ಅಮೆರಿಕಕ್ಕೆ ಹೆದರುವುದಿಲ್ಲ, ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿಲ್ಲ

ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಬೇಕು, ಇಲ್ಲದಿದ್ದರೆ ಭಾರತದ ಮೇಲೆ ಮತ್ತಷ್ಟು ಶುಂಕ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದರ ನಡುವೆ, “ನಮ್ಮ ದೇಶದ ಆರ್ಥಿಕತೆಯು ವೈಟ್ ಹೌಸ್ ನಿಂದ ನಡೆಯುವುದಿಲ್ಲ. ಹಾಗಾಗಿ ಅಮೆರಿಕಕ್ಕೆ ಹೆದರಿ ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ” ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ ಎಂದು Middle Eastern Affairs ಎಂಬ ಎಕ್ಸ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಆ ಟ್ವೀಟ್‌ನ ಸ್ಕ್ರೀನ್‌ ಶಾಟ್ ಅನ್ನು ಈ ಕೆಳಗೆ ನೋಡಬಹುದು. ಆ ಟ್ವೀಟ್ ಅನ್ನು ಸುಮಾರು 27 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ನಿಜವೆಂದು ಭಾವಿಸಿರುವ ಸಾಧ್ಯತೆ ಇದೆ.

 

ಹಿನ್ನಲೆ

ಭಾರತವು ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದಕ್ಕೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿ, ಭಾರತದಿಂದ ಆಮದಾಗುವ ಸರಕುಗಳ ಮೇಲೆ 25% ತೆರಿಗೆ (ಟಾರಿಫ್) ವಿಧಿಸುವುದಾಗಿ ಜುಲೈ 30, 2025 ರಂದು ಘೋಷಿಸಿದ್ದಾರೆ, 25% ತೆರಿಗೆಯ ಜೊತೆಗೆ ಹೆಚ್ಚುವರಿ “ದಂಡ” (penalty) ವಿಧಿಸುವುದಾಗಿಯೂ ಘೋಷಿಸಿದ್ದಾರೆ. ಇದಕ್ಕೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ರವರು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆಯೇ ಹೊರತು ಮೇಲಿನ ಟ್ವೀಟ್‌ನಲ್ಲಿ ಹೇಳಿದಂತೆ “ನಮ್ಮ ದೇಶದ ಆರ್ಥಿಕತೆಯು ವೈಟ್ ಹೌಸ್ ನಿಂದ ನಡೆಯುವುದಿಲ್ಲ” ಎಂದು ಹೇಳಿಲ್ಲ.

ಫ್ಯಾಕ್ಟ್ ಚೆಕ್

ಟ್ರಂಪ್ ತೆರಿಗೆಗೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ರವರು, “ನಮ್ಮ ದೇಶದ ಆರ್ಥಿಕತೆಯು ವೈಟ್ ಹೌಸ್ ನಿಂದ ನಡೆಯುವುದಿಲ್ಲ” ಎಂದು ಹೇಳಿದ್ದಾರೆಯೇ ಎಂದು ಹುಡುಕಿದಾಗ ಈ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಆ ರೀತಿ ಹೇಳಿಕೆ ನೀಡಿದ್ದರೆ ಭಾರತದ ಪ್ರಮುಖ ಮಾಧ್ಯಮಗಳು ಅದನ್ನು ದೊಡ್ಡದಾಗಿ ಸುದ್ದಿ ಮಾಡಿರುತ್ತಿದ್ದವು. ಆದರೆ ಅಂತಹ ಯಾವುದೇ ಸುದ್ದಿಗಳು ನಮಗೆ ಕಂಡು ಬಂದಿಲ್ಲ.

ಬದಲಿಗೆ ಜೈಶಂಕರ್ ಅವರು “ಭಾರತ ಮತ್ತು ಅಮೆರಿಕ ನಡುವೆ ನವದೆಹಲಿಯ ಹಿತಾಸಕ್ತಿಗಳನ್ನು ಪೂರೈಸುವ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿದೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುವಾಗ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧವಾಗಿದೆ” ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ. ಅದನ್ನು ಇಲ್ಲಿ ಓದಬಹುದು.

ಈ ಹಿಂದೆ ತೆರಿಗೆ ಕುರಿತ ಜೈಶಂಕರ್‌ರವರು ಹೇಳಿದ್ದೇನು

“ಭಾರತವು ಟ್ರಂಪ್ ಆಡಳಿತದೊಂದಿಗೆ ಆರಂಭಿಕವಾಗಿ ಸಂಪರ್ಕ ಸಾಧಿಸಿ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು (Bilateral Trade Agreement) 2025ರ ಶರತ್ಕಾಲದ ವೇಳೆಗೆ ಒಪ್ಪಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದ್ದಾರೆ. ಈ ಒಪ್ಪಂದವು ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಏಪ್ರಿಲ್ 9, 2025 ರಂದು ನವದೆಹಲಿಯ ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಮಾತನಾಡುವಾಗ, “ನಮ್ಮ ತಂತ್ರವು ಸ್ಪಷ್ಟವಾಗಿದೆ, ನಾವು ಟ್ರಂಪ್ ಆಡಳಿತದೊಂದಿಗೆ ಈ ವಿಷಯಗಳ ಬಗ್ಗೆ ಆರಂಭಿಕವಾಗಿ ತೊಡಗಿಸಿಕೊಂಡಿದ್ದೇವೆ ಮತ್ತು ಒಪ್ಪಂದವನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಮುಂದುವರಿದು ತೆರಿಗೆಯಿಂದ ಆಗುವ ಪರಿಣಾಮವನ್ನು ಊಹಿಸಲು ಇನ್ನೂ ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. “ಪರಿಣಾಮವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ, ಏಕೆಂದರೆ ಇದರ ಸಂಪೂರ್ಣ ವಿವರಗಳು ಇನ್ನೂ ತಿಳಿದಿಲ್ಲ” ಎಂದು ಅವರು ತಿಳಿಸಿದ್ದಾರೆ. ಭಾರತವು ಈ ತೆರಿಗೆಯನ್ನು ಸವಾಲಾಗಿ ಸ್ವೀಕರಿಸದೆ, ಸಂಭಾಷಣೆಯ ಮೂಲಕ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ ಎಂದು ಒತ್ತಿಹೇಳಿದ್ದಾರೆ.

ಜೈಶಂಕರ್ ಅವರು ಭಾರತವು ತೆರಿಗೆಗೆ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಅಮೆರಿಕದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಆದ್ಯತೆ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಕಳೆದ ಆರು ವಾರಗಳಲ್ಲಿ ನಾವು ಅಮೆರಿಕದೊಂದಿಗೆ ಯುರೋಪ್‌ನೊಂದಿಗೆ ಕಳೆದ ಎರಡು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಚರ್ಚೆಗಳನ್ನು ನಡೆಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ಕುರಿತು ಇನ್ನಷ್ಟು ಹುಡುಕಿದಾಗ ಎಕ್ಸ್‌ನಲ್ಲಿ ವಿದೇಶಾಂಗ ಸಚಿವಾಲಯದ ಅಧಿಕೃತ ಫ್ಯಾಕ್ಟ್‌ಚೆಕ್ ಖಾತೆಯಲ್ಲಿ, “ಇದು ಸುಳ್ಳು ಸುದ್ದಿ. ಈ ಹ್ಯಾಂಡಲ್ (@Middle_Eastern0) ನಕಲಿ ಸುದ್ದಿಗಳೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮಾಡುತ್ತಿದೆ. ಜಾಗರೂಕರಾಗಿರಿ” ಎಂದು ಟ್ವೀಟ್ ಮಾಡಿರುವುದು ಕಂಡುಬಂದಿದೆ.

ಹಾಗಾಗಿ ನಮ್ಮ ದೇಶದ ಆರ್ಥಿಕತೆಯು ವೈಟ್ ಹೌಸ್ ನಿಂದ ನಡೆಯುವುದಿಲ್ಲ. ಹಾಗಾಗಿ ಅಮೆರಿಕಕ್ಕೆ ಹೆದರಿ ರಷ್ಯಾದಿಂದ ತೈಲ ಆಮದು ನಿಲ್ಲುವುದಿಲ್ಲ” ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿಲ್ಲ ಎಂಬುದು ಸ್ಪಷ್ಟವಾಗಿದ್ದು, Middle Eastern Affairs ಎಂಬ ಖಾತೆಯು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದೆ ಎಂಬುದು ಖಚಿತವಾಗಿದೆ.


ಇದನ್ನೂ ಓದಿ: Fact Check | ಬಿಹಾರದ ಯುವಕ ಗುಜರಿ ವಸ್ತುಗಳಿಂದ ವಿಮಾನ ನಿರ್ಮಿಸಿದ್ದಾನೆ ಎಂಬುದು ಸುಳ್ಳು

Leave a Reply

Your email address will not be published. Required fields are marked *