ಅಹಮದಾಬಾದ್ನಲ್ಲಿ ಜೂನ್ 12, 2025 ರಂದು ಏರ್ ಇಂಡಿಯಾ ವಿಮಾನ ಅಪಘಾತದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ಕುರಾನ್ನ ಒಂದು ಪ್ರತಿಯು ಬೆಂಕಿಯಿಂದ ಸುರಕ್ಷಿತವಾಗಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಈ ವೀಡಿಯೊವನ್ನು ಅಹಮದಾಬಾದ್ ವಿಮಾನ ಅಪಘಾತದ ಭಗ್ನಾವಶೇಷದಿಂದ ಕಂಡುಬಂದ ಕುರಾನ್ ಎಂದು ಕೆಲವರು ಹೇಳುತ್ತಿದ್ದಾರೆ, ಇದು “ಪವಾಡ” ಎಂದು ಚಿತ್ರಿಸಲಾಗಿದೆ. ಈ ತಪ್ಪು ಮಾಹಿತಿಯು ಜನರಲ್ಲಿ ಭಾವನಾತ್ಮಕ ಗೊಂದಲವನ್ನು ಸೃಷ್ಟಿಸಿದೆ.

ಈ ವೈರಲ್ ವೀಡಿಯೊ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ವೀಡಿಯೊವನ್ನು ಧಾರ್ಮಿಕ ಆಯಾಮದಲ್ಲಿ ಅತಿ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮಾರ್ಚ್ 8, 2025 ರಂದು ಇರಾಕಿ ಮಾಧ್ಯಮ ಪೋರ್ಟಲ್ ಕಿರ್ಕುಕ್ ಅಧಿಕೃತ ಸುದ್ದಿಯ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊವೊಂದು ಕಂಡು ಬಂದಿದೆ. ಈ ವಿಡಿಯೋ ಅಪ್ಲೋಡ್ ಮಾಡಲಾದ ದಿನಾಂಕವನ್ನು ಗಮನಿಸಿದಾಗ ಇದು ಅಹಮದಾಬಾದ್ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನ ವಿಡಿಯೋ ಎಂಬುದು ನಮಗೆ ಸ್ಪಷ್ಟವಾಗಿದೆ.

ಇನ್ನು ವೈರಲ್ ವಿಡಿಯೋ ಎಲ್ಲಿಯದ್ದು ಎಂಬುದು ನಮಗೆ ಯಾವುದೇ ಖಚಿತ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ. ಹೀಗಾಗಿ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಗೊಂಡ ನಂತರ ವಿಮಾನದ ಅವಶೇಷಗಳಲ್ಲಿ ಕುರಾನ್ ಪತ್ತೆಯಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಆದರೆ ಭಗವದ್ಗೀತೆಯೊಂದು ಪತ್ತೆಯಾಗಿರುವುದನ್ನು ಹೊರತು ಪಡಿಸಿ ಇನ್ಯಾವುದೇ ಮಾಹಿತಿಗಳಾಗಲಿ ಅಥವಾ ಅಧಿಕೃತ ವರದಿಗಳಾಗಲಿ ಕಂಡು ಬಂದಿಲ್ಲ. ಹೀಗಾಗಿ ವೈರಲ್ ವಿಡಿಯೋವನ್ನು ದಾರಿ ತಪ್ಪಿಸುವ ಉದ್ದೇಶದೊಂದಿಗೆ ಹಂಚಿಕೊಳ್ಳಲಾಗಿರುವುದು ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗೋಳಲ್ಲಿ ಹಾನಿಗೊಳಗಾಗದ ಕುರಾನ್ ಪುಸ್ತಕ ಲಭಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿದ್ದು, ಇದು ಹಳೆಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಇರಾನ್ ಮೇಲೆ ಇಸ್ರೇಲ್ ದಾಳಿಯ ವಿಡಿಯೋ ಎಂದು ಮೆಕ್ಸಿಕೋದ ಡೀಸೆಲ್ ಘಟಕದ ಅಗ್ನಿ ಅವಘಡದ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

