ್ನು ಮಾಧ್ಯಮ ವರದಿಗಳಲ್ಲಿಯೂ ಹಂಚಿಕೊಳ್ಳಲಾಗಿದೆ.

ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, ಓಂ ಪ್ರಕಾಶ್ ಶರ್ಮಾ 2025ರ ದೆಹಲಿ ಚುನಾವಣೆಯಲ್ಲಿ ವಿಶ್ವಾಸ್ ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು 2013ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದಾರೆ. ಮೇಲಿನ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವಿಡಿಯೋದಲ್ಲಿ, ಕೇಜ್ರಿವಾಲ್ ವಿಶ್ವಾಸ್ ನಗರ ಶಾಸಕ ಶರ್ಮಾ ಅವರನ್ನು ಟೀಕಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯಲ್ಲಿ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ AAP ಸರ್ಕಾರ ವಿಫಲವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಒಪ್ಪಿಕೊಂಡಿದ್ದಾರೆ ಎಂಬ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಸಿಕೊಳ್ಳುವುದು ಉತ್ತಮ.
ಇದನ್ನು ಓದಿ

