ಮಹಿಳಾ ಮೋರ್ಚಾದ ಅಧ್ಯಕ್ಷೆ ಸಿ.ಮಂಜುಳಾ ನೇತೃತ್ವದ ನಿಯೋಗವು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕಿಶೋರ್ ರಾಹತ್ಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಅದರಲ್ಲಿ ರಾಜ್ಯದಲ್ಲಿ ಶಕ್ತಿ ಯೋಜನೆ ವಿಫಲ, ಕಡಿಮೆ ಸಂಖ್ಯೆಯ ಬಸ್‌ಗಳಿವೆ ಎಂದು ಆರೋಪಿಸಿದೆ. ಈ ಕುರಿತು ಪ್ರಜಾವಾಣಿ ವರದಿ ಮಾಡಿದ್ದು, “ರಾಜ್ಯ ಸರ್ಕಾರವು ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆಯನ್ನು ಘೋಷಿಸಿದೆ. ಆದರೆ ಓಡಾಟಕ್ಕೆ ತುಕ್ಕುಹಿಡಿದ, ಸುಸ್ಥಿತಿಯಲ್ಲಿ ಇರದ ಬಸ್‌ಗಳನ್ನು ನೀಡಿದೆ. ಹೀಗಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಬಿಜೆಪಿ ಮಹಿಳಾ ಮೋರ್ಚಾವು ಮನವಿಯಲ್ಲಿ ಟೀಕಿಸಿದೆ. ‘ಮೊದಲು ಸಂಚರಿಸುತ್ತಿದ್ದ ಬಸ್‌ಗಳಿಗಿಂತ ಕಡಿಮೆ ಸಂಖ್ಯೆಯ ಬಸ್‌ಗಳನ್ನು ಕಾರ್ಯಾಚರಣೆಗೆ ಬಿಡಲಾಗಿದೆ. ಕೆಟ್ಟ ಸ್ಥಿತಿಯಲ್ಲಿರುವ ಬಸ್‌ಗಳ ಕಾರಣಕ್ಕೆ ಅಪಘಾತವಾಗಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದೆ” ಎಂದು ವರದಿಯಲ್ಲಿ ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್
ರಾಜ್ಯ ಸರ್ಕಾರವು ಶಕ್ತಿ ಯೋಜನೆ ಘೋಷಿಸಿದ ನಂತರ ಹೊಸದಾಗಿ 5800 ಬಸ್‌ಗಳ ಖರೀದಿಗೆ ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರ ಘೋಷಣೆಯನ್ನು ಅಕ್ಟೋಬರ್ 17, 2024ರಂದು ಹಲವು ವಿಶ್ವಸಾರ್ಹ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.


ಇನ್ನು ಮಾರ್ಚ್ 24, 2025ರಂದು ಹೊಸದಾಗಿ 2000 ಬಸ್‌ಗಳ ಖರೀದಿಗೆ ಸರ್ಕಾರ ಮುಂದಾಗಿದೆ, ಅದಕ್ಕಾಗಿ 2000 ಕೋಟಿ ಅನುದಾನ ನೀಡಲಾಗಿದೆ ಎಂದು ಸಾರಿಗೆ ಸಚಿವರು ಹೇಳಿರುವುದನ್ನು ಒನ್‌ಇಂಡಿಯಾ.ಕಾಂ ವರದಿ ಮಾಡಿದೆ. ಅದನ್ನು ಇಲ್ಲಿ ನೋಡಬಹುದು.

ಅಲ್ಲದೇ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಅವಾರ್ಡ್ ಗೆ ಪಾತ್ರವಾಗಿದೆ. ಜೊತೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಶಕ್ತಿ ಯೋಜನೆ ಸೇರ್ಪಡೆಯಾಗಿದೆ.

ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ "Golden Book of World Records" ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದೆ.
ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆಯಾದ ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ 504 ಕೋಟಿ… pic.twitter.com/CHAtAlGbt4
— CM of Karnataka (@CMofKarnataka) August 18, 2025
ಕಳೆದ ವಾರವಷ್ಟೇ ಅಕ್ಟೋಬರ್ 06ರಂದು ಉತ್ತರ ಕರ್ನಾಟಕದ (North Karnataka) ಸಾರಿಗೆ ಕ್ಷೇತ್ರದಲ್ಲಿ ನೂತನ ಯುಗಕ್ಕೆ ಕನ್ನಡಿ ಹಿಡಿದಂತಾಗಿದೆ. NWKRTCಗೆ 700 ಹೊಸ ಬಸ್‌ಗಳ (Bus) ಸೇರ್ಪಡೆ, ಬೆಳಗಾವಿಗೆ (Belagavi) 100 ಎಲೆಕ್ಟ್ರಿಕ್ ಬಸ್‌ಗಳು, ₹49.20 ಕೋಟಿ ವೆಚ್ಚದ ಹೊಸ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ – ಇವೆಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಘೋಷಿಸಿ, ಈ ಭಾಗದ ಜನತೆಗೆ ಪ್ರಮುಖ ಗುಡ್ ನ್ಯೂಸ್ ನೀಡಿದ್ದಾರೆ” ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ಅದನ್ನು ಇಲ್ಲಿ ನೋಡಬಹುದು.

ಒಟ್ಟಾರೆ ಹೇಳುವುದಾದರೆ ಕರ್ನಾಟಕದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 5,800 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಈಗಾಗಲೇ ಸುಮಾರು 4,301 ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ ಮತ್ತು ಉಳಿವುಳಿದ ಬಸ್‌ಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ. ಇದರ ಜೊತೆಗೆ, ಸುಮಾರು 9,000 ಹುದ್ದೆಗಳ ನೇಮಕಾತಿಗೂ ಅನುಮತಿ ನೀಡಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಹಾಗಾಗಿ ಬಿಜೆಪಿ ಮಹಿಳಾ ಮೋರ್ಚಾ ಹೇಳಿದಂತೆ ಕಡಿಮೆ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದು ಸುಳ್ಳು.
ಇನ್ನು ಅಪಘಾತದ ವಿಚಾರಕ್ಕೆ ಬರುವುದಾದರೆ ತುಕ್ಕು ಹಿಡಿದ, ಕೆಟ್ಟ ಸ್ಥಿತಿಯಲ್ಲಿರುವ ಬಸ್‌ಗಳ ಕಾರಣಕ್ಕೆ ಅಪಘಾತವಾಗಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬುದಕ್ಕೂ ಸಹ ಯಾವುದೇ ಆಧಾರವಿಲ್ಲ. ಹಾಗಾಗಿ ಬಿಜೆಪಿ ಮಹಿಳಾ ಮೋರ್ಚಾದ ಆರೋಪ ವಾಸ್ತವವಲ್ಲ, ಬದಲಿಗೆ ರಾಜಕೀಯ ಉದ್ದೇಶದಿಂದ ಕೂಡಿದೆ ಎಂಬುದನ್ನು ಮೇಲಿನ ಸಾಕ್ಷ್ಯಗಳು ದೃಢೀಕರಿಸುತ್ತವೆ.
ಇದನ್ನೂ ಓದಿ: Fact Check | ಮುಸ್ಲಿಂ ಯುವಕ ತನ್ನ ಹಿಂದೂ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
