ಬುರ್ಖಾ ಧರಿಸದ ಹಿಂದೂ ಮಹಿಳೆಯರು ಕೇರಳದ ಬಸ್‌ ಹತ್ತುವಂತಿಲ್ಲ ಎಂಬುದು ಸುಳ್ಳು

ಬುರ್ಖಾ

“ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್‌ನಲ್ಲಿ ಜಗಳ ನಡೆಯುವ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ಹುಡುಕಿದಾಗ ಇದು ಅಕ್ಟೋಬರ್ 22 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳ-ಮುಲ್ಲೇರಿಯಾ ರಸ್ತೆಯ ಭಾಸ್ಕರ ನಗರದಲ್ಲಿ ಬಸ್‌ ನಿಲ್ಲಿಸದ ವಿಚಾರಕ್ಕೆ ನಡೆದ ಘಟನೆ ಎಂದು ತಿಳಿದುಬಂದಿದೆ. ಅಲ್ಲಿ ಹೊಸದಾಗಿ ಬಸ್ ನಿಲ್ದಾಣವನ್ನು ಆರ್‌ಟಿಓ ಅನುಮೋದಿಸಿದೆ. ಆದರೂ ಕೆಲ ಖಾಸಗಿ ಬಸ್‌ಗಳು ನಿಲ್ಲಿಸದೇ ಇದ್ದುದ್ದರಿಂದ ಖನ್ಸ ಕಾಲೇಜು ವಿದ್ಯಾರ್ಥಿಗಳು ಎರಡು ಬಸ್‌ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಮಾತೃಭೂಮಿ, ರಿಪೋರ್ಟರ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಬಸ್ ಒಳಗಿದ್ದ ಹಿಂದೂ ಮಹಿಳೆಯೊಬ್ಬರು ತನಗೆ ತಡವಾಗುತ್ತಿದೆ ಎಂದು ಬಸ್ ತಡೆದ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಹಾಗಾಗಿ ಅಲ್ಲಿದ್ದ ವಿದ್ಯಾರ್ಥಿನಿಯರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಬುರ್ಖಾದ ವಿಷಯ ಪ್ರಸ್ತಾಪವಾಗಿಲ್ಲ.

ಫ್ಯಾಕ್ಟ್‌ಚೆಕ್ ಮಾಧ್ಯಮ ನ್ಯೂಸ್ ಮೀಟರ್ ಈ ಕುರಿತು ಕುಂಬಾಲ ಪೊಲೀಸ್ ಠಾಣೆಯ ಎಸ್‌ಎಚ್‌ಓ ರಾಜೀವನ್‌ರವರನ್ನು ಸಂಪರ್ಕಿಸಿದೆ. ಅವರು “ಇಲ್ಲಿ ಬಸ್ ನಿಲ್ಲಿಸದ ವಿಚಾರಕ್ಕೆ ಪ್ರತಿಭಟನೆ ನಡೆದಿದೆ. ಬಸ್‌ನೊಳಗಿದ್ದ ಮಹಿಳೆ ಅದರಿಂದ ಕಿರಿಕಿರಿ ಮಾಡಿಕೊಂಡಿದ್ದರಿಂದ ಉಳಿದ ವಿದ್ಯಾರ್ಥಿನಿಯರು ಅದು ಸರಿಯಲ್ಲ ಎಂದು ವಾದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಯಾವುದೇ ದೂರು ಬಂದಿಲ್ಲ” ಎಂದಿದ್ದಾರೆ.

ಇನ್ನು ಪೂರ್ಣ ವಿಡಿಯೋದಲ್ಲಿ ಬಸ್ ಒಳಗೆ ಹಲವರು ಬುರ್ಖಾ ಧರಿಸದೇ ಪ್ರಯಾಣಿಸುತ್ತಿರುವುದನ್ನು ನಾವು ನೋಡಬಹುದು. ಹಾಗಾಗಿ ಈ ವಿಡಿಯೋದಲ್ಲಿನ ಜಗಳ ಬುರ್ಖಾಗೆ ಸಂಬಂಧಿಸಿಲ್ಲ ಎಂಬುದು ಖಚಿತವಾಗಿದೆ.


ಇದನ್ನೂ ಓದಿ; ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದಿಸಲು 24 ಜನ ವಕೀಲರನ್ನು ನೇಮಿಸಿರಲಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *