ಲಂಡನ್ ಮ್ಯೂಸಿಯಂನಲ್ಲಿ ಲಭ್ಯವಿರುವ ಟಿಪ್ಪು ಸುಲ್ತಾನ್ ಅವರ ನೈಜ ಫೋಟೋ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 
ಫ್ಯಾಕ್ಟ್ಚೆಕ್
ಈ ಫೋಟೋದಲ್ಲಿರುವ ವ್ಯಕ್ತಿಯು ತಾಂಜೇನಿಯದ ಜಂಜಿಬಾರ್ನಲ್ಲಿ 1893 ರಿಂದ 1896ರವರೆಗೆ ಆಳ್ವಿಕೆ ನಡೆಸಿದ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಆಗಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್ನಲ್ಲಿ ಹೇಳಿದ ಹಾಗೆ ಇದು ಟಿಪ್ಪು ಸುಲ್ತಾನ್ರವರ ನೈಜ ಚಿತ್ರವಲ್ಲ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲನೆ ನಡೆಸಿದೆ.
ಟಿಪ್ಪು ಸುಲ್ತಾನ್1799ರಲ್ಲಿ ನಿಧನರಾಗಿದ್ದು, ವಿಶ್ವದ ಮೊದಲ ಛಾಯಾಚಿತ್ರವನ್ನು 1826 ರಲ್ಲಿ ಫ್ರೆಂಚ್ ವಿಜ್ಞಾನಿ ಜೋಸೆಫ್ ನೈಸ್ಫೋರ್ ತೆಗೆದಿದ್ದರು. ಟಿಪ್ಪು ಸುಲ್ತಾನ್ ಅವಧಿಯಲ್ಲಿ ಕ್ಯಾಮರಾ ಆವಿಷ್ಕಾರಗೊಂಡಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಟಿಪ್ಪು ಕಾಲಘಟ್ಟದಲ್ಲಿ ಕ್ಯಾಮರಾ ಇಲ್ಲದಿರುವುದರಿಂದ ಅವರ ಕಲಾತ್ಮಕ ಚಿತ್ರಗಳನ್ನೇ ಇಂದಿಗೂ ಶಾಲಾ-ಕಾಲೇಜು ಸೇರಿದಂತೆ ಪುಸ್ತಕಗಳಲ್ಲಿ ಬಳಸಲಾಗುತ್ತಿದೆ ಎಂಬುದು ವಾಸ್ತವ.
ವೈರಲ್ ಫೋಟೋದ ಕುರಿತು ವಿವರಗಳನ್ನು ಸಂಗ್ರಹಿಸಲು, ನಾವು Google ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ, ಸ್ಟಾಕ್ ಫೋಟೋ ವೆಬ್ಸೈಟ್ ಗೆಟ್ಟಿ ಇಮೇಜಸ್ನಲ್ಲಿ ಅಪ್ಲೋಡ್ ಮಾಡಿದ ಇಂತಹುದ್ದೇ ಫೋಟೋವೊಂದು ನಮಗೆ ಲಭಿಸಿದೆ. ಈ ಫೋಟೋದ ವಿವರಣೆಯಲ್ಲಿ ತಾಂಜೇನಿಯದ ಜಂಜಿಬಾರ್ನಲ್ಲಿ 1893 ರಿಂದ 1896 ರವರೆಗೆ ಆಳ್ವಿಕೆ ನಡೆಸಿದ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಫೋಟೋ ಎಂದು ಉಲ್ಲೇಖಿಸಲಾಗಿದೆ.

ಈ ಹೆಸರನ್ನು ಕೀವರ್ಡ್ ಆಗಿ ಬಳಸಿ ಹುಡುಕಾಟ ನಡೆಸಿದಾಗ ವಿಕಿಡಾಟಾ ವೆಬ್ಸೈಟ್ ಮತ್ತು ಓಮನ್ ಮತ್ತು ಜಂಜಿಬಾರ್ ವರ್ಚುವಲ್ ಮ್ಯೂಸಿಯಂ ವೆಬ್ಸೈಟ್ನಲ್ಲಿ ಇದೇ ಫೋಟೋ ಇರುವುದನ್ನು ನಾವು ಕಂಡುಕೊಂಡಿದ್ದೇವೆ . ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಅಲ್-ಬುಸೈದ್ ಎಂದು ಈ ವೆಬ್ಸೈಟ್ಗಳು ದೃಢಪಡಿಸಿವೆ. ಈ ಎಲ್ಲಾ ಮಾಹಿತಿಯನ್ನು ಆಧರಿಸಿ, ವೈರಲ್ ಚಿತ್ರವು ಜಾಂಜಿಬಾರ್ನ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ರನ್ನು ತೋರಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಜಾಂಜಿಬಾರ್ನ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಅವರ ಹೆಚ್ಚಿನ ಫೋಟೋಗಳನ್ನೂ ಇಲ್ಲಿ ನೋಡಬಹುದು. ಜಂಜಿಬಾರ್ನ ಐದನೇ ಸುಲ್ತಾನರಾದ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ರವರು 1857ರಲ್ಲಿ ಜನಿಸಿದರು ಮತ್ತು 1896 ಆಗಸ್ಟ್ 25ರಂದು ನಿಧನರಾದರು. 1893 ಮಾರ್ಚ್ 5ರಿಂದ 1896ರ ಆಗಸ್ಟ್ 25ರವರಗೆ ಅಂದರೆ, ಸಾಯುವವರೆಗೂ ಜಾಂಜಿಬಾರ್ನ್ನು ಆಳಿದರು.
ಟಿಪ್ಪು ಸುಲ್ತಾನ್ (1751-1799) ಅವರು 1782 ರಿಂದ 1799ರವರೆಗೂ ಮೈಸೂರು ಸಾಮ್ರಾಜ್ಯದ ಆಡಳಿತಗಾರರಾಗಿದ್ದರು. ಅವರ ತಂದೆ ಹೈದರ್ ಅಲಿ ಅನಾರೋಗ್ಯದಿಂದ ಯುದ್ಧದಲ್ಲಿ ಮರಣ ಹೊಂದಿದ ನಂತರ ಅವರು ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು ಮುನ್ನಡೆಸಿದರು. ಟಿಪ್ಪು ಸುಲ್ತಾನ್ 1799ರಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ನಿಧನರಾದರು. ಆದರೆ, ವಿಶ್ವದ ಮೊದಲ ಛಾಯಾಚಿತ್ರವನ್ನು 1826ರಲ್ಲಿ ಫ್ರೆಂಚ್ ವಿಜ್ಞಾನಿ ಜೋಸೆಫ್ ನೈಸ್ಫೋರ್ ಅವರು ತೆಗೆದಿದ್ದು ಅದನ್ನು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಟಿಪ್ಪು ಸುಲ್ತಾನ್ ನೈಜ ಚಿತ್ರ ಎಂದು ತಾಂಜೇನಿಯದ ದೊರೆ ಸುಲ್ತಾನ್ ಸೈಯ್ಯದ್ ಹಮೀದ್ ಬಿನ್ ತುವ್ವೈನ್ ಫೋಟೋ ಹಂಚಿಕೊಳ್ಳಲಾಗುತ್ತಿದೆ. ಕನ್ನಡ ಫ್ಯಾಕ್ಟ್ಚೆಕ್ ತಂಡವು ಈ ಹಿಂದೆ ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು ಎಂಬ ಬಗ್ಗೆ ಫ್ಯಾಕ್ಟ್ಚೆಕ್ ನಡೆಸಿದ್ದು ಈ ಸುದ್ದಿಯನ್ನು ಇಲ್ಲಿ ಓದಬಹುದು.
ಇದನ್ನು ಓದಿದ್ದೀರಾ? : ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

