ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಭಾರತೀಯ ಸೇನಾ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಪಹಲ್ಗಾಮ್ನಲ್ಲಿ ನಡೆದ ದಾಳಿ ಭಯೋತ್ಪಾದಕ ದಾಳಿಯಲ್ಲ, ಆದರೆ ಅದು ‘ಪೂರ್ವ ಯೋಜಿತ’ ಎಂದು ಹೇಳುವುದನ್ನು ಕಾಣಬಹುದಾಗಿದೆ. ಈ ಮಾಹಿತಿಯನ್ನು ನೀಡುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಭಾರತೀಯ ಸೇನೆಯ ‘ಸೈನಿಕ’ ಅಶೋಕ್ ಕುಮಾರ್ ಎಂದು ಹಲವರು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿ ಕೂಡ ಭಾರತೀಯ ಸೇನಾ ಸಮವಸ್ತ್ರ ಧರಿಸಿರುವುದು ಕಂಡು ಬಂದಿದ್ದು, ಈತನೇ ಹೇಳಿಕೆಗಳು ಸ್ಪಷ್ಟವಾಗಿ ಕೇಳಿ ಬಂದಿದೆ. ಹೀಗಾಗಿ ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ಕುರಿತು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಭಾರತೀಯ ಸೇನಾ ಅಧಿಕಾರಿ ಎಂದು ಉಲ್ಲೇಖಿಸುವ ಯಾವುದೇ ವರದಿ ಕಂಡುಬಂದಿಲ್ಲ.ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಪ್ರಾತಿನಿಧಿಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದೆ ಎಂದು ಅಧಿಕೃತ ಮೂಲಗಳು ಮತ್ತು ಸುದ್ದಿ ವರದಿಗಳು ದೃಢಪಡಿಸಿವೆ

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ , ” ದಿ ರೆಸಿಸ್ಟೆನ್ಸ್ ಫ್ರಂಟ್ ಜನವರಿ 2023 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು.” ವೈರಲ್ ವೀಡಿಯೊದಲ್ಲಿ ಕಾಣುತ್ತಿರುವ ವ್ಯಕ್ತಿ ಧರಿಸಿರುವ ಸಮವಸ್ತ್ರವು ಹಳೆಯ ಸೇನಾ ಸಮವಸ್ತ್ರವಾಗಿದೆ. 2022 ರ ಸೇನಾ ದಿನದ ಪರೇಡ್ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಭಾರತೀಯ ಸೇನೆಯ ಸಮವಸ್ತ್ರವು ಈಗ ಬದಲಾಗಿದೆ.

ಇತರ ಹಲವು ಸುದ್ದಿ ವರದಿಗಳು ಭಾರತೀಯ ಸೇನೆಯ ಹೊಸ ಸಮವಸ್ತ್ರದ ಬಗ್ಗೆಯೂ ಉಲ್ಲೇಖಿಸುತ್ತವೆ. ET ವರದಿಯ ಪ್ರಕಾರ , ಸೇನೆಯು ಈ ಹೊಸ ಸಮವಸ್ತ್ರಕ್ಕಾಗಿ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ಗಳ ನಿಯಂತ್ರಕ ಜನರಲ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದೆ ಮತ್ತು ಶೀಘ್ರದಲ್ಲೇ ಈ ಸಮವಸ್ತ್ರಗಳಿಗೆ IPR ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆಯುವ ಭರವಸೆ ಇದೆ ಎಂದು ಉಲ್ಲೇಖಿಸಲಾಗಿದೆ.
The new combat uniform of the Indian Army was unveiled at the 'Army Day' parade, today. pic.twitter.com/2d1u8FwV9v
— ANI (@ANI) January 15, 2022
ವೈರಲ್ ವೀಡಿಯೊದಲ್ಲಿ ಹಲವಾರು ಕಟ್ಗಳು ಕಂಡು ಬಂದಿದೆ, ಈ ಮೂಲಕ ವೈರಲ್ ವಿಡಿಯೋ ಎಡಿಟೆಡ್ ಆಗಿದೆ ಎಂಬುದು ನಮಗೆ ಖಚಿತವಾಗಿದೆ. ಇನ್ನು ಈ ವಿಡಿಯೋ ಕುರಿತು ಕೆಲವು ಮಾಧ್ಯಮ ಸಂಸ್ಥೆಗಳು ಭಾರತೀಯ ಸೇನೆಯನ್ನು ಸಂಪರ್ಕಿಸಿದೆ ಈ ವೇಳೆ ಸೇನಾ ವಕ್ತಾರರು ವೈರಲ್ ವಿಡಿಯೋ “ನಕಲಿ” ಎಂದು ದೃಢಪಡಿಸಿದ್ದಾರೆ ಮತ್ತು ಅದರಲ್ಲಿ ಕಂಡುಬರುವ ವ್ಯಕ್ತಿ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಕೂಡ ಖಚಿತ ಪಡಿಸಿದ್ದಾರೆ. ಇನ್ನು ವೈರಲ್ ವಿಡಿಯೋವಿನ ಮೂಲ ವಿಡಿಯೋವನ್ನು @War_Analysts ಹೆಸರಿನ ಹ್ಯಾಂಡಲ್ನಿಂದ ಹಂಚಿಕೊಳ್ಳಲಾಗಿದೆ . ಆದರೆ ಈಗ ಈ ಅಕೌಂಟ್ ಅನ್ನು ಡಿಲೀಟ್ ಮಾಡಲಾಗಿದೆ. ಇನ್ನು ಈ ಖಾತೆಯಲ್ಲಿ ಪಾಕಿಸ್ತಾನದ ಪರವಾಗಿ ವೈರಲ್ ಆದ ಕೆಲವೊಂದು ಹ್ಯಾಶ್ಟ್ಯಾಗ್ಗಳನ್ನು ಬಳಸಿಕೊಳ್ಳಲಾಗಿದೆ. ಮೂಲ ವಿಡಿಯೋವನ್ನು ಹಂಚಿಕೊಂಡ ಕೆಲವೊಂದು ಪಾಕಿಸ್ತಾನಿ ಖಾತೆಗಳು ಎಕ್ಸ್ ಖಾತೆಯಿಂದ ಡಿಲೀಟ್ ಆಗಿದ್ದು, ಇವು ಬಹುತೇಕ ಪಾಕಿಸ್ತಾನಿ ಖಾತೆಗಳು ಎಂಬುದು ದೃಢಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ.. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಭಾರತೀಯ ಸೈನಿಕನೊಬ್ಬ ಭಾರತೀಯ ಸೇನಾ ಸಮಸವಸ್ತ್ರದೊಂದಿಗೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಪೂರ್ವ ನಿಯೋಜಿತ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಎಡಿಟೆಡ್ ಆಗಿದೆ. ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಗು ಭಾರತೀಯ ಸೇನೆಗು ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮೃತ ನೌಕಾ ಅಧಿಕಾರಿ ವಿನಯ್ ನರ್ವಾಲ್ ಮತ್ತು ಪತ್ನಿಯ ಕೊನೆಯ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

