ಪ್ರಧಾನಿ ನರೇಂದ್ರ ಮೋದಿಯವರು ತರಗತಿಯೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಮೋದಿಯವರು ಮಕ್ಕಳೊಂದಿಗೆ ಬೆರೆತು ಆಕ್ಷನ್ ಸಾಂಗ್ ಹಾಡಿದ್ದಾರೆ.
“ನಮಸ್ತೆ ಜಿ, ನಮಸ್ತೆ ಜಿ” ಯಾರಾದರೂ ಮನೆಗೆ ಬಂದರೆ ಅವರನ್ನು ಗೌರವದಿಂದ ಕೂರಿಸಿ…” ಎಂಬ ಹಾಡಿನ ಸಾಹಿತ್ಯವನ್ನು ಒಳಗೊಂಡಿರುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರು ಮಕ್ಕಳು ದೆಹಲಿ ಶಾಲೆಯವರು ಎಂದು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
” ಕೇಜ್ರಿವಾಲ್ ನಿರ್ಮಿಸಿದ ಶಾಲೆಯಲ್ಲಿ ರೀಲ್ಸ್ ಮಾಡಲು ಹೋಗಿರುವ ನಾಲ್ಕನೇ ವಿಫಲತೆ.. ಹಾಗೆಯೇ ಕೆಲವೊಂದು ಸಲ ಉತ್ತರಪ್ರದೇಶದ ಶಾಲೆಗಳಲ್ಲಿಯೂ ರೀಲ್ಸ್ ಮಾಡಿ, ನಿಮಗೆ ವಾಸ್ತವ ತಿಳಿದು ಬರುತ್ತದೆ. ಈ ಶಾಲೆಯ ಮಕ್ಕಳು ತಮ್ಮಷ್ಟಕ್ಕೆ ತಾವೇ ಈ ನಾಲ್ಕನೇಯ ವಿಫಲತೆಗಿಂತ ಬುದ್ಧಿವಂತರಾಗಿದ್ದಾರೆ. ಇದರ ಬಗ್ಗೆ ಮಕ್ಕಳು ಹೇಳಬೇಕಾದ ಅಗತ್ಯತೆ ಇಲ್ಲ…” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿ ಹುಡುಕಿದಾಗ, 2023ರ ಡಿಸೆಂಬರ್ 18ರಂದು ಪ್ರಧಾನಿ ಮೋದಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಲಭ್ಯವಾಗಿದೆ. “ವಾರಣಾಸಿಯ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸುವುದು ನನಗೆ ಹೊಸ ಚೈತನ್ಯವನ್ನು ತಂದಿದೆ. ಶಾಲೆಯಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳಿಂದಾಗಿ ಅವರು ಈಗ ತಮ್ಮ ಅಧ್ಯಯನವನ್ನು ಹೇಗೆ ಆನಂದಿಸುತ್ತಿದ್ದಾರೆಂದು ಈ ಮುದ್ದಾದ ಮಕ್ಕಳು ನನಗೆ ಹೇಳಿದರು” ಎಂದು ಮೋದಿಯವರು ತಮ್ಮ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
वाराणसी में स्कूली बच्चों के साथ संवाद ने नई ऊर्जा से भर दिया। इन प्यारे-प्यारे बच्चों ने बताया कि स्कूल में सुविधाएं बढ़ने से कैसे अब पढ़ाई में भी उनका मन खूब लग रहा है। pic.twitter.com/H7cGgIxU10
— Narendra Modi (@narendramodi) December 18, 2023
ಅದೇ ವಿಡಿಯೋವನ್ನು ಪ್ರಧಾನ ಮಂತ್ರಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿಯೂ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ, NDTV ಯಂತಹ ಮಾಧ್ಯಮ ವರದಿಗಳು ಲಭ್ಯವಾಗಿವೆ. ಈ ವರದಿಗಳಲ್ಲಿ ವಾರಣಾಸಿಯ ಶಾಲೆಯಲ್ಲಿ ವೈರಲ್ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮೋದಿಯವರು ವಾರಣಾಸಿಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರು ತಮ್ಮ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಮುಗ್ಧ ಮನಸ್ಸುಗಳಿಂದ ಉತ್ತರ ಪಡೆದುಕೊಂಡು ಆಕ್ಷನ್ ಮೂಲಕ ಹಾಡನ್ನು ಹಾಡಿದರು.

2023ರ ಡಿಸೆಂಬರ್ 17 ಮತ್ತು 18ರಂದು ಮೋದಿಯವರು ಎರಡು ದಿನಗಳ ಕಾಲ ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಶಾಲಾ ಮಕ್ಕಳೊಂದಿಗೆ ಬೆರೆತು ಸಂವಾದ ನಡೆಸಿದ್ದರು. ಮೋದಿಯವರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯ ವಿಜಯದ ನಂತರ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಮೋದಿಯವರು ಈ ಭೇಟಿಯ ಸಮಯದಲ್ಲಿ ನಮೋ ಘಾಟ್ನಲ್ಲಿ ನಡೆದ ಕಾಶಿ-ತಮಿಳು ಸಂಗಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಮೋದಿಯವರು ವಾರಣಾಸಿಯ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿರುವ ವಿಡಿಯೋವನ್ನು ದೆಹಲಿಯದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :

