ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು

ಟಿಪ್ಪು ಸುಲ್ತಾನ

ಕಳೆದೊಂದು ದಶಕದಲ್ಲಿ “ಮೈಸೂರ ಹುಲಿ” ಎಂದೇ ಖ್ಯಾತನಾದ ಟಿಪ್ಪು ಸುಲ್ತಾನ್ ಕುರಿತು, ಆತನ ಇತಿಹಾಸದ ಕುರಿತು ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ನೈಜ ಇತಿಹಾಸವನ್ನು ಕೆದಕುವ ಭರದಲ್ಲಿ ಸುಳ್ಳುಗಳನ್ನು, ಕಟ್ಟು ಕಥೆಗಳನ್ನೂ ಬಳಸಿಕೊಂಡು ಟಿಪ್ಪು ಸುಲ್ತಾನನ ಇತಿಹಾಸದ ಮೇಲೆ ಸಾಕಷ್ಟು ದಾಳಿ ನಡೆಸಲಾಗುತ್ತಿದೆ. ಇಂತಹ ತೇಜೋವಧೆಯ ಭಾಗವಾಗಿ ಹಲವಾರು ವರ್ಷಗಳಿಂದ “ಇದು ನಿಜವಾದ ಟಿಪ್ಪು ಸುಲ್ತಾನನ ಚಿತ್ರ. ಕಾಂಗ್ರೆಸ್ ಸುಳ್ಳು ಚಿತ್ರವನ್ನು ಭಾರತದ ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ತೋರಿಸುತ್ತಾ ಬಂದಿದೆ.” ಎಂದು ಪ್ರತಿಪಾದಿಸಿದ ಹಲವಾರು ಪೋಸ್ಟರ್‌ಗಳು, ವಿಡಿಯೋಗಳು ಅನೇಕ ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌: ಕೆಲವರು ಟಿಪ್ಪುಸುಲ್ತಾನ್ ಎಂದು ಹಂಚಿಕೊಳ್ಳುತ್ತಿರುವ ಫೋಟೋದಲ್ಲಿರುವ ವ್ಯಕ್ತಿ ಟಿಪ್ಪು ಟಿಪ್ (1837-1905) ಎಂಬ ಆಫ್ರಿಕಾದ ಸ್ವಾಹಿಲಿ-ಜಾಂಜಿಬಾರಿಯ ಎಂಬ ಗುಲಾಮಿ ವ್ಯಾಪಾರಿಯದ್ದಾಗಿದೆ. ಮತ್ತೊಂದು ಚಿತ್ರದಲ್ಲಿರುವುದು ಅರಬ್ ಗುಲಾಮಿ ವ್ಯಾಪಾರಿ ಮತ್ತು ಉಜಿಜಿಯ ಸುಲ್ತಾನನಾದ ರುಮಲಿಜಾ. ಅಸಲಿಗೆ ವಿಶ್ವದ ಮೊದಲ ಛಾಯಾಚಿತ್ರವನ್ನು ತೆಗೆದಿದ್ದು 1826 ರಲ್ಲಿ ಫ್ರೆಂಚ್ ವಿಜ್ಞಾನಿ ಜೋಸೆಫ್ ನೈಸ್ಫೋರ್. ಆದರೆ ಅದಾಗಲೇ ಟಿಪ್ಪು ಸುಲ್ತಾನ್ ನಿಧನ (1799) ಹೊಂದಿದ್ದರು. ಆದ್ದರಿಂದ ಟಿಪ್ಪು ಇದ್ದ ಸಂದರ್ಭದಲ್ಲಿ ಕ್ಯಾಮರ ಇಲ್ಲದಿರುವುದರಿಂದ ಅವರ ಕಲಾತ್ಮಕ ಚಿತ್ರವನ್ನು ಸರ್ಕಾರ ಸರಿಯಾಗಿಯೇ ಬಳಸುತ್ತಿದೆ.

ಅಸಲಿ ವಿಷಯ ಏನೆಂದರೆ ಯುರೋಪಿಯನ್ನರು ತಮ್ಮ ಪುಸ್ತಕಗಳಿಗೆ ಬಳಸಲು ಅನೇಕ ಚಿತ್ರಕಲಾವಿದರಿಂದ ಟಿಪ್ಪುವಿನ ಕಾಲ್ಪನಿಕ ಚಿತ್ರಗಳನ್ನು ಬರೆಸುತ್ತಿದ್ದರು. ಆದರೆ ಜರ್ಮನಿಯ ಪ್ರಸಿದ್ಧ ನಿಯೋಕ್ಲಾಸಿಕ್ ಪೈಂಟರ್ ಜಾನ್ ಜೊಫಾನಿ 1780ರಲ್ಲಿ ಶ್ರೀರಂಗಪಟ್ಟದ ದರಿಯ ದೌಲತ್ ಬಾಗ್ ಅರಮನೆಗೆ ಭೇಟಿ ಕೊಟ್ಟು ಯುವರಾಜನಾಗಿದ್ದ ಟಿಪ್ಪು ಸುಲ್ತಾನನ ಚಿತ್ರವನ್ನು ಬಿಡಿಸಿದ.

ನಂತರ ಮೂರು ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧವನ್ನು ಹೆನ್ರಿ ಸಿಂಗ್ಲೇಟನ್(Henry Singleton) ತನ್ನ ಚಿತ್ರಗಳ ಮೂಲಕ ದಾಖಲಿಸಿದ. ಅವು ಇಂದಿಗೂ ದೆಹಲಿಯ DAG ಮ್ಯೂಸಿಯಂನಲ್ಲಿದ್ದು, ಜಗತ್ಫ್ರಸಿದ್ದಗೊಂಡಿವೆ.

ಆದ್ದರಿಂದ ಟಿಪ್ಪು ಸುಲ್ತಾನನ ಇತಿಹಾಸವೂ ಸೇರಿದಂತೆ ಇತರ ರಾಜರ, ರಾಜಮನೆತನಗಳ ಕುರಿತು ತಿಳಿಯುವುದಾದರೆ ಇತಿಹಾಸದ ಪುಸ್ತಕಗಳನ್ನು ಅವಲಂಬಿಸಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್‌ಗೆ ಬರುವ ಸಂದೇಶಗಳನ್ನು, ಸಾಮಾಜಿಕ ಜಾಲತಾಣದ ಬರಹಗಳ ಓದಿ ನಿಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬೇಡಿ.


ಇದನ್ನು ಓದಿ: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ಹೆಸರಿನಲ್ಲಿ ಓಟು ಕೇಳಿ ಎಂದು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *