ಕಳೆದ 155 ದಿನಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಸಾಧ್ಯತೆ ಗೋಚರಿಸುತ್ತಿದೆ ಎಂದು ಇತ್ತೀಚಿಗೆ ನಾಸಾ ಬಿಡುಗಡೆ ಮಾಡಿದ ಫೋಟೋವನ್ನು ಬಳಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ. ಸುನಿತಾ ವಿಲಿಯಮ್ಸ್ ರವರನ್ನು ಈ ಫೋಟೋದಲ್ಲಿ ನೋಡುವಾಗ ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿರುವ ಹಾಗೆ ಕಾಣಿಸುತ್ತದೆ.
“ಸುನಿತಾ ವಿಲಿಯಮ್ಸ್ರವರ ಕೆನ್ನೆಗಳು ಗುಳಿ ಬಿದ್ದಿದ್ದು, ದೇಹವು ಸಣಕಲಾಗಿದೆ. ಅವರ ಚರ್ಮವು ಮೂಳೆಗಳಿಗೆ ಅಂಟಿಕೊಂಡಿದೆ, ಅವರ ದೇಹ ಅಸ್ಥಿಪಂಜರದಂತಾಗಿದೆ; ಇನ್ನೊಂದಿಷ್ಟು ದಿನಗಳ ಕಾಲ ಅವರು ಬಾಹ್ಯಾಕಾಶದಲ್ಲಿಯೇ ಇದ್ದರೆ ಅವರ ಜೀವಕ್ಕೆ ಅಪಾಯ ಉಂಟಾಗಬಹುದು” ಎಂದು ಸುನಿತಾ ವಿಲಿಯಮ್ಸ್ರವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೆ ಕಾಡುತ್ತಿದೆ ಮೂಳೆ ದುರ್ಬಲತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಇತ್ತಿಚೆಗೆ ಹೊರಬಂದ ಅವರ ಫೋಟೋ ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಫ್ಯಾಕ್ಟ್ಚೆಕ್
ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸುನಿತಾ ವಿಲಿಯಮ್ಸ್ರವರೇ ಸ್ಪಷ್ಟನೆಯನ್ನು ನೀಡಿದ್ದು, “ನಾನು ಬಾಹ್ಯಾಕಾಶ ನಿಲ್ದಾಣಕ್ಕೆ ಬರುವಾಗ ಇದ್ದ ತೂಕವನ್ನೇ ಈಗಲೂ ಹೊಂದಿದ್ದೇನೆ. ಸ್ನಾಯು ಮತ್ತು ಮೂಳೆ ಸಾಂದ್ರತೆಯ ಮೇಲೆ ಮೈಕ್ರೊಗ್ರಾವಿಟಿಯ ಪರಿಣಾಮಗಳನ್ನು ಎದುರಿಸಲು ಗಗನಯಾತ್ರಿಗಳು ಅನುಸರಿಸುವ ಕಠಿಣ ವ್ಯಾಯಾಮದ ಕಟ್ಟುಪಾಡುಗಳಿಂದಾಗಿ ದೈಹಿಕ ರೂಪ ಬದಲಾಗಿದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ತಮ್ಮ ದಿನನಿತ್ಯದ ವ್ಯಾಯಾಮದ ದಿನಚರಿಯನ್ನು ಕೂಡ ಅವರು ವಿವರಿಸಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ಬೈಕ್ ಸವಾರಿ, ಟ್ರೆಡ್ಮಿಲ್ನಲ್ಲಿ ಓಡುವುದು ಹಾಗೂ ವೇಟ್ಲಿಫ್ಟಿಂಗ್ ಮಾಡುತ್ತಿರುವುದರಿಂದ ದೇಹದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ನಿರಂತರವಾಗಿ ವೇಟ್ಲಿಫ್ಟಿಂಗ್ ಮಾಡುತ್ತಿದ್ದ ಕಾರಣಕ್ಕೆ ಈ ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ.
This morning, @Astro_Suni spoke with @NESN about her stay aboard the @Space_Station, her love of Boston sports, and staying fit and active. She also addressed rumors about her health during her mission. https://t.co/E4TLpLjpPD
— ARCHIVED NASA Astronauts (@NASA_Astronauts) November 12, 2024
ಒಟ್ಟಾರೆಯಾಗಿ ಹೇಳುವುದಾದರೆ, ಸುನಿತಾ ವಿಲಿಯಮ್ಸ್ರವರ ಆರೋಗ್ಯ ಹದಗೆಟ್ಟಿದೆ ಎಂಬುದು ಸುಳ್ಳು. ಈ ವದಂತಿಯ ಬಗ್ಗೆ ಸ್ವತಃ ಸುನಿತಾ ವಿಲಿಯಮ್ಸ್ರವರು ಸ್ಪಷ್ಟನೆ ನೀಡಿದ್ದು, ತನ್ನ ತೂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿಕೆನೀಡಿದ್ದಾರೆ.
ಇದನ್ನು ಓದಿದ್ದೀರಾ? Fact Check : ಗೊರಕೆ ಹೊಡೆಯುವುದು ಆರೋಗ್ಯಕರ ಲಕ್ಷಣ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

