ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಈ ವಿಡಿಯೋದಲ್ಲಿ “ಉನ್ನಾವೋದಲ್ಲಿ ಹಲವಾರು ದಿನಗಳಿಂದ ಕಿರುಕುಳ ನೀಡುತ್ತಿದ್ದ ಅಲೀಮ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕ ರಸ್ತೆಯಲ್ಲಿ ಹುಡುಗಿಯೊಬ್ಬಳು ಥಳಿಸುತ್ತಿರುವುದು” ಎಂದು ಕೋಮು ಆಯಾಮದೊಂದಿಗೆ ದಾಖಲಿಸಲಾಗಿದೆ. ಈ ವಿಡಿಯೋವನ್ನು ಹಲವರು ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ, ಇದರಲ್ಲಿ ಆರೋಪಿಯನ್ನು ಮುಸ್ಲಿಂ ವ್ಯಕ್ತಿಯೆಂದು ಗುರುತಿಸಲಾಗಿದೆ.

ವಿಡಿಯೋ ನೋಡಿದ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವರು ಲವ್ ಜಿಹಾದ್ ಹೀಗೆಯೇ ಆರಂಭಗೊಳ್ಳುವ ಮೊದಲು ಮೊಟಕುಗೊಳಿಸಬೇಕು ಎಂದು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋ ಹೀಗೆ ಹಲವು ಆಯಾಮಗಳಿಂದ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದೆವು. ಈ ಘಟನೆಯು ಜುಲೈ 19, 2025 ರಂದು ಉತ್ತರ ಪ್ರದೇಶದ ಉನ್ನಾವೊದ ಶುಕ್ಲಗಂಜ್ ಬಜಾರ್ನಲ್ಲಿ ನಡೆದಿರುವುದು ದೃಢಪಟ್ಟಿದೆ. ಗಂಗಾಘಾಟ್ ಪೊಲೀಸರು ಈ ಘಟನೆಗೆ ಕೋಮು ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹುಡುಗಿ ಔಪಚಾರಿಕ ದೂರು ದಾಖಲಿಸದ ಕಾರಣ , ಪೊಲೀಸರು ಆತನ ಮೇಲೆ ಸೆಕ್ಷನ್ 151 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಚಲನ್ ನೀಡಿದ್ದಾರೆ. ಆರೋಪಿಯನ್ನು ಆಕಾಶ್ ಎಂದು ಗುರುತಿಸಲಾಗಿದ್ದು, ಅವನ ಧಾರ್ಮಿಕ ಗುರುತಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.

ಈ ವಿಡಿಯೋ ಜುಲೈ 19, 2025 ರಂದು ಉನ್ನಾವೊದ ಶುಕ್ಲಗಂಜ್ ಬಜಾರ್ನಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ. ಇದರಲ್ಲಿ 20 ವರ್ಷದ ಆಕಾಶ್ ಎಂಬಾತನನ್ನು ಕಿರುಕುಳ ನೀಡಿದ ಆರೋಪದ ಮೇಲೆ ಜುಹಾರಿ ದೇವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಥಳಿಸಿದ್ದಾಳೆ. ಆಕಾಶ್ ಈ-ರಿಕ್ಷಾ ಚಾಲಕನಾಗಿದ್ದು, ಗಂಗಾಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಾಹ್ಮಣಗರದಿಂದ ಬಂದವನು. ಈ ಘಟನೆಗೆ ಕೋಮು ಆಯಾಮವಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆಯ ಬಗ್ಗೆ ವಿಶ್ವಾಸಾರ್ಹ ವರದಿಗಳು ಲಭ್ಯವಿದ್ದು, ಆರೋಪಿಯನ್ನು ತಪ್ಪಾಗಿ ಅಲೀಮ್ ಶೇಖ್ ಎಂದು ಗುರುತಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚೆಗೆ ಉತ್ತರ ಪ್ರದೇಶದ ಗಂಗಾಘಾಟ್ನಲ್ಲಿ ನಡೆದ ಘಟನೆಯಲ್ಲಿ, ಹುಡುಗಿಯೊಬ್ಬಳು ತನಗೆ ಕಿರುಕುಳ ನೀಡಿದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬುದು ಸುಳ್ಳಾಗಿದೆ. ಈ ಘಟನೆಗೆ ಕೋಮು ಆಯಾಮವಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆರೋಪಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಅಮೆರಿಕದ ಸುಪ್ರೀಂಕೋರ್ಟ್ ಟ್ರಂಪ್ ರನ್ನು ಗಡಿಪಾರು ಮಾಡಲಿದೆ ಎಂಬುದು ಸುಳ್ಳು

