24 ಜನ ವಕೀಲರನ್ನು ನೇಮಿಸಿ, ಪ್ರಭು ಶ್ರೀರಾಮಚಂದ್ರನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅಫೆಡಿವಿಟ್ ಸಲ್ಲಿಸಿದ್ದ ಆಂಟೋನಿಯೋ ಮೈನೋ ಮತ್ತು ತಂಡದಿಂದ ಇಂದು ಅದೇ ಶ್ರೀರಾಮಚಂದ್ರನಿಗೆ ಪೂಜೆ. ಲೋಕಸಭಾ ಚುನಾವಣಾ ಗಿಮಿಕ್. ಎಂದು ಬರೆದ ವಿಡಿಯೋ ಒಂದು ಹಲವು ದಿನಗಳಿಂದ ಹರಿದಾಡುತ್ತಿದೆ. ಇಂತಹ ಪ್ರತಿಪಾದನೆಯ ಹಲವು ಪೋಸ್ಟರ್‌ಗಳು, ವಿಡಿಯೋಗಳು ಹೀಗಾಗಲೇ ಯೂಟೂಬ್ ಸೇರಿದಂತೆ, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗ ನಮಗೆ ಸೇರಬೇಕೆಂದು ನಿರ್ಮೋಹಿ ಅಖಾಡ, ಸುನ್ನಿ ವಕ್ಫ್ ಬೋರ್ಡ್ ಮತ್ತು ರಾಮ್ ಲಲ್ಲಾ ವಾರಸುದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತೇ ವಿನಃ ಕಾಂಗ್ರೆಸ್ ಅಥವಾ ಸೋನಿಯಾ ಗಾಂಧಿ ಅಲ್ಲ. ಇನ್ನು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದ ಮಾಡಲು 24 ವಕೀಲರನ್ನು ನೇಮಿಸಿತ್ತು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಹಿಂದೆ ಈ ಆರೋಪವನ್ನು ಖ್ಯಾತ ನಟ ನಾನ ಪಾಟೇಕರ್ ಮಾಡಿದ್ದರು ಎಂದು ಹಬ್ಬಿಸಲಾಗಿತ್ತು. “ಕಾಂಗ್ರೆಸ್ ಕಾರ್ಯಕರ್ತರು ಓಟು ಕೇಳಲು ಬಂದಾಗ ರಾಮಮಂದಿರದ ವಿರುದ್ಧ 24 ವಕೀಲರನ್ನು ನೇಮಿಸಿದ್ದು ಏಕೆ ಎಂದು ಪ್ರಶ್ನಿಸಿ” ಎಂದು ನಾನಾ ಪಾಟೇಕರ್ ಹೇಳಿದ್ದಾರೆ ಎಂಬ ಸುಳ್ಳನ್ನು ಹರಿಬಿಡಲಾಗಿತ್ತು. ಹೀಗಾಗಲೇ ನಮ್ಮ ತಂಡ ಈ ಕುರಿತು ಫ್ಯಾಕ್ಟ್‌ಚೆಕ್ ಕೂಡ ಪ್ರಕಟಿಸಿತ್ತು. ಇದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
ಬಿಜೆಪಿ ಕಾರ್ಯಕರ್ತನೊಬ್ಬ ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದ ಮಾಡಲು 24 ವಕೀಲರನ್ನು ನೇಮಿಸಿತ್ತು ಎಂಬ ಕಲ್ಪಿತ ಸುಳ್ಳು ಹೇಳಿರುವ ವಿಡಿಯೋ ಫೇಸ್‌ಬುಕ್, ಯೂಟೂಬ್‌ನಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಅದನ್ನೆ ಮುನ್ನಲೆಯಾಗಿಟ್ಟುಕೊಂಡು ಹಲವಾರು ಸುಳ್ಳು ಆರೋಪಗಳು ಹುಟ್ಟಿಕೊಂಡಿವೆ. ವಾಸ್ತವದಲ್ಲಿ “ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕೆಂದು ರಾಜೀವ್ ಗಾಂಧಿ ಸಹ ಆಸೆ ವ್ಯಕ್ತಪಡಿಸಿದ್ದರು” ಎಂದು ಬಿಜೆಪಿ ನಾಯಕ ಮತ್ತು ಸಂಸದ ಸುಬ್ರಮಣ್ಯಸ್ವಾಮಿ ಹೇಳಿದ ಹೇಳಿಕೆಯೊಂದು ಈ ಹಿಂದೆ ಬಹಳ ಸುದ್ದಿಯಾಗಿತ್ತು.
ಬಿಜೆಪಿ ಮತ್ತು ಕೆಲವು ಬಲಪಂಥೀಯ ಸಂಘಟನೆಗಳು ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ರಾಮ ಮಂದಿರದ ವಿರುದ್ಧ ವಾದಿಸಲು 24 ವಕೀಲರನ್ನು ನೇಮಿಸಿತ್ತು ಎಂದು ಹಲವು ವರ್ಷಗಳಿಂದ ಆಧಾರರಹಿತ ಸುಳ್ಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ಇದು ಪ್ರತೀವರ್ಷದ ಚುನಾವಣೆ ಸಂಧರ್ಭದಲ್ಲಿ ಮುನ್ನಲೆಗೆ ಬರುತ್ತಿರುವ ಆರೋಪವಾಗಿದೆ.
ಇದನ್ನು ಓದಿ: ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.