ಕೇಸರಿ ಧೋತಿ ಧರಿಸಿದ ಜನರು ಪರಸ್ಪರ ಸುಡುವ ಪಂಜುಗಳನ್ನು (ಮಾರ್ಷಲ್ಗಳು) ಎಸೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ಹಲವರು ದೇವಸ್ಥಾನದ ದೇಣಿಗೆ ಹಣದ ವಿಚಾರವಾಗಿ ಪುರೋಹಿತರ ಗುಂಪು ಈ ರೀತಿಯ ಗಲಾಟೆ ಮಾಡಿಕೊಂಡಿದೆ ಎಂದು ಬರೆದುಕೊಂಡು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನೂ ಹಲವರು “ಭಕ್ತರು ನೀಡಿದ ಕಾಣಿಕೆ ಹಣ ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ಪುರೋಹಿತರು ಈ ರೀತಿಯಾಗಿ ಹೊಡೆದಾಡಿಕೊಂಡಿದ್ದಾರೆ. ಇದು ವ್ಯವಹಾರವಲ್ಲದೆ ಮತ್ತಿನ್ನೇನು?” ಎಂದು ಪ್ರಶ್ನಾರ್ಥಕವಾಗಿ ಟೀಕೆ ಮಾಡಿ, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಹಲವರು ನಿಜವೆಂದು ಭಾವಿಸಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಈ ವೇಳೆ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಹಲವಾರು ಮಾಧ್ಯಮಗಳ ವರದಿಗಳು ನಮಗೆ ಕಂಡು ಬಂದಿವೆ. ಈ ವರದಿಗಳ ಪ್ರಕಾರ, ಈ ವೀಡಿಯೊ ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಸಮಯದಲ್ಲಿ ನಡೆದ ತೂಟೆದಾರ ಆಚರಣೆಯದ್ದಾಗಿದೆ ಎಂಬುದು ತಿಳಿದು ಬಂದಿದೆ.

ಶತಮಾನಗಳಷ್ಟು ಹಳೆಯದಾದ ಈ ಆಚರಣೆಯಲ್ಲಿ, ಅತ್ತೂರು ಮತ್ತು ಕೊಡೆತ್ತೂರಿನ ನೆರೆಯ ಗ್ರಾಮಗಳ ಭಕ್ತರು ರಾಕ್ಷಸರ ಮೇಲೆ ದುರ್ಗಾ ದೇವಿಯ ವಿಜಯವನ್ನು ಗೌರವಿಸಲು ಸಾಂಕೇತಿಕ ಯುದ್ಧದಲ್ಲಿ ಪರಸ್ಪರ ಸುಡುವ ತೆಂಗಿನ ಮರದ ಎಲೆಗಳನ್ನು ಎಸೆಯುತ್ತಾರೆ. ಜಾತ್ರೆಯ ಎಂಟನೇ ದಿನದಂದು ನಡೆಸುವ ಈ ಆಚರಣೆಯು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಹಾಗೆಯೇ ಈ ಆಚರಣೆಯನ್ನು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳ ಅಡಿಯಲ್ಲಿ ನಡೆಸಲಾಗುತ್ತದೆ.
ಈ ಆಚರಣೆಯನ್ನು ಕಟೀಲಿನಲ್ಲಿ ಪ್ರಸಿದ್ಧವಾಗಿ ನಡೆಸಲಾಗುತ್ತಿದ್ದರೂ, ಮಂಗಳೂರು ಮತ್ತು ಉಡುಪಿಯಾದ್ಯಂತ ಹಲವಾರು ಇತರ ದೇವಾಲಯಗಳಲ್ಲಿ ವಾರ್ಷಿಕ ದೇವಾಲಯ ಜಾತ್ರೆಗಳ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಕೆಲವು ಪಂಡಿತರು ವಿವರಿಸಿದಂತೆ , ಕಟೀಲಿನಲ್ಲಿ ನಡೆಯುವ ಆಚರಣೆಯನ್ನು ಸ್ಥಳೀಯವಾಗಿ ತೂಟೆದಾರ ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಸುಮಾರು 15 ನಿಮಿಷಗಳ ಕಾಲ ಈ ಆಚರಣೆ ಇರುತ್ತದೆ. ಈ ಸಮಯದಲ್ಲಿ, ಭಾಗವಹಿಸುವವರು ಒಣಗಿದ ತೆಂಗಿನ ಮರದ ಎಲೆಗಳನ್ನು ಅಥವಾ ಎಣ್ಣೆಯಲ್ಲಿ ನೆನೆಸಿದ ಬಟ್ಟೆಯಿಂದ ಮಾಡಿದ ಸುಡುವ ಪಂಜುಗಳನ್ನು ದೇವಿಗೆ ಅರ್ಪಣೆಯಾಗಿ ಪರಸ್ಪರ ಎಸೆಯುತ್ತಾರೆ. ಈ ವರ್ಷ, ಈ ಕಾರ್ಯಕ್ರಮವು ಏಪ್ರಿಲ್ 20 ರಂದು ನಡೆಯಿತು. ಇದೀಗ ಇದೇ ವಿಡಿಯೋವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ದೇಣಿಗೆ ಹಣಕ್ಕಾಗಿ ಪುರೋಹಿತರ ನಡುವೆ ನಡೆದ ಗಲಾಟೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರೆಯ ಸಮಯದಲ್ಲಿ ನಡೆಸಲಾಗುವ ತೂಟೆದಾರ ಆಚರಣೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಸುಳ್ಳು ನಿರೂಪಣೆಯೊಂದಿಗೆ ಕೂಡಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಬೊಲಿವಿಯಾದ ಸಂಸತ್ತು ಭೂಕಂಪನದಿಂದ ಕುಸಿದಿದೆ ಎಂಬುದು ಸುಳ್ಳು

