ಮಸೀದಿಯ ಬಳಿ ಬೆಂಕಿ ಹಚ್ಚುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಭಾರತದಲ್ಲಿ ಮಸೀದಿಗಳು ಮತ್ತು ಮದರಸಾಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ಅಲ್ಪ ಮುಸಲ್ಮಾನರು ಅಪಾಯದಲ್ಲಿದ್ದಾರೆ ಎಂದು ಕೋಮು ನಿರೂಪಣೆಯ ಬರಹದೊಂದಿಗೆ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಭಾರತದಾದ್ಯಂತ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕೆಲ ವಿದೇಶಿ ಖಾತೆಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಲವರು ನಿಜವೆಂದು ಭಾವಿಸಿದ್ದಾರೆ.

ಈ ವಿಡಿಯೋ ಮೂಲಕ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ, ಅವರ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ. ಭಾರತದಲ್ಲಿ ಮುಸಲ್ಮಾನರು ಸೇರಿದಂತೆ ಅಲ್ಪಸಂಖ್ಯಾತರ ಎಲ್ಲಾ ಸಮುದಾಯಗಳು ಆಪತ್ತಿಗೆ ಸಿಲುಕಿವೆ ಎಂದು ಭಾರತ ವಿರೋಧಿ ಪೋಸ್ಟ್ಗಳನ್ನು ಶೇರ್ ಮಾಡಲಾಗುತ್ತಿದೆ. ಇನ್ನೂ ಕೆಲವರು ವೈರಲ್ ವಿಡಿಯೋವನ್ನು ರಾಜಕೀಯ ಆಯಾಮಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮೇ 4, 2023 ರಂದು ಪಾಕಿಸ್ತಾನಿ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದು ಕಂಡು ಬಂದಿದೆ. ಪೋಸ್ಟ್ ಪ್ರಕಾರ, ಸಂಜೆ 5:10 ರ ಸುಮಾರಿಗೆ ಆಯುಬ್ ರಸ್ತೆಯ ಪೀಪಲ್ಸ್ ಮಸೀದಿ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಆ ಪ್ರದೇಶದಲ್ಲಿ ಹಲವಾರು ಅಂಗಡಿಗಳಲ್ಲಿ ಪಟಾಕಿಗಳು ತುಂಬಿದ್ದರಿಂದ ಬೆಂಕಿ ಬೇಗನೆ ಹರಡಿತು. ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ವೈರಲ್ ವೀಡಿಯೊ ಕುರಿತು ಇನ್ನಷ್ಟು ಪರಿಶೀಲನೆ ನಡೆಸಲು ನಮ್ಮ ತಂಡ ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿತು. ಈ ವೇಳೆ ನಮಗೆ ಮೇ 4, 2023 ರಂದು ಪೋಸ್ಟ್ ಮಾಡಲಾದ ಮತ್ತೊಂದು ವೀಡಿಯೊ ಕಂಡುಬಂದಿದೆ ಇದರಲ್ಲಿ ಕೂಡ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದ್ದು, ಆಕಸ್ಮಿಕ ಬೆಂಕಿ ಅವಘಡದಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಕೂಡ ಹಾನಿಯಾಗಿದೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ, ಪಾಕಿಸ್ತಾನದ್ದು ಎಂಬುದು ಖಚಿತವಾಗಿ. ವೈರಲ್ ವಿಡಿಯೋದಲ್ಲಿ ಹೇಳಲಾದಂತೆ ಭಾರತದಲ್ಲಿ ಮಸೀದಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂಬುದು ಕೂಡ ಸುಳ್ಳಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಅಂತರರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್ ಅನ್ನು ಕಾನೂನು ಬಾಹಿರ ರಾಷ್ಟ್ರವೆಂದು ಘೋಷಿಸಿಲ್ಲ

