ವಿಶ್ವ ಆರೋಗ್ಯ ಸಂಸ್ಥೆಯ(WHO) ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ “ಎಂಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ” ಎಂದು ಘೋಷಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು ಹಂಚಿಕೊಂಡಿರುವ ಬಳಕೆದಾರರು, ” Mpox ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರವನ್ನು WHO ಹಿಂತೆಗೆದುಕೊಂಡಿದೆ” ಎಂದು ಬರೆದು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ಮತ್ತು ಫೇಸ್ಬುಕ್ನ ಹಲವು ಬಳಕೆದಾರರು ಡಬ್ಲ್ಯುಎಚ್ಒ ಮುಖ್ಯಸ್ಥರ 29-ಸೆಕೆಂಡ್ಗಳ ಈ ವಿಡಿಯೋವನ್ನು ಹಂಚಿಕೊಂಡಿದ್ದು, “…ನಿನ್ನೆ, ಎಂಪಾಕ್ಸ್ಗಾಗಿ ರಚಿಸಲಾದ ತುರ್ತು ಸಮಿತಿಯನ್ನು ಭೇಟಿಯಾದೆ. ವಿವಿಧ ದೇಶಗಳಲ್ಲಿ ಎಂಪಾಕ್ಸ್ನ ಏಕಾಏಕಿ ಹರಡುತ್ತಿರುವುದು ಇನ್ನು ಮುಂದೆ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಸಮಿತಿಯು ನನಗೆ ಶಿಫಾರಸು ಮಾಡಿದೆ. ನಾನು ಸಮಿತಿಯ ಈ ಸಲಹೆಯನ್ನು ಸ್ವೀಕರಿಸಿದ್ದೇನೆ ಮತ್ತು Mpox ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಘೋಷಿಸಲು ಸಂತೋಷ ಪಡುತ್ತೇನೆ.” ಎಂಬ ವಿಡಿಯೋ ಆವೃತ್ತಿಯು ಆನ್ಲೈನ್ನಲ್ಲಿ ಹರಿದಾಡುತ್ತಿದೆ.


ಇಂತಹ ಪೋಸ್ಟ್ಗಳನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ಕಳೆದ 24 ಗಂಟೆಗಳ Google ಹುಡುಕಾಟದಲ್ಲಿ “Mpox,” ಮತ್ತು “ಇನ್ನು ಮುಂದೆ ತುರ್ತುಸ್ಥಿತಿ ಇಲ್ಲ” ಎಂಬ ಕೀವರ್ಡ್ಗಳನ್ನು ಬಳಸಿ ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಹುಡುಕಾಟ ನಡೆಸಿದ್ದು, WHO ಮಂಕಿಪಾಕ್ಸ್ನ ವಿಷಯದಲ್ಲಿ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಲಭ್ಯವಾಗಿಲ್ಲ.
ಆದರೆ, ವೈರಲ್ ಫೂಟೇಜ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಬಲಬದಿಯಲ್ಲಿ “ಬ್ಲೂಮ್ಬರ್ಗ್ ಲೀನಿಯಾ” ಎಂಬ ವಾಟರ್ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ.

ಈ ಸುಳಿವನ್ನು ಆಧಾರವಾಘಿರಿಸಿ, ನಾವು ಔಟ್ಲೆಟ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ “Mpox” ಕೀವರ್ಡ್ ಬಳಸಿ ಹುಡುಕಿದಾಗ, ನಮಗೆ 2023 ಮೇ 12ರಂದು ಪ್ರಕಟಿಸಲಾದ, “ ಮಂಕಿಪಾಕ್ಸ್ ಇನ್ನು ಮುಂದೆ ಜಾಗತಿಕ ತುರ್ತುಸ್ಥಿತಿಯಲ್ಲ: WHO (ಸ್ಪ್ಯಾನಿಷ್ನಿಂದ Google ಮೂಲಕ ಅನುವಾದಿಸಲಾಗಿದೆ) ” ಎಂಬ ಶೀರ್ಷಿಕೆಯ ವಿಡಿಯೋ ಲಭಿಸಿದೆ. ಡಾ. ಟೆಡ್ರೊಸ್ ವೈರಲ್ ಕ್ಲಿಪ್ನಲ್ಲಿರುವಂತೆಯೇ ಅದೇ ಮಾತುಗಳನ್ನು ಹೇಳುತ್ತಿರುವುದು ಕಂಡುಬರುತ್ತದೆ ಮತ್ತು Mpox ಇನ್ನು ಮುಂದೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿಲ್ಲ ಎಂದು ಘೋಷಿಸಿರುವುದನ್ನು ಕಾಣಬಹುದು.

ನಾವು Googleನಲ್ಲಿ “Mpox,” ಮತ್ತು “ಇನ್ನು ಮುಂದೆ ತುರ್ತುಸ್ಥಿತಿ ಇಲ್ಲ” ಎಂಬ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ 2023ರ ಮೇ 10 ರಿಂದ ಮೇ 20ರವರೆಗಿನ ವರದಿಗಳು ಲಭಿಸಿವೆ. ಇದರಲ್ಲಿ WHO ಅಧೀಕೃತ YouTube ಚಾನೆಲ್ನ ವಿಡಿಯೋ ನಮಗೆ ಲಭಿಸಿದೆ. . Mpox ಇನ್ನು ಮುಂದೆ ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು 2023ರ ಮೇ 15ರಂದು ಪ್ರಕಟಿಸಿದೆ.
ವಿಡಿಯೋದಲ್ಲಿ ಡಾ. ಟೆಡ್ರೊಸ್ ರವರು, “ಕಳೆದ ವರ್ಷ ಜುಲೈನಲ್ಲಿ, ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದಂತೆ ಎಂಪಾಕ್ಸ್ನ ಹಲವು ದೇಶಗಳಲ್ಲಿ ಏಕಾಏಕಿ ಹರಡುತ್ತಿರುವ ಕುರಿತು ನಾನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದೆ… ನಿನ್ನೆ, ಎಂಪಾಕ್ಸ್ಗಾಗಿ ರಚಿಸಲಾದ ತುರ್ತು ಸಮಿತಿಯನ್ನು ಭೇಟಿಯಾದೆ. ವಿವಿಧ ದೇಶಗಳಲ್ಲಿ ಎಂಪಾಕ್ಸ್ನ ಏಕಾಏಕಿ ಹರಡುತ್ತಿರುವುದು ಇನ್ನು ಮುಂದೆ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಸಮಿತಿಯು ನನಗೆ ಶಿಫಾರಸು ಮಾಡಿದೆ. ನಾನು ಸಮಿತಿಯ ಈ ಸಲಹೆಯನ್ನು ಸ್ವೀಕರಿಸಿದ್ದೇನೆ ಮತ್ತು Mpox ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ಘೋಷಿಸಲು ಸಂತೋಷ ಪಡುತ್ತೇನೆ” ಎಂದು 2023ರ ಮೇ 11ರಂದು ಹೇಳಿದ್ದಾಗಿ ಲಗತ್ತಿಸಿದೆ.

ಇದಲ್ಲದೇ, WHO ಈ ಹಿಂದೆ 2022 ರ ಜುಲೈ ಲ್ಲಿ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಎಂದು ಘೋಷಿಸಿತ್ತು . ಎಡಿಷನ್ , ಸಿಎನ್ಬಿಸಿ ಮತ್ತು ದಿ ಹಿಂದು ರೀತಿಯ ಅನೇಕ ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಇದನ್ನು ಸುಮಾರು ಒಂದು ವರ್ಷದ ನಂತರ ಅಣದರೆ 2023ರ ಮೇ ತಿಂಗಳಲ್ಲಿ ಹಿಂಪಡೆಯಲಾಗಿತ್ತು . ವೈರಲ್ ವೀಡಿಯೊ ಅದೇ ಪ್ರಕಟಣೆಯಿಂದ ಪಡೆಯಲಾಗಿದ್ದನ್ನು ಖಚಿತ ಪಡಿಸುತ್ತದೆ. ಹಾಗಾಗಿ, Mpox ಕುರಿತು WHO ಇತ್ತೀಚೆಗೆ ತುರ್ತುಪರಿಸ್ಥಿತಿಯನ್ನು ಹಿಂಪಡೆದಿದೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿರುವುದು ಸಾಬೀತಾಗಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ(DRC) ಜೊತೆಗೆ, ಬುರುಂಡಿ, ಕೀನ್ಯಾ, ರುವಾಂಡಾ ಮತ್ತು ಉಗಾಂಡಾದಂತಹ ನೆರೆಯ ದೇಶಗಳಲ್ಲಿಯೂ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಆಫ್ರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಆಫ್ರಿಕಾ ಸಿಡಿಸಿ) ಏಕಾಏಕಿ “ಕಾಂಟಿನೆಂಟಲ್ ಭದ್ರತೆಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ” ಎಂದು ಘೋಷಿಸಲು ಪರಿಗಣಸಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು “ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ” ಎಂದು 2024ರ ಆಗಸ್ಟ್ 17ರಂದು ಘೋಷಿಸಿತ್ತು.
WHO ಮಹಾನಿರ್ದೇಶಕ ಡಾ. ಟೆಡ್ರೊಸ್, “ಹೊಸ ತಳಿಯ ಎಂಪಾಕ್ಸ್ನ ಹರಡುವಿಕೆಯು, ಪೂರ್ವ ಡಿಆರ್ಸಿಯಲ್ಲಿ ವ್ಯಾಪಕವಾಗಿ ಹರಡುತ್ತಿದೆ ಮತ್ತು ಹಲವಾರು ನೆರೆಯ ದೇಶಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವರದಿಯು ತುಂಬಾ ಆತಂಕಕಾರಿಯಾಗಿದೆ. DRC (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ) ಮತ್ತು ಆಫ್ರಿಕಾದ ಇತರ ದೇಶಗಳಲ್ಲಿ ಇತರ Mpox ಏಕಾಏಕಿ ಹರಡುತ್ತಿದೆ. ಇದನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಸಂಘಟಿತ ಅಂತರರಾಷ್ಟ್ರೀಯ ಪ್ರತಿಕ್ರಿಯೆಯ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ” ಎಂದಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, WHO ಈ ಹಿಂದೆ 2022 ರ ಜುಲೈ ಲ್ಲಿ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಎಂದು ಘೋಷಿಸಿತ್ತು ಮತ್ತು ಇದನ್ನು 2023ರ ಮೇ ತಿಂಗಳಲ್ಲಿ ಹಿಂಪಡೆಯಲಾಗಿತ್ತು. 2024ರ ಆಗಸ್ಟ್ 17ರಂದು ಮತ್ತೊಮ್ಮೆ ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಎಂದು ಘೋಷಿಸಿದ್ದು, ಇದನ್ನು ಹಿಂಪಡೆದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ತುರ್ತುಸ್ಥಿತಿ ಹಿಂಪಡೆಯಲಾಗಿದೆ ಎಂದು ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

