ಅನಂತ ಪದ್ಮನಾಭಸ್ವಾಮಿ ವಿಗ್ರಹದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಗ್ರಹವನ್ನು 7,800 ಕೆಜಿ ಶುದ್ಧ ಚಿನ್ನ, 7,80,000 ವಜ್ರಗಳಿಂದ ತಯಾರಿಸಲಾಗಿದ್ದು, 3000 ವರ್ಷಗಳಷ್ಟು ಹಳೆಯದಾಗಿದೆ ಎಂದು ಸಾಮಾಜಿಕ ಜಾಲತಾಣದ ಅನೇಕ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್ ವಿಡಿಯೋದ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟವನ್ನು ನಡೆಸಿದಾಗ, 2023ರ ಆಗಸ್ಟ್ 06ರಂದು “ilovetrichy” ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಅದೇ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದ ವಿವರಣೆಯಲ್ಲಿ ಅನಂತ ಪದ್ಮನಾಭಸ್ವಾಮಿ ವಿಗ್ರಹವನ್ನು ಹೈದರಾಬಾದ್ನ ಶಿವನಾರಾಯಣ್ ಜ್ಯುವೆಲರ್ಸ್ ತಯಾರಿಸಿದೆ ಎಂದು ಉಲ್ಲೇಖಿಸಲಾಗಿದೆ. ಸುಮಾರು 2.8ಕೆಜಿ ಚಿನ್ನ ಮತ್ತು ಸುಮಾರು 75,000 ವಜ್ರಗಳನ್ನು ಬಳಸಿ ಪ್ರತಿಮೆಯನ್ನು ತಯಾರಿಸಲಾಗಿದೆ ಎಂದು ಅದು ಹೇಳಲಾಗಿದೆ.
ಈ ವಿಗ್ರಹದ ಕುರಿತು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ದೊರೆತಿವೆ. ಅದೇ ವಿಗ್ರಹದ ವಿಡಿಯೋವನ್ನು ಆಗಸ್ಟ್ 2023ರಲ್ಲಿ ಹಂಚಿಕೊಳ್ಳಲಾಗಿದ್ದೂ, ಅದರಲ್ಲಿ ಕೂಡ ವಿಗ್ರಹವನ್ನು ಹೈದರಾಬಾದ್ನ ಶಿವನಾರಾಯಣ ಜ್ಯುವೆಲರ್ಸ್ ತಯಾರಿಸಿದೆ ಎಂದು ಉಲ್ಲೇಖಿಸಲಾಗಿದೆ.

ಅನಂತ ಪದ್ಮನಾಭಸ್ವಾಮಿಯ ಚಿನ್ನದ ಪ್ರತಿಮೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದಾಗ, ಆಗಸ್ಟ್ 2023ರಲ್ಲಿ ಅದೇ ವಿಗ್ರಹವನ್ನು ಒಳಗೊಂಡಿರುವ ಹಲವಾರು ಸುದ್ದಿ ವರದಿಗಳು ಲಭ್ಯವಾಗಿವೆ. ಈ ವರದಿಗಳ ಪ್ರಕಾರ, ಅನಂತ ಪದ್ಮನಾಭಸ್ವಾಮಿಯ ಚಿನ್ನದ ಪ್ರತಿಮೆಯನ್ನು ಹೈದರಾಬಾದ್ನ ಶಿವನಾರಾಯಣ ಜ್ಯುವೆಲ್ಲರ್ಸ್ ಆಗಸ್ಟ್ 2023ರಲ್ಲಿ ಸಿದ್ಧಪಡಿಸಿದೆ ಎಂದು ಉಲ್ಲೇಖಿಸಲಾಗಿದೆ.
‘ಮನಿ ಕಂಟ್ರೋಲ್’ ಸುದ್ದಿ ವೆಬ್ಸೈಟ್ನೊಂದಿಗೆ ಮಾತನಾಡಿದ ಶಿವ ನಾರಾಯಣ ಜ್ಯುವೆಲರ್ಸ್ನ ವ್ಯವಸ್ಥಾಪಕ ತುಷಾರ್ ಅಗರ್ವಾಲ್ರು “ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ವಿಗ್ರಹದ ಪ್ರೇರಣೆಯಿಂದ ಈ ವಿಗ್ರಹವನ್ನು ತಯಾರಿಸಲಾಗಿದೆ” ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಗ್ರಹದ ಎತ್ತರ 8 ಇಂಚು ಮತ್ತು ಉದ್ದ 18 ಇಂಚು. ಇದನ್ನು 32 ಕುಶಲಕರ್ಮಿಗಳು ಕೈಯಿಂದ ನಿರ್ಮಿಸಿದ್ದಾರೆ, ಪ್ರತಿಯೊಬ್ಬರೂ ಎರಡು ತಿಂಗಳ ಕಾಲ ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಈ ಭವ್ಯವಾದ ವಿಗ್ರಹವನ್ನು 2.8 ಕೆಜಿ ಚಿನ್ನ, 75,000 ಉತ್ತಮ ಗುಣಮಟ್ಟದ ವಜ್ರಗಳನ್ನು ಬಳಸಿ ತಯಾರಿಸಲಾಗಿದ್ದು, ಕೊಲಂಬಿಯಾದ ಪಚ್ಚೆಗಳು ಮತ್ತು ನೈಸರ್ಗಿಕ ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲಾಗಿದೆ.
“ಆಗಸ್ಟ್ 2023ರಲ್ಲಿ ಶಿವನಾರಾಯಣ ಜ್ಯುವೆಲರ್ಸ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪದ್ಮನಾಭಸ್ವಾಮಿ ವಿಗ್ರಹದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದಾಗಿ, ವೈರಲ್ ಆಗಿರುವ ವಿಡಿಯೋದಲ್ಲಿನ ಪದ್ಮನಾಭಸ್ವಾಮಿ ವಿಗ್ರಹ 3ಸಾವಿರ ವರ್ಷಗಳಷ್ಟು ಹಳೆಯದಲ್ಲ” ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

ಹೈದರಾಬಾದ್ನ ಶಿವನಾರಾಯಣ ಜ್ಯುವೆಲರ್ಸ್ ಚಿನ್ನ ಮತ್ತು ವಜ್ರದ ವಿಗ್ರಹಗಳನ್ನು ಮತ್ತು ದೇವತೆಗಳ ಆಭರಣಗಳನ್ನು ತಯಾರಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಅನಂತ ಪದ್ಮನಾಭಸ್ವಾಮಿ ವಿಗ್ರಹವನ್ನೂ ತಯಾರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ತಯಾರಿಸಲಾದ ಅನಂತ ಪದ್ಮನಾಭಸ್ವಾಮಿಯ ವಿಗ್ರಹವನ್ನು ಮೂರು ಸಾವಿರ ವರ್ಷಗಳಷ್ಟು ಹಳೆಯದು ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check : ಮೀರತ್ನಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಿದ್ದಾನೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

