ಬಾಲಿವುಡ್ ಸಿನೆಮಾ ನಟ ಶಾರುಖ್ ಖಾನ್ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಶಾರುಖ್ ಖಾನ್ ಅವರನ್ನು ಆಸ್ಪತ್ರೆಯ ಬೆಡ್ ಮೇಲೆ ವೆಂಟಿಲೇಟರ್ನಲ್ಲಿ ಇರಿಸಿದ್ದಾಗಿ ತೋರಿಸಲಾಗಿದ್ದು, ಈ ಕ್ಲಿಪ್ ಬಳಸಿ, ಶಾರುಖ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಇನ್ಸ್ಟಾಗ್ರಾಮ್ ಹ್ಯಾಂಡಲ್ ರೂಹಿ ಕೌಶಲ್ ನವೆಂಬರ್ 26ರಂದು ಶಾರುಖ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳುವ ವೈರಲ್ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿನ ಇತರ ಅನೇಕ ಬಳಕೆದಾರರು ಇದನ್ನು ಇದೇ ರೀತಿಯ ಹಕ್ಕುಗಳೊಂದಿಗೆ ಹಂಚಿಕೊಂಡಿರುವುದನ್ನು ಕಾಣಬಹುದು.
ಫ್ಯಾಕ್ಟ್ಚೆಕ್
ಶಾರೂಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು. ವೈರಲ್ ಪೋಸ್ಟ್ನ ಸತ್ಯಾಂಶವನ್ನು ತಿಳಿಯಲು ಕನ್ನಡ ಫ್ಯಾಕ್ಟ್ಚೆಕ್ ತಂಡವು ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿ ಹುಡುಕಾಟ ನಡೆಸಿದ್ದು, ಶಾರುಖ್ ಖಾನ್ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಖಚಿತಪಡಿಸುವ ಒಂದೇ ಒಂದು ಸುದ್ದಿಯೂ ಪ್ರಕಟವಾಗದೇ ಇರುವುದನ್ನು ಗಮನಿಸಿದೆ. ಒಂದು ವೇಳೇ ಶಾರುಖ್ ಖಾನ್ ಅನಾರೋಗ್ಯಕ್ಕೊಳಗಾಗಿದ್ದರೆ, ಈ ಬಗ್ಗೆ ಅಧಿಕೃತ ವರದಿಗಳು ಪ್ರಕಟವಾಗುತ್ತಿದ್ದವು.
ಶಾರೂಖ್ ಖಾನ್ರವರ ಅನಾರೋಗ್ಯಕ್ಕೆ ಸಂಬಂಧಿಸಿದಂತೆ 2024ರ ಮೇ ತಿಂಗಳಿಗೆ ಸಂಬಂಧಿಸಿದ ಹಲವಾರು ಸುದ್ದಿಗಳು ಲಭ್ಯವಾಗಿವೆ. ಅದರಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರನ್ನು ಮೇ 22 ರಂದು ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ ದಾಖಲಿಸಿದ ಕುರಿತು ವರದಿಯಾಗಿದೆ. ಜಾಗರಣ್ ಡಾಟ್ ಕಾಮ್ ನಲ್ಲಿ ಮೇ 22 ರಂದು ಪ್ರಕಟವಾದ ಸುದ್ದಿಯ ಪ್ರಕಾರ, ಐಪಿಎಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್ ತಲುಪಿದ ಶಾರುಖ್ ಖಾನ್ ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಮಾಡಿದೆ. ಬಿಸಿಲಿನ ತಾಪಕ್ಕೆ ತುತ್ತಾಗಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ವರದಿಗಳು ಹೇಳಿವೆ.
ಅದೇ ರೀತಿ ಮೇ 23ರಂದು ಇಂಡಿಯಾ ಟುಡೇ ಯೂಟ್ಯೂಬ್ ಚಾನೆಲ್ನಲ್ಲಿ ಶಾರುಖ್ ಖಾನ್ ಅವರನ್ನು ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಾಲಿವುಡ್ ಪತ್ರಕರ್ತ ಪರಾಗ್ ಛಾಪೇಕರ್ರವರು ವೈರಲ್ ಆಗಿರುವ ಪೋಸ್ಟ್ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಶಾರುಖ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ನಕಲಿ ಎಂಬುದು ಸಾಬೀತಾಗಿದೆ.
ಇದನ್ನು ಓದಿದ್ದೀರಾ? : FACT CHECK : ಪ್ರಧಾನಿ ನರೇಂದ್ರ ಮೋದಿಯವರು 2014ಕ್ಕೂ ಮುನ್ನ ಇವಿಎಂಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

