ಸಾಮಾಜಿಕ ಜಾಲತಾಣದಲ್ಲಿ “ಮಂಕಿಪಾಕ್ಸ್ನ ಸೃಷ್ಟಿ ಮತ್ತು ಹರಡುವಿಕೆಯ ಹಿಂದೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೈವಾಡವಿದೆ” ಎಂದು ಆರೋಪಿಸಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದೆ. ಸದಾ ಆನ್ಲೈನ್ ದಾಳಿಗೆ ಗುರಿಯಾಗುತ್ತಿರುವ ಬಿಲ್ ಗೇಟ್ಸ್, mpox ವೈರಸ್ ಅನ್ನು ಸೃಷ್ಟಿಸಿದ್ದಾರೆ ಮತ್ತು ಈಗ ಅದಕ್ಕೆ ಲಸಿಕೆಯನ್ನು ಹೊರತರಲಿದ್ದಾರೆ, ಆ ಮೂಲಕ ಅವರು ತೀರಾ ಕೀಳ್ಮಟ್ಟಕ್ಕೆ ಇಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗಿದೆ. ಇದಲ್ಲದೇ,
ವಿಶ್ವ ಆರೋಗ್ಯ ಸಂಸ್ಥೆಯು ಬಿಲ್ ಗೇಟ್ಸ್ನ ಕೈಯಲ್ಲಿ ಕೇವಲ “ಗೊಂಬೆ” ಎಂದು ಹಲವರು ಆರೋಪಿಸಿದ್ದಾರೆ ಮತ್ತು ಅವರು mpoxನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವಂತೆ ಮಾಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ “ಬಿಲ್ ಗೇಟ್ಸ್ WHOನ ಅತಿ ದೊಡ್ಡ ಖಾಸಗಿ ದಾನಿಯಾಗಿದ್ದಾರೆ ಮತ್ತು ಅವರ ಲಸಿಕೆ ಪೇಟೆಂಟ್ಗಳಿಂದಾಗಿ ಪ್ರತಿ ಆರೋಗ್ಯ ಬಿಕ್ಕಟ್ಟಿನಿಂದಲೂ ಪ್ರಯೋಜನ ಪಡೆಯುತ್ತಾರೆ” ಎಂದು ಆರೋಪಿಸಿದ್ದಾರೆ. “ಬಿಲ್ ಗೇಟ್ಸ್ WHOಗೆ ಹಣ ನೀಡುತ್ತಾರೆ, ಅವರು Mpox ಸೃಷ್ಟಿ ಮಾಡಿದ್ದಾರೆ, ಮತ್ತು ಅವರ ಬಳಿಯೇ ಇದಕ್ಕೆ ಚಿಕಿತ್ಸೆ ಇದೆ! ಇದು ಎಷ್ಟು ಅನುಕೂಲಕರವಾಗಿದೆ. ಮತ್ತು ಇದರಿಂದ ಬಿಲ್ ಗೇಟ್ಸ್ ಶತಕೋಟಿಗಳನ್ನು ಗಳಿಸುತ್ತಾರೆ ಆದರೆ US ತೆರಿಗೆ ಪಾವತಿದಾರರು ಹೊಸ ಲಸಿಕೆಯನ್ನು ಇಡೀ ಜಗತ್ತಿಗೆ ನೀಡಲು ತೆರಿಗೆ ಪಾವತಿಸುತ್ತಾರೆ. ನೀವು ನೋಡುತ್ತಿರಿ…” ಎಂದು ಫೇಸ್ಬುಕ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ .

ಇದಲ್ಲದೇ “ಬಿಲ್ ಗೇಟ್ಸ್ ರಹಸ್ಯ ಭೂಗತವಾಗಿ ಕಿಮಿಕಲ್ ಟ್ರಯಲ್ಗಳನ್ನು ಮಾಡುತ್ತಿದ್ದಾರೆ ಮತ್ತು ಅದನ್ನು ಅಲ್ಲಿ ಕೆಲಸ ಮಾಡುವ ವಿಸಿಲ್ ಬ್ಲೋವರ್ ಒಬ್ಬರು ಬಹಿರಂಗಪಡಿಸಿದ್ದಾರೆ.
“ಪ್ರಾಜೆಕ್ಟ್ ಸ್ಕೈಪಾಕ್ಸ್” ಎಂದು ಕರೆಯಲ್ಪಡುವ ರಹಸ್ಯ ಕಾರ್ಯಾಚರಣೆಯನ್ನು ಬಹಿರಂಗಪಡಿಸಲು ಹಿರಿಯ ವಿಜ್ಞಾನಿಯೊಬ್ಬರು ಧೈರ್ಯದಿಂದ ಮೌನ ಮುರಿದಿದ್ದಾರೆ ಎಂದು ರಂಬಲ್ನಲ್ಲಿನ ಈ ವೀಡಿಯೊ ಹೇಳುತ್ತದೆ, ಇದು ಹೊಸ ಸಾಂಕ್ರಾಮಿಕ ಮತ್ತು ಹರಡುವಿಕೆಯನ್ನು ಉಂಟುಮಾಡುವ ದೃಷ್ಟಿಯಿಂದ ನಾಗರಿಕರ ಮೇಲೆ ಏರೋಸೋಲೈಸ್ಡ್ ಮಂಕಿಪಾಕ್ಸ್ ಅನ್ನು ಸಿಂಪಡಿಸುವ ದುರ್ಯೋಜನೆಯನ್ನು ಹೊಂದಿರುವ ಬಗ್ಗೆ ತಿಳಿಸುತ್ತದೆ. ಮತ್ತು ಈ ಹೊಸ ಸಂಕಷ್ಟದಿಂದ ಲಸಿಕೆಗಳನ್ನು ಮಾರಾಟ ಮಾಡಿ ಹಣಗಳಿಸುವ ಯೋಜನೆಯನ್ನು ಹೊಂದಿದೆ” ಎಂದು ಆರೋಪಿಸಿದೆ.
ಮತ್ತೊಂದು ಫೇಸ್ಬುಕ್ ಪೋಸ್ಟ್, ಗೇಟ್ಸ್ನನ್ನು ಆತನ ಅಪರಾಧಗಳಿಗಾಗಿ ಎಂದಾದರೂ ಜೈಲಿಗೆ ಕಳುಹಿಸಬಹುದೇ? ಇಲ್ಲ ಎಂದಿಗೂ ಇಲ್ಲ ಎಂಬುದು ಆಶ್ಚರ್ಯದಾಯಕ ಸತ್ಯ ಎಂದು ಆರೋಪಿಸಿದ್ದಾರೆ.

ಈ ಪಿತೂರಿಗಳಿಂದಾಗಿ ಕೆಲವರು ಲಸಿಕೆಯನ್ನು ವಿರೋಧಿಸಿ ರಂಗ ಪ್ರವೇಶಿಸಿದ್ದು ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಅದೇ ರೀತಿ ಗೇಟ್ಸ್ರನ್ನು ಗುರಿಯಾಗಿಸಿಕೊಂಡು ವೈರಸ್ನ ಹೊರಹೊಮ್ಮುವಿಕೆಯ ಹಿಂದೆ ಬಿಲ್ ಗೇಟ್ಸ್ ಪಾತ್ರವಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಫ್ಯಾಕ್ಟ್ಚೆಕ್
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮೇಲಿನ ಈ ಆರೋಪಗಳು ಆಧಾರರಹಿತವಾಗಿವೆ ಮತ್ತು ಸುಳ್ಳಿನಿಂದ ಕೂಡಿವೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪರಿಶೀಲಿಸಿದೆ.
mpox 1958ರಲ್ಲಿ ಮೊದಲ ಬಾರಿಗೆ ಪತ್ತೆ
mpox ಎಂಬುದು 1958ರಲ್ಲಿ ಡೆನ್ಮಾರ್ಕ್ನಲ್ಲಿ ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ ಮೊದಲ ಬಾರಿಗೆ ಪತ್ತೆಯಾದ ವೈರಸ್ ಆಗಿದೆ. ಗೇಟ್ಸ್ 1955ರ ಅಕ್ಟೋಬರ್ 28ರಂದು ಜನಿಸಿದರು. ಅಂದರೆ mpox ಪತ್ತೆಯಾದಾಗ ಬಿಲ್ ಗೇಟ್ಸ್ಗೆ ಕೇವಲ ಮೂರು ವರ್ಷ ವಯಸ್ಸು. 1970ರಲ್ಲಿ ಗೇಟ್ಸ್ರಿಗೆ 15 ವರ್ಷ ತುಂಬಿದಾಗ ಜನರಿಗೆ mpoxಸೋಂಕು ತಗುಲಿರುವ ಮೊದಲ ಪ್ರಕರಣವು ವರದಿಯಾಗಿದೆ. ಆದ್ದರಿಂದ ವೈರಸ್ ಅನ್ನು ಬಿಲ್ ಗೇಟ್ಸ್ ಸೃಷ್ಟಿಸಿದ್ದಾರೆ ಎಂದು ಹೇಳುವುದು ಸಮಂಜಸವಲ್ಲ.
ಬಿಲ್ ಗೇಟ್ಸ್ ವೈರಸ್ ಹರಡುತ್ತಿದ್ದಾರೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ‘ವಿಸಿಲ್ ಬ್ಲೋವರ್’ ಗೇಟ್ಸ್ರ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸುತ್ತಿವೆಯಾದರೂ, ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಗಳು ಇದರ ಬಗ್ಗೆ ವರದಿ ಮಾಡಿಲ್ಲ ಎಂಬುದು ವಾಸ್ತವ. ಒಂದು ವೇಳೆ, ಅಂತಹ ‘ವಿಸಿಲ್ಬ್ಲೋವರ್’ನ ವಾದದಲ್ಲಿ ಯಾವುದೇ ಸತ್ಯವಿದ್ದರೆ, ಅಥವಾ ಸಾಕ್ಷ್ಯಗಳಿದಿದ್ದರೆ ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ಸ್ಫೋಟಕ ಮಾಹಿತಿ ಎಂದು ಪ್ರಕಟಿಸಿ ವರದಿ ಮಾಡುತ್ತಿದ್ದವು.
ಒಟ್ಟಾರೆಯಾಗಿ ಹೇಳುವುದಾದರೆ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ mpox ವೈರಸ್ ಅನ್ನು ಸೃಷ್ಟಿಸಿದ್ದಾರೆ ಎಂಬ ಆರೋಪಗಳು ಆಧಾರರಹಿತವಾಗಿವೆ ಮತ್ತು ಸುಳ್ಳಿನಿಂದ ಕೂಡಿವೆ. ಚಾರಿತ್ರ್ಯ ಹನನ ನಡೆಸಲು ಇಂತಹ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂಬುದು ನಿಖರವಾಗಿ ತಿಳಿದು ಬರುತ್ತದೆ.
ಇದನ್ನು ಓದಿದ್ದೀರಾ? Fact Check | ಡಾ.ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.
