ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಎಕ್ಸ್ನಲ್ಲಿ, ಒಂದು ವೀಡಿಯೊ ವೈರಲ್ ಆಗಿದ್ದು, ಅದನ್ನು ಇರಾನ್ನ ತೈಲ ಸಂಸ್ಕರಣಾಗಾರದ ಮೇಲೆ ಇಸ್ರೇಲ್ನ ದಾಳಿಯ ದೃಶ್ಯ ಎಂದು ಹೇಳಲಾಗುತ್ತಿದೆ. ಈ ವೀಡಿಯೊದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಮತ್ತು ಹೊಗೆಯನ್ನು ತೋರಿಸಲಾಗಿದ್ದು, ಇದು ಜೂನ್ 13, 2025 ರಂದು ಇಸ್ರೇಲ್ನ ದಾಳಿಯ ಫಲಿತಾಂಶ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಸುದ್ದಿಯು ಜನರಲ್ಲಿ ಭಯ ಮತ್ತು ಗೊಂದಲವನ್ನು ಸೃಷ್ಟಿಸಿದೆ, ಇದು ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಾಗಿಸಲಿದೆ ಎಂದು ಹಲವರು ಹೇಳುತ್ತಿದ್ದಾರೆ.

ಈ ವೈರಲ್ ವೀಡಿಯೊ ಎಕ್ಸ್ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ಕೆಲವರು ಇದನ್ನು ಇರಾನ್ನ ಮೇಲೆ ಇಸ್ರೇಲ್ನ ಯಶಸ್ವಿ ದಾಳಿಯ ದೃಶ್ಯ ಎಂದು ಭಾವಿಸಿದ್ದಾರೆ, ಇನ್ನೂ ಕೆಲವರು ಇದು ಯುದ್ಧದ ಆರಂಭವನ್ನು ಸೂಚಿಸುತ್ತದೆ ಎಂದು ಊಹಿಸಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಮೇ 2025 ರ ಅನೇಕ ಪೋಸ್ಟ್ಗಳಲ್ಲಿ ನಾವು ಇದೇ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಹೀಗಾಗಿ ಈ ವೀಡಿಯೊ ಹಳೆಯದು ಮತ್ತು ಇಸ್ರೇಲ್ ಮತ್ತು ಇರಾನ್ ನಡುವಿನ ಪ್ರಸ್ತುತ ಸಂಘರ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂತು. ಈ ಪೋಸ್ಟ್ಗಳಲ್ಲಿ, ಈ ವೀಡಿಯೊವನ್ನು ಮೆಕ್ಸಿಕೋದ ಡೀಸೆಲ್ ಸ್ಥಾವರದಲ್ಲಿ ಬೆಂಕಿ ಎಂದು ವಿವರಿಸಲಾಗಿದೆ.
❗️Massive EXPLOSION at diesel plant in Cadereyta Jiménez, Mexico
Evacuation order in place and fire crews BATTLING the blaze pic.twitter.com/0YcjJEb4VM
— Avinash K S🇮🇳 (@AvinashKS14) May 22, 2025
ಈ ಪೋಸ್ಟ್ಗಳ ಆಧಾರದ ಮೇಲೆ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಅನೇಕ ಸುದ್ದಿ ವರದಿಗಳು ನಮಗೆ ಸಿಕ್ಕವು. ಸುದ್ದಿಯ ಪ್ರಕಾರ, ಮೇ 21 ರಂದು, ಮೆಕ್ಸಿಕೋದ ಕ್ಯಾಡೆರೈಟಾದಲ್ಲಿರುವ ಮಾರ್ವಿಕ್ ಡೀಸೆಲ್ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿತು. ಅದರಲ್ಲಿ 13 ದೊಡ್ಡ ಇಂಧನ ಟ್ಯಾಂಕ್ಗಳು ಸುಟ್ಟುಹೋದವು ಎಂಬ ಮಾಹಿತಿ ಲಭ್ಯವಾಗಿದೆ.
ಬಿಎನ್ಒ ನ್ಯೂಸ್ ವರದಿಯ ಪ್ರಕಾರ, ಮಾರ್ವಿಕ್ ಡೀಸೆಲ್ ಸ್ಥಾವರದಲ್ಲಿ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಇತರ 11 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಸ್ಫೋಟದಲ್ಲಿ 13 ದಾಸ್ತಾನು ವ್ಯವಸ್ಥೆ ಸುಟ್ಟುಹೋಗಿವೆ. ದೊಡ್ಡ ಪ್ರಮಾಣದ ಸುಡುವ ವಸ್ತುಗಳು ಇದ್ದ ಕಾರಣ, ಬೆಂಕಿ ವೇಗವಾಗಿ ಹರಡಿತು ಎಂಬ ಮಾಹಿತಿ ಇದರಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ ಮೇಲೆ ಇಸ್ರೇಲ್ ಭೀಕರ ದಾಳಿ ಎಂದು ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ 2025 ರ ಮೇ 21 ರಂದು ಮೆಕ್ಸಿಕೊದ ಡಿಸೆಲ್ ಘಟಕದಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದ್ದಾಗಿದೆ. ಈ ವಿಡಿಯೋವನ್ನು ಬಳಸಿಕೊಂಡು ಹಲವರು ಇದು ಇಸ್ರೇಲ್ ಮತ್ತು ಇರಾನ್ ಸಂಘರ್ಷದ್ದು ಎಂದು ಸುಳ್ಳು ಮಾಹಿತಿ ಹರಡಿದ್ದಾರೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಸೆಪ್ಟೆಂಬರ್ 30 ರ ನಂತರ ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳು ಲಭ್ಯವಿರುವುದಿಲ್ಲ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

