ಬಾಂಗ್ಲಾದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ತಮ್ಮ ಶಿಕ್ಷಕನ ಮೇಲೆ ದಾಳಿ ಮಾಡುತ್ತಿರುವ ಘಟನೆಯನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಕೆಲವು ಮಹಿಳೆಯರು ಒಬ್ಬ ಪುರುಷನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದು ಮತ್ತು ಅವನನ್ನು ಬಲವಂತವಾಗಿ ಹೊರಗೆ ಕರೆದೊಯ್ಯುವುದು ಕಂಡುಬಂದಿದೆ.

ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಶೇರ್ ಮಾಡಿ, “ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಕನ ಮೇಲೆ ದಾಳಿ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿ ಟಾಪರ್ ಆಗಿರುವುದರಿಂದ ಅವರು ಕೋಪಗೊಂಡಿದ್ದಾರೆ. ಇವರ ಮನಸ್ಥಿತಿ ಇದೇ ರೀತಿಯಾಗಿದೆ…!! ಈ ಸಮುದಾಯದವರೊಂದಿಗೆ ವ್ಯಾಪಾರ ಮಾಡುವ ಹಿಂದೂಗಳಿಗೆ ಏನು ಗತಿಯೋ” ಎಂದು ಕೆಲವರು ಬರೆದುಕೊಂಡು ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಈ ಫ್ಯಾಕ್ಟ್ಚೆಕ್ನಲ್ಲಿ ವೈರಲ್ ವಿಡಿಯೋದ ಬಗ್ಗೆ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜುಲೈ 11 ರಂದು ಅಲೋಕಿಟೊ ಸಕಲ್ ದಿನಪತ್ರಿಕೆಯು, “ಚಕಾರಿಯಾ ಕ್ಯಾಂಬ್ರಿಯನ್ ಪ್ರೌಢಶಾಲೆಯ ಪ್ರಾಂಶುಪಾಲ ಮತ್ತು ಶಿಕ್ಷಕ ಪ್ರತಿನಿಧಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ” ಎಂಬ ಶೀರ್ಷಿಕೆಯಡಿ ಒಂದು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದೆ.

ಇದೇ ರೀತಿಯಲ್ಲಿ ಜುಲೈ 12 ರಂದು ದೈನಿಕ್ ಶಿಕ್ಷಾ ಕೂಡ ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿದ್ದು, ಈ ವರದಿಗಳಲ್ಲಿ ಜುಲೈ 8 ರಂದು ಪ್ರಾಂಶುಪಾಲರು ತರಗತಿಗೆ ಪ್ರವೇಶಿಸಿ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೇಬಿನಲ್ಲಿ ಹಣವಿದೆಯೇ ಎಂದು ಕೇಳಿದರು. ನಂತರ “ಅವನು ಆಕೆಯ ಶಾಲಾ ಉಡುಪಿನ ಜೇಬಿನೊಳಗೆ ಕೈ ಹಾಕಿ ಅನುಚಿತವಾಗಿ ಅವಳನ್ನು ಮುಟ್ಟಿದನು” ಎಂದು ಸಂತ್ರಸ್ತೆಯ ಕಡೆಯವರು ಆರೋಪಿಸಿರುವುದು ಕಂಡು ಬಂದಿದೆ.


ಜುಲೈ 10 ರಂದು, ಚಕಾರಿಯಾ ಕ್ಯಾಂಬ್ರಿಯನ್ ಪ್ರೌಢಶಾಲೆಯ ಮುಂದೆ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ, ಶಿಕ್ಷಕರ ಪ್ರತಿನಿಧಿ ಯೂನಸ್ ಮೂಲಕ ಜಹೀರುಲ್ ಇಸ್ಲಾಂ ಪೋಷಕರನ್ನು ಶಾಲಾ ಕಚೇರಿಗೆ ಕರೆಸಿ, ಸಮಸ್ಯೆಯನ್ನು ಬಗೆಹರಿಸುವ ಇರಾದೆಯನ್ನು ವ್ಯಕ್ತಪಡಿಸಿದನು. ಆದರೆ, ಕಚೇರಿಯೊಳಗೆ ಅವನು ಅಶ್ಲೀಲ ನಿಂದನೆಗಳನ್ನು ಮಾಡಿ ಕಿರುಕುಳ ನೀಡಿದ ಆರೋಪವಿದೆ. ಶಿಕ್ಷಕನ ಅಸಭ್ಯ ಭಾಷೆ ಮತ್ತು ಅನುಚಿತ ವರ್ತನೆಯಿಂದ ಕೋಪಗೊಂಡ ಪೋಷಕರು ತೀವ್ರ ವಾಗ್ವಾದಕ್ಕೆ ಒಳಗಾದರು, ಇದು ಕೊನೆಗೆ ದೈಹಿಕ ಘರ್ಷಣೆಗೆ ಕಾರಣವಾಯಿತು ಎಂದು ವರದಿಯಾಗಿದೆ. ಈ ಎಲ್ಲಾ ಅಂಶಗಳು ವಿದ್ಯಾರ್ಥಿಗಳ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ವೈರಲ್ ವೀಡಿಯೊದಲ್ಲಿ ಬಾಂಗ್ಲಾದೇಶದ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಶಿಕ್ಷಕರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸಿಲ್ಲ. ಬದಲಿಗೆ, ಈ ವೀಡಿಯೊದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕರ ಪ್ರತಿನಿಧಿ ಯೂನಸ್ ಮತ್ತು ಪ್ರಾಂಶುಪಾಲ ಜಹೀರುಲ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನುಬ ಯಾವುದೇ ಕಾರಣಕ್ಕೂ ಹಂಚಿಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ದುಬೈ ವಿಮಾನ ನಿಲ್ದಾಣದ ಪ್ರವಾಹದ ಹಳೆಯ ವೀಡಿಯೊವನ್ನು ದೆಹಲಿಯದ್ದು ಎಂದು ಹಂಚಿಕೆ

