ಇತ್ತೀಚೆಗೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಬಿಷ್ಣೋಯ್ ಗ್ಯಾಂಗ್ ಕೊಂದ ನಂತರ, ನಟ ಸಲ್ಮಾನ್ ಖಾನ್ಗೆ ಕೂಡ ಇದೇ ಗ್ಯಾಂಗ್ ಬೆದರಿಕೆಯನ್ನು ಹಾಕಿತ್ತು. ಇದೀಗ “ಸಂಜಯ್ ದತ್ ಅವರು ಸಲ್ಮಾನ್ ಖಾನ್ಗೆ ಬೆಂಬಲ ವ್ಯಕ್ತಪಡಿಸಿ ಲಾರೆನ್ಸ್ ಬಿಷ್ಣೋಯ್ಗೆ ಎಚ್ಚರಿಕೆ ನೀಡಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವಿಡಿಯೋ ಕೂಡ ಬಹಳ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ನಟ ಸಂಜಯ್ ದತ್ ಅವರ ಧ್ವನಿ ಸ್ಪಷ್ಟವಾಗಿದ್ದು, ಇದರಲ್ಲಿ ನಿಜವಾಗಿಯೂ ಕೂಡ ಸಂಜಯ್ ದತ್ ಅವರೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂಬಂತೆ ಕಂಡುಬಂದಿದೆ. ಹೀಗಾಗಿ ಸಾಕಷ್ಟು ಮಂದಿ ಈ ವಿಡಿಯೋ ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದಿಂದ ವಿವಿಧ ಕಿ ಪ್ರೇಮ್ಗಳನ್ನು ಹುಡುಕಾಟ ನಡೆಸಲಾಯಿತು. ಈ ವೇಳೆ 7 ನವಂಬರ್ 2018 ರಂದು ಸಂಜಯ್ ದತ್ ಅವರ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದು ಕಂಡು ಬಂದಿದೆ. ಇದು ಮೂಲ ವಿಡಿಯೋವಾಗಿದ್ದು, ಇದಕ್ಕೂ ವೈರಲ್ ವಿಡಿಯೋಗೂ ಸಾಕಷ್ಟು ಹೋಲಿಕೆ ಇರುವುದು ಪತ್ತೆಯಾಗಿದೆ.

ಆದರೆ ಮೂಲ ವಿಡಿಯೋದಲ್ಲಿನ ಸಂಜಿಯ್ ದತ್ ಅವರ ಹೇಳಿಕೆಗೂ ವೈರಲ್ ವಿಡಿಯೋದಲ್ಲಿನ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಮೂಲ ವಿಡಿಯೋದಲ್ಲಿ ತಮ್ಮ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಂಜಯ್ ದತ್ ಕೋರಿದ್ದಾರೆ. ಹಾಗಾಗಿ ವೈರಲ್ ವಿಡಿಯೋದ ಆಡಿಯೋವನ್ನು ಪರಿಶೀಲಿಸಲು ನಾವು ಹೈವ್ ಡಿಟೆಕ್ಟರ್ ಅನ್ನು ಬಳಸಿದೆವವು. ಈ ವೇಳೆ ನಮಗೆ ವೈರಲ್ ವಿಡಿಯೋದಲ್ಲಿ ಶೇ. 76.5ರಷ್ಟು ಆಡಿಯೋ AIನಿಂದ ರಚಿತವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.

ಈ ಕುರಿತು ಇನ್ನಷ್ಟು ಪರಿಶೀಲನೆಯನ್ನು ನಡೆಸಲು ಹುಡುಕಾಟವನ್ನು ನಡೆಸಿದಾಗ, ಟ್ರೂ ಮೀಡಿಯಾ AI ಡಿಟೆಕ್ಟರ್ನಲ್ಲಿ ವೈರಲ್ ವಿಡಿಯೋದ ಆಡಿಯೋವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಾಯಿತು. ಆಗ ವೈರಲ್ ವಿಡಿಯೋ ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಸಂಜಯ್ ದತ್ ಅವರು ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ಗೆ ಎಚ್ಚರಿಕೆ ನೀಡಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಸಂಜಯ್ ದತ್ ಅವರು ದೀಪಾವಳಿಯ ಶುಭಾಶಯ ಕೋರುವುದಕ್ಕೆ ಸಂಬಂಧಿಸಿದಾಗಿದ್ದು, ಈ ವಿಡಿಯೋವನ್ನು ಬಳಸಿಕೊಂಡು ಇದರ ಧ್ವನಿಯನ್ನು AI ಮೂಲಕ ಬದಲಾಯಿಸಲಾಗಿದೆ. ಹಾಗಾಗಿ ವೈರಲ್ ವಿಡಿಯೋ AI ನಿಂದ ಎಡಿಟ್ ಮಾಡಿರೋದು ಸ್ಪಷ್ಟವಾಗಿದೆ. ಹಾಗಾಗಿ ಇಂತಹ ಸುಳ್ಳು ನಿರೂಪಣೆಯಿಂದ ಕೂಡಿರುವ ವಿಡಿಯೋಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮಹಮ್ಮದ್ ಯೂನಸ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂಬುದು ಕಟ್ಟುಕಥೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

