ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 7 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿವೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಂಬಂಧವಿಲ್ಲದ ವಿಡಿಯೋ ಫೋಟೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವುದು ಕಂಡು ಬರುತ್ತಿದೆ. ತಂದೆಯೊಬ್ಬ ಆಸ್ಪತ್ರೆಯಿಂದ ಮಗುವಿನ ಮೃತದೇಹವನ್ನು ಬೈಕ್ನಲ್ಲಿ ಹೊತ್ತೊಯ್ಯುವ 43 ಸೆಕೆಂಡ್ಗಳ ಹೃದಯವಿದ್ರಾವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದೊಂದಿಗೆ ತಳುಕು ಹಾಕಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ಬಳಕೆದಾರರು “ಒಬ್ಬ ತಂದೆಗೆ ತನ್ನ ಮಗನ ಮೃತದೇಹ ಕೊಂಡ್ಯೊಯಲು ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲವೇ? ತಿರುಪತಿ ಕಾಲ್ತುಳಿತದಲ್ಲಿ ಮುಗ್ಧ ಮಗು ಪ್ರಾಣ ಕಳೆದುಕೊಂಡಿದೆ” ಎಂದು ಎಕ್ಸ್ ಪೋಸ್ಟ್ನ್ನು ಹಂಚಿಕೊಂಡಿದ್ದು, ವಿಡಿಯೋದ ಮೇಲೆ “ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 12 ವರ್ಷದ ಮಗುವನ್ನು ಸಾಗಿಸಲು ಅವರು ಆಂಬ್ಯುಲೆನ್ಸ್ಗೆ Rs20,000 ಕೇಳಿದರು… ಹಣದ ಕೊರತೆಯಿಂದ ಮಗುವಿನ ತಂದೆ ತನ್ನ ಮಗನನ್ನು 90 ಕಿ.ಮೀ ದೂರ ಬೈಕ್ನ ಮೇಲೆ ಹೊತ್ತುಕೊಂಡು ಹೋದರು” ಎಂದು ಬರೆಯಲಾಗಿದೆ.

ಫ್ಯಾಕ್ಟ್ಚೆಕ್
ಗುರುವಾರ (ಜ.8) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು “ತಿರುಪತಿ ಕಾಲ್ತುಳಿತದಲ್ಲಿ ಮಗನ ಮೃತದೇಹ ಹೊತ್ತೊಯ್ದ ತಂದೆ, ಆಂಬ್ಯುಲೆನ್ಸ್” ಇತ್ಯಾದಿ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಈ ಘಟನೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಲಭಿಸಿಲ್ಲ.
ಆದರೆ, ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಂಧ್ರಪ್ರದೇಶದ ಅಧಿಕೃತ ಖಾತೆಯಿಂದ 2022ರ ಏಪ್ರಿಲ್ 26ರಂದು X ಪೋಸ್ಟ್ನಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ” #ರೂಯಾ ಸರ್ಕಾರಿ ಆಸ್ಪತ್ರೆಯ ಖಾಸಗಿ ಆಂಬ್ಯುಲೆನ್ಸ್ ಆಪರೇಟರ್ ಬೆಲೆಯನ್ನು ಕಡಿಮೆ ಮಾಡಲು ನಿರಾಕರಿಸಿದಾಗ…ಮಂಗಳವಾರ ಮುಂಜಾನೆ ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೋಟಾರು ಸೈಕಲ್ನಲ್ಲಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಮಗನ ಶವವನ್ನು ತಂದೆಯೊಬ್ಬರು ಹೊತ್ತೊಯ್ಯುತ್ತಿರುವುದು” ಎಂಬ ತಲೆಬರಹದೊಂದಿಗೆ ಈ ವಿಡಿಯೋ ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ಆರೋಗ್ಯ ಮೂಲಸೌಕರ್ಯ ಕುಸಿಯುತ್ತಿರುವ ಸ್ಥಿತಿಯನ್ನು ಟೀಕಿಸಲು ಇದೇ ವಿಡಿಯೋವನ್ನು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಅಂದಿನ ವಿರೋಧ ಪಕ್ಷದ ನಾಯಕ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 2022ರ ಏಪ್ರಿಲ್ 26ರಂದು ಹಂಚಿಕೊಂಡಿದ್ದರು.
My heart aches for innocent little Jesava,who died at Tirupati’s RUIA hospital.His father pleaded with authorities to arrange an ambulance which never came.With mortuary vans lying in utter neglect,pvt ambulance providers asked a fortune to take the child home for final rites.1/2 pic.twitter.com/mcW94zrQUt
— N Chandrababu Naidu (@ncbn) April 26, 2022
“ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ (RUIA) ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕರು ಭಾರಿ ಮೊತ್ತದ ಬೇಡಿಕೆಯಿಟ್ಟ ನಂತರ ಆಂಧ್ರಪ್ರದೇಶದ ತಿರುಪತಿಯ ನಿವಾಸಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತಮ್ಮ ಮಗನ ಮೃತದೇಹವನ್ನು ಸಾಗಿಸಲು ತೀರ್ಮಾನಿಸಿದರು. ತಿರುಪತಿಯ RUIA ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್ ಮಂಡಲ್ ಗ್ರಾಮದ 10 ವರ್ಷದ ಬಾಲಕ ಚಿಕಿತ್ಸೆ ನಂತರ ಸಾವನ್ನಪ್ಪಿದ್ದನು ಎಂದು ಇಂಡಿಯಾ ಟುಡೇ 2022 ರ ಏಪ್ರಿಲ್ 26ರಂದು ವರದಿ ಮಾಡಿದ್ದು, ಇದರೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಂಡಿದೆ.

“ಅತ್ಯಂತ ಅಮಾನವೀಯ ಘಟನೆ, ತಿರುಪತಿಯ ಸರ್ಕಾರಿ ಸ್ವಾಮ್ಯದ ರುಯಿಯಾ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರ ಸಿಂಡಿಕೇಟ್ ತನ್ನ ಮೃತ ಮಗುವಿನ ದೇಹವನ್ನು ಕೇವಲ 90 ಕಿಮೀ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಸಾಗಿಸಲು ಕೃಷಿ ಕಾರ್ಮಿಕನಿಂದ 10,000 ರೂ.ಗಿಂತ ಹೆಚ್ಚು ಬೇಡಿಕೆಯಿತ್ತು… 10 ವರ್ಷದ ಕಿಡ್ನಿ ಮತ್ತು ಯಕೃತ್ತಿನ ಚಿಕಿತ್ಸೆಗಾಗಿ ನೆರೆಯ ಅನ್ನಮಯ್ಯ ಜಿಲ್ಲೆಯ ಚಿತ್ವೇಲ್ ಎಂಬ ಬಾಲಕನನ್ನು ಕೆಲವು ದಿನಗಳ ಹಿಂದೆ ಶ್ರೀ ವೆಂಕಟೇಶ್ವರ ರಾಮನಾರಾಯಣ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸೋಮವಾರ ರಾತ್ರಿ ಅಸುನೀಗಿದ್ದನು…. ” ಎಂದು ಎಪ್ರಿಲ್ 26, 2022 ರ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ

ವೈರಲ್ ವಿಡಿಯೋ 2025ರ ತಿರುಪತಿ ದೇವಸ್ಥಾನದ ಕಾಲ್ತುಳಿತಕ್ಕೆ ಸಂಬಂಧಿಸಿದ್ದಲ್ಲ ಎಂದು ದೃಢಪಡಿಸುವ ಇದೇ ರೀತಿಯ ವರದಿಗಳು ನಮಗೆ ಲಭಿಸಿವೆ.
ಆಂಧ್ರಪ್ರದೇಶ ಪೊಲೀಸರು ಕೂಡ 2025ರ ಜನವರಿ 9ರಂದು ಟ್ವೀಟ್ ಮಾಡಿದ್ದು, ವೈರಲ್ ವಿಡಿಯೋ ನಿನ್ನೆ(ಜನವರಿ 8) ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ 2022ರಲ್ಲಿ ತಿರುಪತಿಯಲ್ಲಿ ಸಂಭವಿಸಿದ ಘಟನೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.
URGENT: Beware of old videos being recirculated as recent footage from #TirupatiStampede. This particular video is from an incident that occurred in Tirupati in 2022, not yesterday. We urge citizens to verify facts before sharing to avoid spreading misinformation. pic.twitter.com/zuKfLL04OV
— Andhra Pradesh Police (@APPOLICE100) January 9, 2025
ಒಟ್ಟಾರೆಯಾಗಿ ಹೇಳುವುದಾದರೆ, ತಿರುಪತಿ ಆಸ್ಪತ್ರೆಯಿಂದ ತಂದೆಯು ತನ್ನ ಮಗನ ಶವವನ್ನು ಬೈಕ್ನಲ್ಲಿ ಸಾಗಿಸಿದ ವಿಡಿಯೋ 2022ರದ್ದಾಗಿದ್ದು; ಗುರುವಾರ (ಜ.8) ರಂದು ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧವನ್ನು ಹೊಂದಿಲ್ಲ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : Fact Check | ಬಾಂಗ್ಲಾದೇಶದ ಕಾಂತಾಜಿ ದೇವಾಸ್ಥಾನದ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

