ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊರ್ವನಿಗೆ ಒಬ್ಬ ಪೊಲೀಸ್ ಅಧಿಕಾರಿ ಬೆಲ್ಟ್ನಲ್ಲಿ ಮನಬಂದಂತೆ ಹೊಡೆಯುತ್ತಿರುವುದು ಕಾಣಬಹುದು. ಪೊಲೀಸ್ ಅಧಿಕಾರಿ ಹೊಡೆಯುವಾಗ ಇನ್ನೂ ಇಬ್ಬರು ವ್ಯಕ್ತಿಗಳು ಸಂತ್ರಸ್ತನನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ. ಇದು ಉತ್ತರ ಕನ್ನಡದಲ್ಲಿ ನಡೆದ ಘಟನೆ ಎಂದು ಬರೆದುಕೊಂಡು ಸಾಕಷ್ಟು ಮಂದಿ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು ” ಇದು ರಾಜ್ಯ ಸರ್ಕಾರದ ಆದೇಶವೇ ? ರಾಜ್ಯದ ಗೃಹ ಸಚಿವರು ತಾವೇ ಉತ್ತರಿಸಬೇಕು ರಾಜ್ಯದ ಜನತೆ ತಿಳಿಯಬೇಕು ಇದಕ್ಕೆಲ್ಲ ಅವಕಾಶ ಇದೆಯಾ ನಮ್ಮ ಪೊಲೀಸ್ ಠಾಣೆಗಳಲ್ಲಿ ಅನ್ನುವುದು ” ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ಇನ್ನೂ ಹಲವು ಪೋಸ್ಟ್ಗಳು ಇದೇ ರೀತಿಯ ನಿರೂಪಣೆಯೊಂದಿಗೆ ನಮಗೆ ಕಂಡು ಬಂದಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ನಾವು ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಏಪ್ರಿಲ್ 25 ರಂದು ನವ ಭಾರತ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ‘‘ಉತ್ತರ ಪ್ರದೇಶದ ಜೌನ್ಪುರದ ಮುಂಗಾರಬಾದ್ಶಾಪುರ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವೊಂದು ಬೆಳಕಿಗೆ ಬಂದಿದೆ. ಆ ಪ್ರದೇಶದ ಯುವಕನೊಬ್ಬ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದ. ಈ ವೇಳೆ ಪೊಲೀಸರು ಈ ಕೃತ್ಯ ಎಸಗಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಖಚಿತತೆಗಾಗಿ ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಏಪ್ರಿಲ್ 24 ರಂದು ಈಟಿವಿ ಭಾರತ್ ಪ್ರಕಟಿಸಿದ ವರದಿಯಲ್ಲಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಗ್ರ್ಯಾಬ್ ಇದೆ. ಇದರಲ್ಲಿ ಕೂಡ ಈ ಘಟನೆ ಉತ್ತರ ಪ್ರದೇಶದ ಜೌನ್ಪುರದ ಮುಂಗಾರಬಾದ್ಶಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ಬರೆಯಲಾಗಿದೆ. ಅಲ್ಲದೆ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿನೋದ್ ಮಿಶ್ರಾ ಸೇರಿದಂತೆ 6 ಪೊಲೀಸರನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ. ದಿಲೀಪ್ ಕುಮಾರ್ ಸಿಂಗ್ ಅವರನ್ನು ಹೊಸ ಪೊಲೀಸ್ ಠಾಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಈ ಘಟನೆ ಉತ್ತರ ಪ್ರದೇಶದ್ದು ಎಂಬುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಉತ್ತರ ಕನ್ನಡದ ಪೊಲೀಸರು ಯುವಕನೊಬ್ಬನನ್ನು ಕಟ್ಟಿ ಬೆಲ್ಟ್ನಿಂದ ಹಲ್ಲೆ ನಡೆಸಿದ್ದಾರೆ ಎಂಬ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ಆಗುತ್ತಿರುವ ವಿಡಿಯೋ ಉತ್ತರ ಕನ್ನಡದಲ್ಲ ಬದಲಿಗೆ ಅದು ಉತ್ತರಪ್ರದೇಶಕ್ಕೆ ಸೇರಿದೆ. ಹಾಗಾಗಿ ಸುಳ್ಳು ಮಾಹಿತಯಿಂದ ಕೂಡಿರುವ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಆಪರೇಷನ್ ಸಿಂಧೂರ್ ವೇಳೆ ಪಾಕ್ ಡ್ರೋನ್ಗಳು ಭಾರತದೊಳಗೆ 700 ಕಿ.ಮೀ. ಪ್ರಯಾಣಿಸಿವೆ ಎಂಬುದು ಸುಳ್ಳು

