“ನನ್ನ ಸಾವಿಗೆ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರ ಕಿರುಕುಳ ಕಾರಣ” ಎಂದು ಆರೋಪಿಸಿ ಡಿಸೆಂಬರ್ 9ರಂದು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಆತ ಬರೆದಿಟ್ಟ 26 ಪುಟಗಳ ಡೆತ್ ನೋಟ್ ಮತ್ತು ಕೊನೆಯದಾಗಿ ಮಾಡಿದ ವಿಡಿಯೋದ ಬಗ್ಗೆ ಸಾಮಾಜಿಕ ಜಾಲತಾಣವು ಆಘಾತ ವ್ಯಕ್ತಪಡಿಸಿದೆ.
ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವರದಕ್ಷಿಣೆ ದೌರ್ಜನ್ಯ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂಬ ಕೂಗು ಪ್ರಬಲವಾಗಿ ಕೇಳಿ ಬಂದಿದೆ. ಇಂತಹ ಕೌಟುಂಬಿಕ ಕಲಹದಲ್ಲಿ ನೊಂದವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ‘ನಿಖಿತಾ ಸಿಂಘಾನಿಯಾ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಸುಮಾರು 81ಸಾವಿರಕ್ಕೂ ಹೆಚ್ಚು ಜನರು ಟ್ವಿಟ್ ಮಾಡಿದ್ದಾರೆ.
ಈ ನಡುವೆ ನಿಕಿತಾ ಸಿಂಘಾನಿಯಾಳದ್ದು ಎನ್ನಲಾದ ಫೋಟೋವೊಂದು ಹಲವಾರು ವರದಿಗಳಲ್ಲಿ ಪ್ರಕಟವಾಗಿದ್ದು, ಮಹಿಳೆಯೊಬ್ಬಳು ಕಾರಿನೊಳಗೆ ಸನ್ಗ್ಲಾಸ್ ಧರಿಸಿ ಸೆಲ್ಫಿ ತೆಗೆದಿರುವ ಚಿತ್ರ ಇದಾಗಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ “ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ ಬದಲಿಗೆ ನಿಕಿತಾ ಸಿಂಘಾನಿಯಾ ಆತನನ್ನು ಹತ್ಯೆಗೈದಿದ್ದಾಳೆ” ಎಂದು ಸುದರ್ಶನ್ ನ್ಯೂಸ್ನ ಸಾಗರ್ ಕುಮಾರ್ ಎಂಬವರು ಬರೆದು ಕೊಂಡಿದ್ದಾರೆ.
अतुल सुभाष ने आत्महत्या नहीं,बल्कि उसकी निकिता सिंघानिया ने हत्या करी है।#JusticeForAtulSubhash pic.twitter.com/p1nyjAfWJV
— Sagar Kumar “Sudarshan News” (@KumaarSaagar) December 10, 2024
ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಹಿಳೆಯನ್ನು ಗುರಿಯಾಗಿಸಿಕೊಂಡು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಸುದ್ದಿ ಮಾಧ್ಯಮಗಳೂ ಕೂಡ ಇದೇ ಫೋಟೋವನ್ನು ಬಳಸಿ ಸುದ್ದಿ ಮಾಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನರು ಬೆಂಗಳೂರು ಪೊಲೀಸರು ಈ ಮಹಿಳೆಯನ್ನು ಬಂಧಿಸುವಂತೆ ಟ್ಯಾಗ್ ಮಾಡಿ ಕರೆ ನೀಡುತ್ತಿದ್ದಾರೆ.
ಆದರೆ, ಈ ಮಹಿಳೆ ನಿಜಕ್ಕೂ ಮೃತ ಟೆಕ್ಕಿಯ ವಿಚ್ಛೇದಿತ ಪತ್ನಿ ಹೌದೇ ಎಂಬ ಬಗ್ಗೆ ಆನ್ಲೈನ್ನಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಫೋಟೋದಲ್ಲಿರುವ ಈ ಮಹಿಳೆ ನಿಕಿತಾ ಸಿಂಘಾನಿಯಾ ಅಲ್ಲವೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಕನ್ನಡ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲಿಸೋಣಾ.
ಫ್ಯಾಕ್ಟ್ಚೆಕ್
ಸನ್ಗ್ಲಾಸ್ ಧರಿಸಿ ಕಾರಿನಲ್ಲಿ ಕುಳಿತಿರುವ ಮಹಿಳೆಯ ಫೋಟೋ ಮೃತ ಟೆಕ್ಕಿ ಅತುಲ್ ಸುಭಾಷ್ರವರ ವಿಚ್ಚೇದಿತ ಪತ್ನಿಯದ್ದಲ್ಲ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲನೆ ನಡೆಸಿದೆ.
ಈ ಬಗ್ಗೆ ಪರಿಶೀಲನೆ ನಡೆಸಲು ಇಂಡಿಯಾ ಟುಡೇ ಅತುಲ್ರವರ ಸಹೋದರ ಬಿಕಾಸ್ ಮೋದಿಯವರೊಂದಿಗೆ ಮಾತನಾಡಿದ್ದು, “ಪೋಟೋದಲ್ಲಿರುವ ಮಹಿಳೆ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಅಲ್ಲ” ಎಂದು ಖಚಿತಪಡಿಸಿದ್ದಾರೆ ಎಂಬುದಾಗಿ ವರದಿ ಮಾಡಿದೆ.

ಈ ಪ್ರೊಫೈಲ್ ಫೋಟೋವನ್ನು ಹೊಂದಿರುವ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಖಾತೆಗಳು ಪತ್ತೆಯಾಗಿದ್ದು, ಈ ಎರಡೂ ಖಾತೆಗಳು ಪ್ರೈವೇಟ್ನಲ್ಲಿದ್ದು ಛತ್ತೀಸ್ಗಢದ ರಾಯ್ಪುರದ ನಿವಾಸಿಯಾದ ನಿಕಿತಾ ಸಿಂಘಾನಿಯಾರದ್ದು ಎಂದು ತಿಳಿದುಬಂದಿದೆ.
ಮೃತ ಅತುಲ್ ಸುಭಾಷ್ರವರ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ ಆಕ್ಸೆಂಚರ್ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ನವದೆಹಲಿಯಲ್ಲಿ ನೆಲೆಸಿದ್ದಾಗಿಯೂ ಆಕೆಯ ಕುಟುಂಬವು ಉತ್ತರಪ್ರದೇಶದ ಜಾನ್ಪುರದಲ್ಲಿ ನೆಲೆಸಿದೆ ಎಂದೂ ವರದಿಗಳು ಉಲ್ಲೇಖಿಸಿವೆ. ಆಕೆಗೆ ಛತ್ತೀಸ್ಗಢದ ರಾಯ್ಪುರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ತಿಳಿದು ಬಂದಿದೆ. ಈ ಬಗ್ಗೆ ಖುರ್ಪೆಂಚ್ ಎಂಬ ಎಕ್ಸ್ ಖಾತೆಯಲ್ಲಿ ಫ್ಯಾಕ್ಟ್ಚೆಕ್ ಮಾಡಿದ ವಿವರವನ್ನು ಹಂಚಿಕೊಳ್ಳಲಾಗಿದ್ದು, ದಯಬಿಟ್ಟು ನೀವು ಗಡಿಬಿಡಿಯಿಂದ ಹಂಚಿಕೊಂಡು ಮಹಿಳೆಯೊಬ್ಬಳ ಜೀವನದ ಜೊತೆ ಚೆಲ್ಲಾಟ ಆಡಬೇಡಿ ಎಂದು ಕೋರಲಾಗಿದೆ.
🚨🚨🚨ALERT
ये अतुल की शादी की तस्वीर है , जिस लड़की की फोटो पूरे देश में वायरल हो रही है वो कोई और है ,
कृपया जल्दबाजी में किसी और का जीवन तहस नहस न करें,
जब हमने इंक्वायरी की और शादी वाली फोटो से वायरल वाली फोटो को मिलाया तो अलग निकली ।#AtulSubhash #JusticeIsDue pic.twitter.com/S9D63xLqY1
— खुरपेंच (@khurpenchh) December 10, 2024
ಇದರಲ್ಲಿ, ಇಮೇಜ್ ಡಿಟೆಕ್ಟರ್ ಬಳಸಿ ವೈರಲ್ ಆಗುತ್ತಿರುವ ಫೋಟೋ ಮತ್ತು ಅತುಲ್ರವರ ವಿಚ್ಛೇದಿತ ಪತ್ನಿಯ ಫೋಟೋಗಳ ಸಾಮ್ಯತೆಯನ್ನು ಪರಿಶೀಲಿಸಲಾಗಿದ್ದು, ಎರಡೂ ಫೋಟೋಗಳು ಭಿನ್ನ ವ್ಯಕ್ತಿಗಳದ್ದು ಎಂಬುದನ್ನು ಸೂಚಿಸಿವೆ.

ಇದಲ್ಲದೇ, ಮಾಧ್ಯಮಗಳಲ್ಲಿ ಮೃತ ಅತುಲ್ ಸುಭಾಷ್ರವರ ಪತ್ನಿಯ ನೈಜ ಫೋಟೋ ಕೂಡ ಹಂಚಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಅತುಲ್ ರವರ ಸಹೋದರ ದೃಢಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬೇರೊಬ್ಬ ಮಹಿಳೆಯ ಫೋಟೋವನ್ನು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ರವರ ಪತ್ನಿ ನಿಕಿತಾ ಸಿಂಘಾನಿಯಾ ಎಂದು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ.

