ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್ಗಳು ವೈರಲ್ ಆಗುತ್ತಿವೆ. ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಶ್ವೇತಭವನದಲ್ಲಿ ಪಂಡಿತ್ ಹರೀಶ್ ಬ್ರಹ್ಮಭಟ್ರವರು ವೇದ ಮಂತ್ರವನ್ನು ಪಠಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರ ಪಂಡಿತ್ ಅನಿಲ್ ರೈ ಅವರು ನವೆಂಬರ್ 7ರಂದು ಟ್ರಂಪ್ ಜೊತೆಗೆ ವ್ಯಕ್ತಿಯೊಬ್ಬ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು, “ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ, ಪಂಡಿತ್ ಹರೀಶ್ ಬ್ರಹ್ಮಭಟ್ಜೀ ಶ್ವೇತಭವನದಲ್ಲಿ ವೇದ ಮಂತ್ರವನ್ನು ಪಠಿಸುತ್ತಿದ್ದಾರೆ. ಜೈ ದಾದಾ ಪರಶುರಾಮ್” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್ಚೆಕ್
ಡೊನಾಲ್ಡ್ ಟ್ರಂಪ್ ಮತ್ತು ಪಂಡಿತ್ ಹರೀಶ್ ಬ್ರಹ್ಮಭಟ್ರವರ ಈ ಫೋಟೋ 2020ರ ಮೇ ತಿಂಗಳಿನದ್ದು; ಅಂದರೆ ನಾಲ್ಕು ವರ್ಷ ಹಳೆಯದು ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪತ್ತೆ ಹಚ್ಚಿದೆ. ಈ ಫೋಟೋವನ್ನು ರಾಷ್ಟ್ರೀಯ ಪ್ರಾರ್ಥನಾ ದಿನದಂದು ಧಾರ್ಮಿಕ ಮುಖಂಡರು ಶ್ವೇತಭವನದಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ತೆಗೆಯಲಾಗಿದೆ. ಈ ವೇಳೆ, ಡೊನಾಲ್ಡ್ ಟ್ರಂಪ್ ಅಮೇರಿಕಾದ ಅಧ್ಯಕ್ಷರಾಗಿದ್ದರು.
ಇತ್ತೀಚಿನ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ. ಆದರೆ, ಅವರು 2025ರ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ತದನಂತರ ಅಧಿಕೃತವಾಗಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ವೈರಲ್ ಫೋಟೋದ ಕುರಿತು ಪರಿಶೀಲನೆ ನಡೆಸಲು ಗೂಗಲ್ ಲೆನ್ಸ್ ಸಹಾಯದಿಂದ ಚಿತ್ರವನ್ನು ಹುಡುಕಾಟ ನಡೆಸಿದಾಗ ಈ ಫೋಟೋವನ್ನು 2020 ಮೇ 7ರಂದು Alamy.com ಗೆ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. “2020ರ ಮೇ 7ರಂದು ಶ್ವೇತಭವನದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನದಂದು BAPS ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ಅರ್ಚಕ ಹರೀಶ್ ಬ್ರಹ್ಮಭಟ್ರವರು ಪ್ರಾರ್ಥನೆ ಸಲ್ಲಿಸುತ್ತಿರುವುದು ಮತ್ತು ಈ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳನ್ನು ಆಲಿಸುತ್ತಿರುವಾಗ ತೆಗೆದ ಚಿತ್ರ” ಎಂದು ಫೋಟೋದ ವಿವರಣೆಯಲ್ಲಿ ಬರೆಯಲಾಗಿದೆ.

ಇದರಿಂದ ವೈರಲ್ ಆದ ಚಿತ್ರ ನಾಲ್ಕು ವರ್ಷಕ್ಕಿಂತ ಹಳೆಯದು ಎಂಬುದು ಸ್ಪಷ್ಟವಾಗಿದೆ. ಇದು ಇತ್ತೀಚೆಗೆ ತೆಗೆಯಲಾದ ಚಿತ್ರ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಡೊನಾಲ್ಡ್ ಟ್ರಂಪ್ ಅವರ X ಹ್ಯಾಂಡಲ್ನಲ್ಲಿಯೂ 2020 ಮೇ 7ರಂದು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ರಾಷ್ಟ್ರೀಯ ಪ್ರಾರ್ಥನಾ ದಿನ ಎಂದು ಗೊತ್ತುಪಡಿಸಿದ್ದರು.
As you know, I designated this day to be a National Day of Prayer. As our Nation heals, our Spirit has never been Stronger! https://t.co/WWhvzsSDWq
— Donald J. Trump (@realDonaldTrump) May 7, 2020
ತದನಂತರ ಮೇ 8 ರಂದು ರಾಷ್ಟ್ರೀಯ ಪ್ರಾರ್ಥನಾ ದಿನದ ಭಾಗವಾಗಿ ನಡೆದ ವಿಡಿಯೋ ಕ್ಲಿಪ್ ಅನ್ನು ಡೊನಾಲ್ಡ್ ಟ್ರಂಪ್ ಅವರ X ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ. ಈವಿಡಿಯೋದಲ್ಲಿ
ಅರ್ಚಕ ಹರೀಶ್ ಬ್ರಹ್ಮಭಟ್ ಅವರಲ್ಲದೆ, ಇತರ ಧಾರ್ಮಿಕ ಗುರುಗಳೂ ಭಾಗಿಯಾಗಿದ್ದಾರೆ.
https://t.co/gQf2WFmQiC pic.twitter.com/6ZqJ8AAlRc
— Donald J. Trump (@realDonaldTrump) May 7, 2020
ಈ ಕಾರ್ಯಕ್ರಮವನ್ನು 2020 ಮೇ 8ರಂದು ವಾಷಿಂಗ್ಟನ್ ಪೋಸ್ಟ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಿದೆ.
2024 ನವೆಂಬರ್ 7ರಂದು ಬಿಬಿಸಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ 78ರ ಹರೆಯದ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಅವರು ಚುನಾಯಿತ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಹುದ್ದೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ 2025ರ ಜನವರಿ 20ರಂದು ನಡೆಯಲಿದ್ದು, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಟ್ರಂಪ್ ಅಧಿಕೃತವಾಗಿ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮುಂದೆ ಅರ್ಚಕ ಹರೀಶ್ ಬ್ರಹ್ಮಭಟ್ ಅವರು ವೇದ ಮಂತ್ರವನ್ನು ಪಠಿಸುತ್ತಿರುವ ಚಿತ್ರವು ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು. 2020ರ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಪ್ರಾರ್ಥನಾ ದಿನದ ಭಾಗವಾಗಿ ಇತರ ಧಾರ್ಮಿಕ ಮುಖಂಡರೂ ಶ್ವೇತಭವನದಲ್ಲಿ ಪ್ರಾರ್ಥಿಸಿದ್ದರು. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಟ್ರಂಪ್ರವರ ಪದಗ್ರಹಣ ಕಾರ್ಯಕ್ರಮವು 2025ರ ಜನವರಿಯಲ್ಲಿ ನಡೆಯಲಿದೆ.
ಇದನ್ನು ಓದಿದ್ದೀರಾ? Fact Check | ಇಡೀ ಪಾಕಿಸ್ತಾನದ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ವಕ್ಫ್ ಆಸ್ತಿಗಳು ಭಾರತದಲ್ಲಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

